TV9 Digital Live: ದರ್ಶನ್-ಜಗ್ಗೇಶ್ ಫ್ಯಾನ್ಸ್ ವಾರ್ ಬಗ್ಗೆ ಸಂವಾದದಲ್ಲಿ ಕೇಳಿಬಂದಿದ್ದೇನು?
ರಾಜ್ಕುಮಾರ್ ಕಾಲದಲ್ಲಿ ನನಗೂ, ಅಭಿಮಾನಿ ಸಂಘಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೆ ಕೊಡುವಂತ ಸನ್ನಿವೇಶ ನಿರ್ಮಾಣವಾಗಿತ್ತು. ರಾಜ್ಕುಮಾರ್, ವಿಷ್ಣುವರ್ಧನ್ ಚೆನ್ನಾಗಿದ್ರು. ಆದರೆ, ಅಭಿಮಾನಿಗಳು ಮಧ್ಯೆ ಬಂದು ಸಮಸ್ಯೆ ಉಂಟಾಗಿತ್ತು. ಅಂಥಾ ಘಟನಾವಳಿಗಳಿಂದ ನಾವು ಪಾಠ ಕಲಿಯಬೇಕು.
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಾದ ವಿವಾದ ದಿನೇದಿನೇ ಹೊಸ ರೂಪ ಪಡೆಯುತ್ತಿದೆ. ಒಂದು ಆಡಿಯೊ ಕ್ಲಿಪ್ ಮೂಲಕ ಆರಂಭವಾದ ವಿವಾದ, ದರ್ಶನ್ ಅಭಿಮಾನಿಗಳು ಎನಿಸಿಕೊಂಡವರು ಜಗ್ಗೇಶ್ಗೆ ಮುತ್ತಿಗೆ ಹಾಕಿ ಕ್ಷ ಕೇಳುವಂತೆ ಒತ್ತಾಯ ಮಾಡುವವರೆಗೂ ಮುಂದುವರಿಯಿತು. ಜಗ್ಗೇಶ್ ಮಾತನಾಡಿದ್ದು ನಿಜವೋ ಸುಳ್ಳೋ, ಆದರೆ ಅಭಿಮಾನಿಗಳು ಎಂದುಕೊಂಡವರು ಹಾಗೆ ವರ್ತಿಸಬಾರದಿತ್ತು ಎಂದು ಹಲವರು ಅಭಿಪ್ರಾಯಪಟ್ಟರು. ಈ ಬಗ್ಗೆ ಕನ್ನಡ ಚಿತ್ರರಂಗವನ್ನು ಬಲ್ಲ ಹಿರಿಯರು ಏನು ಹೇಳುತ್ತಾರೆ, ಅವರ ಅಭಿಪ್ರಾಯವೇನು ಎಂಬ ಬಗ್ಗೆ ಟಿವಿ9 ಡಿಜಿಟಲ್ ಲೈವ್ ಕಾರ್ಯಕ್ರಮ ನಡೆಸಿಕೊಟ್ಟಿತು. ನಿರ್ಮಾಪಕ, ಫಿಲ್ಮ್ ಛೇಂಬರ್ ಉಪಾಧ್ಯಕ್ಷ ಉಮೇಶ್ ಬಣಕರ್, ನಿರ್ದೇಶಕ ದಯಾಳ್ ಪದ್ಮನಾಭ್ ಮತ್ತು ಪತ್ರಕರ್ತ ಬಿ.ಗಣಪತಿ ಅತಿಥಿಗಳಾಗಿ ಭಾಗವಹಿಸಿದರು. ಆ್ಯಂಕರ್ ಹರಿಪ್ರಸಾದ್ ಕಾರ್ಯಕ್ರಮ ನಡೆಸಿಕೊಟ್ಟರು.
ನವರಸ ನಾಯಕ ಜಗ್ಗೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದ ಕಣ್ಣುಗಳಿದ್ದ ಹಾಗೆ. ಯಾವುದೇ ಕಣ್ಣುಗಳಿಗೆ ನೋವಾದರೂ ಚಿತ್ರರಂಗಕ್ಕೆ ಒಳ್ಳೆಯ ಪರಿಣಾಮ ಬೀರುವುದಿಲ್ಲ. ಈಗ ನಡೆದಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲ. ಆದರೆ, ಈ ಘಟನೆಗಳಿಂದ ಚಿತ್ರರಂಗಕ್ಕೆ ತುಂಬಾ ನೋವಾಗಿದೆ ಎಂದು ಉಮೇಶ್ ಬಣಕರ್ ತಿಳಿಸಿದರು.
ಇದನ್ನು ಅಭಿಮಾನಿಗಳ ಅಚಾತುರ್ಯ ಅನ್ನಬೇಕೋ ಗೊತ್ತಿಲ್ಲ. ಆದರೆ, ಈ ಘಟನೆಯಿಂದ ಜಗ್ಗೇಶ್ ಹಾಗೂ ದರ್ಶನ್ ಸಂಬಂಧ ಹಾಳಾಗಿದೆ ಎಂದು ನನಗೆ ಅನಿಸುವುದಿಲ್ಲ. ಒಂದುವೇಳೆ ಬೇಸರ ಆಗಿದ್ದರೂ ಎಲ್ಲಾ ಮರೆತುಕೊಂಡು ಒಂದಾಗಿರಬೇಕು. ಕೊರೊನಾ ಕಾರಣದಿಂದ ಕನ್ನಡ ಚಿತ್ರರಂಗ ಈಗಾಗಲೇ ಸೊರಗಿ ಹೋಗಿದೆ. ವಾಣಿಜ್ಯ ಮಂಡಳಿಯಲ್ಲಿ ಇದ್ದುಕೊಂಡು ನಿರ್ದೇಶಕರ, ನಿರ್ಮಾಪಕರ, ನಟರ, ತಾಂತ್ರಿಕ ವರ್ಗದ ಜನಗಳ ಕಷ್ಟವನ್ನೆಲ್ಲಾ ನೋಡ್ತಾ ಕೇಳ್ತಾ ಇರೋದ್ರಿಂದ ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ. ದಯಮಾಡಿ ನೀವಿಬ್ಬರೂ ಒಂದಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳಬೇಕು ಎಂದು ಕೇಳಿಕೊಂಡರು.
ಜಗ್ಗೇಶ್, ದರ್ಶನ್ ಇಬ್ಬರೂ ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದವರು ಜಗ್ಗೇಶ್ ಹಿರಿಯ ಕಲಾವಿದ. ಒಂದು ವೇಳೆ ಅವರು ತಪ್ಪಾಗಿ ಹೀಗೆ ಮಾತಾಡಿದ್ದಾರೆ ಅಂದುಕೊಳ್ಳೊಣ, ಹಾಗಿದ್ದರೂ ಅವರನ್ನು ಕೇಳೋಕೆ ಒಂದು ಕ್ರಮ ಬೇಕು. ಅಭಿಮಾನಿಗಳಿಗೆ ನೋವು ಆಗೋದು ಸಹಜ. ಆದರೆ, ಹಿರಿಯ ಕಲಾವಿದರನ್ನು ಆಪರಾಧಿ ಅಂತ ನಿರ್ಧಾರ ಮಾಡಿ ಮಾತನಾಡಿರುವ ರೀತಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಿರ್ದೇಶಕ ದಯಾಳ್ ಪದ್ಮನಾಭ್ ಹೇಳಿದರು.
ಜಗ್ಗೇಶ್, ದರ್ಶನ್ ಇಬ್ಬರೂ ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದವರು. ಜಗ್ಗೇಶ್ ಎಷ್ಟು ತಾಳ್ಮೆಯಿಂದ ಇದ್ದಾರೋ ಅಷ್ಟೇ ರಫ್ ಅಂಡ್ ಟಫ್ ವ್ಯಕ್ತಿ. ಅವರಿಗೆ ಕೇವಲ ಸಿನಿಮಾರಂಗ ಅಲ್ಲ. ರಾಜಕೀಯ ಹಿನ್ನೆಲೆ ಕೂಡ ಇದೆ. ಅಂಥವರ ಜೊತೆಗೆ ಅಭಿಮಾನಿಗಳು ಎಂದುಕೊಂಡವರು ಈ ರೀತಿ ನಡೆದುಕೊಂಡದ್ದು ತಪ್ಪು ಎಂದು ತಿಳಿಸಿದರು.
ತಮಿಳು ನಟ ಅಜಿತ್ಗೆ ಅಭಿಮಾನಿ ಬಳಗ ಇಲ್ಲ, ಅವರು ಅಭಿಮಾನಿ ಬಳಗ ಬೇಡ ಅಂತಲೂ ಹೇಳುತ್ತಾರೆ. ಹಾಗೆಂದು ಅವರ ಸಿನಿಮಾ ಓಡುತ್ತಿಲ್ವಾ? ಜನರು ಅಭಿಮಾನ ತೋರಿಸುತ್ತಿಲ್ವಾ? ಒಳ್ಳೆಯ ನಟರಿಗೆ, ಒಳ್ಳೆಯ ಸಿನಿಮಾಗೆ ಅಭಿಮಾನಿಗಳು ಒಳಿತನ್ನು ಹಾರೈಸಬೇಕು, ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಿ ಎಂದು ಪ್ರೋತ್ಸಾಹಿಸಬೇಕು ಎಂದು ದಯಾಳ್ ತಿಳಿಸಿದರು.
ಜಗ್ಗೇಶ್ ಆ ರೀತಿ ಮಾತನಾಡಿದ್ದು ಹೌದು ಅಂತಾದರೆ ಅದನ್ನೂ ತಪ್ಪು ಅನ್ನೋಣ. ಆದರೆ, ಅಭಿಮಾನಿಗಳ ಈ ನಡೆ ಯಾವ ಅಭಿಮಾನದ ಸಂಕೇತವಾಗಿಯೂ ಕಾಣಿಸಿಕೊಳ್ಳುವುದಿಲ್ಲ. ಅಭಿಮಾನಿಗಳು ಅನಿಸಿಕೊಂಡವರ ಈ ರೀತಿಯ ವರ್ತನೆ ಖಂಡನಾರ್ಹ ಎಂದು ಹಿರಿಯ ಪತ್ರಕರ್ತ ಬಿ. ಗಣಪತಿ ತಿಳಿಸಿದರು.
ಅಭಿಮಾನಿಗಳ ನಡತೆ ಸುಧಾರಿಸಬೇಕಿದೆ ಇಂಥಾ ಪುಂಡಾಟ, ದಾಂಧಲೆಗೆ ಜವಾಬ್ದಾರಿ ಯಾರು? ಎಲ್ಲಿ ಹೋಗಿ, ಏನು ಮಾಡಿದ್ರೂ ಅಭಿಮಾನ ಎಂದುಕೊಳ್ಳಬೇಕೇ? ರಾಜ್ಕುಮಾರ್ ಕಾಲದಲ್ಲಿ ನನಗೂ, ಅಭಿಮಾನಿ ಸಂಘಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೆ ಕೊಡುವಂತ ಸನ್ನಿವೇಶ ನಿರ್ಮಾಣವಾಗಿತ್ತು. ರಾಜ್ಕುಮಾರ್, ವಿಷ್ಣುವರ್ಧನ್ ಚೆನ್ನಾಗಿದ್ರು. ಆದರೆ, ಅಭಿಮಾನಿಗಳು ಮಧ್ಯೆ ಬಂದು ಸಮಸ್ಯೆ ಉಂಟಾಗಿತ್ತು. ಆ ಘಟನಾವಳಿಗಳಿಂದ ನಾವು ಪಾಠ ಕಲಿಯಬೇಕು ಎಂದು ಗಣಪತಿ ಹೇಳಿದರು.
ದರ್ಶನ್ ಸ್ವಭಾವತಃ ಯಾವ ನಟರಿಗೂ ನೋವು ಮಾಡುವ ನಟರಲ್ಲ. ಗೌರವಕ್ಕೆ ಯೋಗ್ಯ ನಟರು ದರ್ಶನ್. ಈಗ ನಡೆದಿರುವ ಅಚಾತುರ್ಯಕ್ಕೆ ದರ್ಶನ್ ಮತ್ತು ಚಿತ್ರರಂಗ ಇಡಿಯಾಗಿ ಸ್ಪಂದಿಸಬೇಕು. ಅಭಿಮಾನಿಗಳು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ತಿಳಿಹೇಳಬೇಕು. ಅಭಿಮಾನಿಗಳನ್ನು ಎಚ್ಚರಿಸಬೇಕಾದ ತುರ್ತು ಮತ್ತು ಜವಾಬ್ದಾರಿ ಖಂಡಿತಾ ಚಿತ್ರರಂಗದ ಹಿರಿಯ ನಟರಿಗಿದೆ. ಹಿರಿಯ ಮತ್ತು ಅಪಾರ ಅಭಿಮಾನಿ ಬಳಗ ಹೊಂದಿರುವ ಜಗ್ಗೇಶ್ ಮತ್ತು ದರ್ಶನ್ ಜತೆಯಾಗಿ ಸುದ್ದಿಗೋಷ್ಠಿ ನಡೆಸಿ ಒಂದು ಉತ್ತಮ ಸಂದೇಶ ನೀಡಿದರೆ ಒಳ್ಳೆಯದು ಎಂದು ಬಿ. ಗಣಪತಿ ಅಭಿಪ್ರಾಯಪಟ್ಟರು. ಮತ್ತೊಂದು ಸ್ಟಾರ್ ವಾರ್ ಆಗದಿರಲಿ ಎಂದು ಹೇಳಿದರು.
ಇದನ್ನೂ ಓದಿ: Darshan Interview | ಜಗ್ಗೇಶ್ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್
ಇದನ್ನೂ ಓದಿ: Jaggesh: TV9 ಕನ್ನಡಕ್ಕೆ ಧನ್ಯವಾದ ತಿಳಿಸಿದ ನಟ ಜಗ್ಗೇಶ್
Published On - 7:36 pm, Wed, 24 February 21