ನಟ ಜಗ್ಗೇಶ್ (Jaggesh) ಸಿಟಿ ಸ್ಕ್ಯಾನ್ ಮಾಡಿಸುತ್ತಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರದಾಡಿ ಜಗ್ಗೇಶ್ ಅಭಿಮಾನಿಗಳು ಆತಂಕಿತರಾಗಿದ್ದರು. ಇದೀಗ ಸ್ವತಃ ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆರೋಗ್ಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸಿಟಿ ಸ್ಕ್ಯಾನ್ಗೆ ಕಾರಣವನ್ನೂ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೇದಾರ್ನಾಥ್-ಬದ್ರಿನಾಥ್ ಯಾತ್ರೆಗೆ ನಟ ಜಗ್ಗೇಶ್ ತೆರಳಿದ್ದರು. ಅಲ್ಲಿ ಬೆಟ್ಟ ಹತ್ತಿ ಇಳಿದ ಕಾರಣ ಹಾಗೂ ಸತತ ಪ್ರಯಾಣ, ನಡೆದಾಟದ ಕಾರಣದಿಂದ ಜಗ್ಗೇಶ್ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಜಗ್ಗೇಶ್ ವೈದ್ಯರ ಸಲಹೆ ಮೇರೆಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ಗೆ ಒಳಗಾಗಿದ್ದಾರೆ.
ತಾವು ಸಿಟಿ ಸ್ಕ್ಯಾನ್ಗೆ ಒಳಗಾಗುತ್ತಿರುವ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ್, ”ಎಲ್4ಎಲ್5 ಕಂಪ್ರೆಷನ್ ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲು ಭಾಗಿಯಾಗಲು ಸಾಧ್ಯವಾಗಲಿಲ್ಲಾ! 2 ವಾರ ಫಿಸಿಯೋ ಚಿಕಿತ್ಸೆ ಹಾಗೂ ಬೆಡ್ರೆಸ್ಟ್ ಕಡ್ಡಾಯ ಎಂದು ವೈದ್ಯರು ಸಲಹೆ ನೀಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:‘ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ’: ‘ಇಂಡಿಯಾ’ ಚರ್ಚೆ ಬಗ್ಗೆ ಜಗ್ಗೇಶ್ ಅಭಿಪ್ರಾಯ
ಜಗ್ಗೇಶ್ ನಟನೆಯ ‘ತೋತಾಪುರಿ 2’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಜಗ್ಗೇಶ್ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ, ಇಂದು (ಸೆಪ್ಟೆಂಬರ್ 29) ನಡೆದ ಚಿತ್ರರಂಗದ ಕಾವೇರಿ ಹೋರಾಟದಲ್ಲಿಯೂ ಜಗ್ಗೇಶ್ ಪಾಲ್ಗೊಂಡಿರಲಿಲ್ಲ. ಇದು ಹಲವರಲ್ಲಿ ಪ್ರಶ್ನೆ ಮೂಡಿಸಿತ್ತು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ನಟ ಜಗ್ಗೇಶ್ ಸಿನಿಮಾ ಪ್ರಚಾರ ಹಾಗೂ ಕಾವೇರಿ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂಬುದು ಈಗ ಖಾತ್ರಿಯಾಗಿದೆ.
ರಾಯರ ಭಕ್ತರಾಗಿರುವ ಜಗ್ಗೇಶ್, ಯೋಗಾಸನ ಹಾಗೂ ತಕ್ಕಮಟ್ಟಿಗೆ ವ್ಯಾಯಾಮವನ್ನು ಪ್ರತಿದಿನ ಮಾಡುವುದಾಗಿ ಹಿಂದೊಮ್ಮೆ ಹೇಳಿಕೊಂಡಿದ್ದರು. ಇದೀಗ ವೈದ್ಯರ ಸಲಹೆ ಮೇರೆಗೆ ಜಗ್ಗೇಶ್ ಎರಡು ವಾರಗಳ ಕಾಲ ಬೆಡ್ರೆಸ್ಟ್ ಪಡೆಯಬೇಕಿದ್ದು, ಸಿನಿಮಾ, ರಾಜಕಾರಣ ಅಥವಾ ಕಾವೇರಿ ವಿಷಯದಿಂದ ತುಸು ದೂರವೇ ಉಳಿಯಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ