ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ನಟ ಜಗ್ಗೇಶ್​-ಪರಿಮಳಾ ಮದುವೆಗೆ ಈಗ 38 ವರ್ಷ; ಇಲ್ಲಿದೆ ಅಚ್ಚರಿಯ ಸ್ಟೋರಿ

| Updated By: ರಾಜೇಶ್ ದುಗ್ಗುಮನೆ

Updated on: Mar 22, 2022 | 3:12 PM

ಜಗ್ಗೇಶ್​ ಮತ್ತು ಪರಿಮಳಾ ಅವರದ್ದು ಲವ್​ ಮ್ಯಾರೇಜ್​. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಜಗ್ಗೇಶ್ ಪ್ರೀತಿಯಲ್ಲಿ ಬಿದ್ದಿದ್ದರು. ಆಗ ಪರಿಮಳಾ ಅವರಿಗೆ ಕೇವಲ 14 ವರ್ಷ. ಜಗ್ಗೇಶ್​ ಅವರಿಗೆ 19ರ ಪ್ರಾಯ.

ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ನಟ ಜಗ್ಗೇಶ್​-ಪರಿಮಳಾ ಮದುವೆಗೆ ಈಗ 38 ವರ್ಷ; ಇಲ್ಲಿದೆ ಅಚ್ಚರಿಯ ಸ್ಟೋರಿ
ಜಗ್ಗೇಶ್​-ಪರಿಮಳಾ
Follow us on

ನಟ ಜಗ್ಗೇಶ್​ (Jaggesh) ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ರಿಯಲ್​ ಲೈಫ್​ ಘಟನೆಗಳು ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲ. ಅದರಲ್ಲೂ ಪರಿಮಳಾ (Parimala Jaggesh) ಜೊತೆಗಿನ ಅವರ ಲವ್​ಸ್ಟೋರಿ ಸಖತ್​ ಸಿನಿಮೀಯವಾಗಿದೆ. ಅದು ಸುಪ್ರೀಂ ಕೋರ್ಟ್​ ಮೆಟ್ಟಿಲು ಕೂಡ ಏರಿತ್ತು. ಈ ವಿಚಾರದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಈಗ ಜಗ್ಗೇಶ್​ ಮತ್ತು ಪರಿಮಳಾ ದಾಂಪತ್ಯ (Jaggesh-Parimala Wedding Anniversery) ಜೀವನಕ್ಕೆ 38ರ ವಸಂತ. ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಈ ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಜಗ್ಗೇಶ್​ ಅವರು ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್​ ಮತ್ತು ಪರಿಮಳಾ ಅವರದ್ದು ಲವ್​ ಮ್ಯಾರೇಜ್​. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಜಗ್ಗೇಶ್ ಪ್ರೀತಿಯಲ್ಲಿ ಬಿದ್ದಿದ್ದರು. ಆಗ ಪರಿಮಳಾ ಅವರಿಗೆ ಕೇವಲ 14 ವರ್ಷ. ಜಗ್ಗೇಶ್​ ಅವರಿಗೆ 19ರ ಪ್ರಾಯ. ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ 1984ರ ಮಾ.22ರಂದು ಜಗ್ಗೇಶ್​ ಮತ್ತು ಪರಿಮಳಾ ರಿಜಿಸ್ಟರ್​ ಮ್ಯಾರೇಜ್​ ಆದರು. ಆದರೆ, ಇದಕ್ಕೆ ಪರಿಮಳಾ ಕುಟುಂಬದವರಿಂದಲೇ ಅಡ್ಡಿ ಎದುರಾಯಿತು.

ಮದುವೆಯಾದ ಮೂರನೇ ದಿನವೇ ಪರಿಮಳಾ ತಂದೆ ಬಂದು ಪರಿಮಳಾರನ್ನು ಕರೆದುಕೊಂಡು ಹೋದರು. ನಂತರ ಒಂದೂವರೆ ವರ್ಷ ಜಗ್ಗೇಶ್​ ಹಾಗೂ ಪರಿಮಳಾ ಇಬ್ಬರ ನಡುವೆ ಸಂಪರ್ಕ ಇರಲಿಲ್ಲ. ಬಳಿಕ ಬೆಂಗಳೂರಿನಿಂದ ಮದ್ರಾಸ್​ಗೆ ತೆರಳಿದ ಜಗ್ಗೇಶ್​ ಅವರು ಮಡದಿಯನ್ನು ಕರೆದುಕೊಂದು ಬಂದೇ ಬಿಟ್ಟರು. ಆಗ ‘ಚಿತ್ರನಟನಿಂದ ಹುಡುಗಿಯ ಕಿಡ್ನಾಪ್​’ ಎಂದು ಸುದ್ದಿ ಪ್ರಕಟ ಆಯಿತು. ಈ ಅಪಹರಣದ ಕಿರಿಕ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು! ಆದರೆ ಅಲ್ಲಿ ಜಗ್ಗೇಶ್​-ಪರಿಮಳಾ ಪ್ರೀತಿಗೆ ಜಯ ಸಿಕ್ಕಿತು.

ಮದುವೆ ನಂತರವೂ ಜಗ್ಗೇಶ್​ ಮತ್ತು ಪರಿಮಳಾ ತುಂಬ ಕಷ್ಟದ ಜೀವನ ನಡೆಸಿದರು. ಚಿತ್ರರಂಗದಲ್ಲಿ ಜಗ್ಗೇಶ್​ ಯಶಸ್ಸು ಕಾಣುತ್ತಿದ್ದಂತೆಯೇ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಅನೇಕ ಏಳು-ಬೀಳುಗಳನ್ನು ದಾಟಿಕೊಂಡು ಈ ಜೋಡಿ ಇಲ್ಲಿಯವರೆಗೂ ಬಂದಿದೆ. 38ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶೇಷ ಪೋಸ್ಟ್ ಒಂದನ್ನು ಜಗ್ಗೇಶ್​ ಹಂಚಿಕೊಂಡಿದ್ದಾರೆ.

‘ಇಂದು ಪರಿಮಳನಿಗೆ ತಾಳಿ ಕಟ್ಟಿ 38ನೆ ವರ್ಷ. ಪರಿಮಳಚಾರ್ಯರು, ‘ಗುರುರಾಜ’, ‘ಯತಿರಾಜ’ ರಾಯರ ಸಂಬಂಧಿತ ನಾಮಾಂಕಿತ. ‘ಅರ್ಜುನ’ ಕೃಷ್ಣನ ಪ್ರಿಯ ಸಖ. ರಾಯರು ಕೃಷ್ಣನ ಪ್ರಿಯ ಸಖ. ಇಷ್ಟು ಹೆಸರನ್ನು ದಿನವೂ ಬಳಸಲು ರಾಯರು ನನ್ನ ಬದುಕಿಗೆ ನೀಡಿದ ದೇಣಿಗೆ. ಪರಿಮಳ ಮಡದಿ, ಗುರುರಾಜ ಯತಿರಾಜ ಮಕ್ಕಳು, ಅರ್ಜುನ ಮೊಮ್ಮಗ. ಶುಭ ಮಂಗಳವಾರ’ ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್.

ಇದನ್ನೂ ಓದಿ: ‘ಎದ್ದೇಳು ಮಂಜುನಾಥ 2’ ಚಿತ್ರದಲ್ಲಿ ಜಗ್ಗೇಶ್​ ಇರಲ್ಲ; ಹಾಗಾದರೆ ಈ ಸಿನಿಮಾದ ಹೀರೋ ಯಾರು?

ಜಗ್ಗೇಶ್​ ಜನ್ಮದಿನ: ಪುನೀತ್​ ವಿಶ್​ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್​; ಭಾವುಕರಾದ ‘ನವರಸ ನಾಯಕ’