ಸಾವು ಸಂಭವಿಸಿದ್ದು ಕಾಂತಾರ ಚಿತ್ರೀಕರಣದ ವೇಳೆ ಅಲ್ಲ: ಹೊಂಬಾಳೆ ಫಿಲ್ಮ್ಸ್​ ಸ್ಪಷ್ಟನೆ

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಜೂನಿಯರ್ ಆರ್ಟಿಸ್ಟ್ ನಿಧನಕ್ಕೆ ಸಂಬಂಧಿಸಿದಂತೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಕಡೆಯಿಂದ ಪತ್ರದ ಮೂಲಕ ಸ್ಪಷ್ಟನೆ ನೀಡಲಾಗಿದೆ. ಕಪಿಲ್ ಅವರ ನಿಧನಕ್ಕೂ ಚಿತ್ರತಂಡಕ್ಕೂ ಸಂಬಂಧ ಕಲ್ಪಿಸಬಾರದು ಎಂದು ನಿರ್ಮಾಪಕರು ಹೇಳಿದ್ದಾರೆ.

ಸಾವು ಸಂಭವಿಸಿದ್ದು ಕಾಂತಾರ ಚಿತ್ರೀಕರಣದ ವೇಳೆ ಅಲ್ಲ: ಹೊಂಬಾಳೆ ಫಿಲ್ಮ್ಸ್​ ಸ್ಪಷ್ಟನೆ
Rishab Shetty

Updated on: May 08, 2025 | 9:23 PM

ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಎಂಬುವವರ ನಿಧನದ ಬಗ್ಗೆ ಒಂದಷ್ಟು ಸುದ್ದಿಗಳು ಹರಡಿವೆ. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕಪಿಲ್ ನಿಧರಾದರು ಎಂದು ಕೆಲವೆಡೆ ವರದಿ ಆಯಿತು. ಈ ಘಟನೆಗೆ ಸಂಬಂಧಿಸಿದಂತೆ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ಸ್ಪಷ್ಟನೆ ನೀಡಿದೆ. ಕಪಿಲ್ ನಿಧನರಾದ ದಿನ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣವೇ ನಡೆದಿಲ್ಲ ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ.

‘ಎಂ.ಎಫ್. ಕಪಿಲ್ ಅವರ ನಿಧನಕ್ಕೆ ನಮ್ಮ ಆಗಾದವಾದ ಸಂತಾಪಗಳು. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮೆಲ್ಲರ ಸಹಾನುಭೂತಿ ಅವರೊಂದಿಗಿದೆ. ಈ ಹಿನ್ನೆಲೆಯಲ್ಲಿ, ಈ ಘಟನೆ ಕಾಂತಾರ ಚಿತ್ರೀಕರಣದ ಸ್ಥಳದಲ್ಲಿ ಸಂಭವಿಸಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ’ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ರಿಷಬ್ ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾದ ಪೋಸ್ಟರ್ ಬಿಡುಗಡೆ
ರಿಷಬ್ ಶೆಟ್ಟಿ ಮೊದಲ ಹೆಸರೇನು? ನಾಮ ಬದಲಿಸಿಕೊಳ್ಳಲು ಕಾರಣವಾಯಿತು ಆ ಘಟನೆ

‘ಆ ದಿನ ಯಾವುದೇ ಚಿತ್ರೀಕರಣ ನಿಗದಿಯಾಗಿರಲಿಲ್ಲ ಮತ್ತು ಈ ಘಟನೆ ಅವರ ವೈಯಕ್ತಿಕ ಕಾರ್ಯಕ್ರಮದಲ್ಲಿ, ಚಲನಚಿತ್ರ ಸಂಬಂಧಿತ ಚಟುವಟಿಕೆಗಳ ವ್ಯಾಪ್ತಿಯ ಹೊರಗೆ ಸಂಭವಿಸಿದೆ. ದಯವಿಟ್ಟು ಈ ಘಟನೆಯನ್ನು ಕಾಂತಾರ ಚಿತ್ರ ಅಥವಾ ಅದರ ಸಿಬ್ಬಂದಿಯೊಂದಿಗೆ ಯಾವುದೇ ಸಂಬಂಧವನ್ನು ಕಲ್ಪಿಸಬಾರದು ಎಂದು ನಾವು ವಿನಂತಿಸುತ್ತೇವೆ’ ಎಂದು ಪತ್ರದ ಮೂಲಕ ‘ಹೊಂಬಾಳೆ ಫಿಲ್ಸ್ಮ್’ ಸ್ಪಷ್ಟನೆ ನೀಡಿದೆ.

ಮೇ 6ರಂದು ಕಪಿಲ್ ನಿಧನರಾದರು. ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ ಈ ಘಟನೆ ನಡೆಯಿತು. ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಕಪಿಲ್ ಅವರು ತಮ್ಮ ತಂಡದವರ ಜತೆ ಈಜಲು ತೆರಳಿದ್ದರು. ನೀರಿನ ಆಳ ತಿಳಿಯದೇ ಅವರು ನದಿಗೆ ಇಳಿದರು. ಆ ವೇಳೆ ಅವರು ಮುಳುಗಿ ಸಾವಿಗೀಡಾದರು.

ಇದನ್ನೂ ಓದಿ: 1.3 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿಸಿದ ರಿಷಬ್ ಶೆಟ್ಟಿ; ಫೋಟೋಸ್ ನೋಡಿ

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿಯೇ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಅವರು ನಿಧನರಾಗಿರಬಹುದು ಎಂದು ಹಲವರು ಊಹಿಸಿದ್ದರು. ಆದರೆ ಈಗ ನಿರ್ಮಾಪಕರ ಕಡೆಯಿಂದ ಅದಕ್ಕೆ ಅಧಿಕೃತ ಸ್ಪಷ್ಟನೆ ಸಿಕ್ಕಿದೆ. ಬೃಹತ್ ಬಜೆಟ್​​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.