
ನಟ ಜಗ್ಗೇಶ್ (Jaggesh) ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಖುಷಿಯ ಸುದ್ದಿಗಳು ಕೇಳಿಬರುತ್ತಿವೆ. ಬಿಜೆಪಿಯಿಂದ ರಾಜ್ಯ ಸಭಾ ಅಭ್ಯರ್ಥಿಯಾಗಿ ಅವರಿಗೆ ಟಿಕೆಟ್ ಸಿಕ್ಕಿದೆ. ಆ ಖುಷಿಯನ್ನು ಸಂಭ್ರಮಿಸುತ್ತಿರುವಾಗಲೇ ಹೊಸದೊಂದು ನ್ಯೂಸ್ ಹೊರಬಿದ್ದೆ. ಜಗ್ಗೇಶ್ ನಟಿಸಿರುವ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಬಿಡುಗಡೆ ದಿನಾಂಕ (Raghavendra Stores Release Date) ಘೋಷಣೆ ಆಗಿದೆ. ಆಗಸ್ಟ್ 5ರಂದು ಈ ಚಿತ್ರ ರಿಲೀಸ್ ಆಗಲಿದೆ. ಆ ಕುರಿತು ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಹಲವು ಕಾರಣಗಳಿಂದಾಗಿ ಗಮನ ಸೆಳೆಯುತ್ತಿರುವ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ (Raghavendra Stores Movie) ಮೇಲೆ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವರಮಹಾ ಲಕ್ಷ್ಮೀ ಹಬ್ಬದ ಪ್ರಯುಕ್ತ ಈ ಚಿತ್ರ ರಿಲೀಸ್ ಆಗಲಿರುವುದು ಇನ್ನೊಂದು ವಿಶೇಷ.
ಕೆಲವೇ ದಿನಗಳ ಹಿಂದೆ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಟೀಸರ್ ರಿಲೀಸ್ ಆಗಿ ಮಿಲಿಯನ್ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. ಅದರಲ್ಲಿ ಜಗ್ಗೇಶ್ ಅವರ ಮ್ಯಾನರಿಸಂ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಪೂರ್ತಿ ಸಿನಿಮಾ ನೋಡಲು ಸಿನಿಪ್ರಿಯರು ಕಾದಿದ್ದಾರೆ. ಚಿತ್ರಮಂದಿರದಲ್ಲಿ ಭರಪೂರ ನಗುವಿನ ಕಚಗುಳಿ ಇಡಲು ಈ ಚಿತ್ರ ಸಿದ್ಧವಾಗಿದೆ. ಅಜನೀಶ್ ಬಿ. ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
‘ಕೆಜಿಎಫ್: ಚಾಪ್ಟರ್ 2’ ರೀತಿಯ ಹೈ ಬಜೆಟ್ ಸಿನಿಮಾ ನಿರ್ಮಾಣ ಮಾಡಿರುವ ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ನಿಂದ ಬರುತ್ತಿರುವ ಡಿಫರೆಂಟ್ ಸಿನಿಮಾ ‘ರಾಘವೇಂದ್ರ ಸ್ಟೋರ್ಸ್’. ಅದೇ ರೀತಿ ನಿರ್ದೇಶಕ ಸಂತೋಷ್ ಆನಂದ್ ರಾವ್ ಅವರಿಗೂ ಇದು ಭಿನ್ನ ಪ್ರಯತ್ನ. ಈವರೆಗೂ ಮಾಸ್ ಫ್ಯಾಮಿಲಿ ಎಂಟರ್ಟೇನರ್ ಸಿನಿಮಾ ಮಾಡಿ ಸೈ ಎನಿಸಿಕೊಂಡ ಅವರು ಈ ಬಾರಿ ಕಾಮಿಡಿ ಪ್ರಯತ್ನಿಸಿದ್ದಾರೆ. ಇವರೆಲ್ಲರ ಕಾಂಬಿನೇಷನ್ನಲ್ಲಿ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯುವ ಕೌತುಕ ದಿನದಿನಕ್ಕೂ ಹೆಚ್ಚುತ್ತಿದೆ.
‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್ ಮೂಲಕ ಅನೇಕ ಚಿತ್ರಗಳು ನಿರ್ಮಾಣ ಆಗುತ್ತಿವೆ. ಇತ್ತೀಚೆಗಷ್ಟೇ ‘ಬಘೀರ’ ಸಿನಿಮಾದ ಮುಹೂರ್ತ ನೆರವೇರಿಸಲಾಗಿದೆ. ಪ್ರಭಾಸ್ ನಟಿಸುತ್ತಿರುವ ‘ಸಲಾರ್’ ಸಿನಿಮಾದ ಕೆಲಸಗಳು ಕೂಡ ಭರದಿಂದ ಸಾಗಿವೆ. ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರ ಕೂಡ ಕುತೂಹಲ ಮೂಡಿಸಿದೆ. ಹೀಗೆ ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳನ್ನು ಮಾಡುತ್ತಿರುವ ಈ ಪ್ರತಿಷ್ಠಿತ ಸಂಸ್ಥೆಯಿಂದ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ ಮೂಡಿಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Wed, 1 June 22