ಕಿರೀಟಿ ರಿಯಲ್ ಆ್ಯಕ್ಷನ್; ವಾವ್ ಎನ್ನುವಂತಿದೆ ಜನಾರ್ದನ ರೆಡ್ಡಿ ಪುತ್ರನ ಫೈಟಿಂಗ್ ಪರಿಶ್ರಮ
ನಟ ಕಿರೀಟಿ ಅವರು ತಮ್ಮ ಚೊಚ್ಚಲ ಚಿತ್ರಕ್ಕಾಗಿ ಇನ್ನಿಲ್ಲದಷ್ಟು ಕಷ್ಟಪಡುತ್ತಿದ್ದಾರೆ. ಇಂಟ್ರಡಕ್ಷನ್ ಟೀಸರ್ ಸಲುವಾಗಿ ಅವರು ಏನೆಲ್ಲ ಕಸರತ್ತು ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಈ ಮೇಕಿಂಗ್ ವಿಡಿಯೋ.

ಜನಾರ್ದನ ರೆಡ್ಡಿ (Janardhan Reddy) ಪುತ್ರ ಕಿರೀಟಿ ಅವರು ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಗೊತ್ತೇ ಇದೆ. ಮೊದಲ ಸಿನಿಮಾಗಾಗಿ ಅವರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ರಾಯಲ್ ಕಿಡ್ ಎಂಬ ಕಾರಣಕ್ಕೆ ಅವರು ಸಿನಿಮಾದ ಅವಕಾಶವನ್ನು ಹಗುರವಾಗಿ ಪರಿಗಣಿಸಿಲ್ಲ. ಹೀರೋ ಆಗಲು ಬೇಕಾಗಿರುವ ಎಲ್ಲ ಬಗೆಯ ಶ್ರಮವನ್ನೂ ಅವರು ಹಾಕುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈಗ ಹೊಸದೊಂದು ವಿಡಿಯೋ ವೈರಲ್ ಆಗಿದೆ. ಸಿನಿಮಾದ ಆ್ಯಕ್ಷನ್ ದೃಶ್ಯಗಳಿಗಾಗಿ ಕಿರೀಟಿ (Kireeti) ಅವರು ಯಾವ ರೀತಿ ಕಷ್ಟಪಡುತ್ತಿದ್ದಾರೆ ಎಂಬುದಕ್ಕೆ ಈ ಮೇಕಿಂಗ್ ವಿಡಿಯೋ ಸಾಕ್ಷಿ ಒದಗಿಸುತ್ತಿದೆ. ಸಾಮಾನ್ಯವಾಗಿ ಸಿನಿಮಾದಲ್ಲಿ ಸಾಹಸ ಸನ್ನಿವೇಶದ ಚಿತ್ರೀಕರಣ ಮಾಡುವಾಗ ಡ್ಯೂಪ್ ಬಳಸುತ್ತಾರೆ. ಹೀರೋ ಬದಲಿಗೆ ಬೇರೆ ಸಾಹಸ ಕಲಾವಿದರು ರಿಸ್ಕಿ ಸ್ಟಂಟ್ಸ್ ಮಾಡುತ್ತಾರೆ. ಆದರೆ ಕಿರೀಟಿ ಆ ರೀತಿ ಅಲ್ಲ. ಸ್ವತಃ ಅವರೇ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದಾರೆ. ಇಡೀ ಸಿನಿಮಾದಲ್ಲಿ ಆ್ಯಕ್ಷನ್ ದೃಶ್ಯಗಳು ಹೇಗಿರಬಹುದು ಎಂಬುದರ ಝಲಕ್ ಈ ಮೇಕಿಂಗ್ ವಿಡಿಯೋದಲ್ಲಿ ಇದೆ. ಒಟ್ಟಾರೆಯಾಗಿ ಕಿರೀಟಿ ಅವರು ಮೊದಲ ಸಿನಿಮಾದಲ್ಲೇ (Kireeti Movie) ಪ್ರೇಕ್ಷಕರ ಮನ ಗೆಲ್ಲುವ ಸಕಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಕಿರೀಟಿ ಅವರ ಇಂಟ್ರಡಕ್ಷನ್ ಟೀಸರ್ ಬಿಡುಗಡೆ ಆಗಿತ್ತು. ಅದನ್ನು ಕಂಡು ಎಲ್ಲರೂ ಫಿದಾ ಆಗಿದ್ದರು. ಟೀಸರ್ನಲ್ಲಿ ಕಿರೀಟಿ ಮಾಡಿದ ಡ್ಯಾನ್ಸ್, ಆ್ಯಕ್ಷನ್ ನೋಡಿ ರಾಜಮೌಳಿ ಕೂಡ ಭೇಷ್ ಎಂದಿದ್ದರು. ಆದರೆ ಆ ಟೀಸರ್ ಹಿಂದೆ ಕಿರೀಟಿ ಎಷ್ಟೆಲ್ಲ ಕಷ್ಟಪಟ್ಟಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಈಗ ಚಿತ್ರತಂಡದಿಂದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದ್ದು, ಕಿರೀಟಿ ಅವರ ಪರಿಶ್ರಮಕ್ಕೆ ಹೆಚ್ಚಿನ ಚಪ್ಪಾಳೆ ಸಿಗುತ್ತಿದೆ.
ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೇನ್ಸ್ ಅವರ ಮಾರ್ಗದರ್ಶನದಲ್ಲಿ ಕಿರೀಟಿ ಅವರು ಭರ್ಜರಿ ಆ್ಯಕ್ಷನ್ ಮಾಡಿ ತೋರಿಸಿದ್ದಾರೆ. ರಿಹರ್ಸಲ್ ಮತ್ತು ಶೂಟಿಂಗ್ ಸಂದರ್ಭದಲ್ಲಿ ಪೆಟ್ಟುಗಳಾದರೂ ಕೂಡ ಕಿರೀಟಿ ಕುಗ್ಗಲಿಲ್ಲ. ಆಗ ಅವರ ಉತ್ಸಾಹ ಯಾವ ರೀತಿ ಇತ್ತು ಎಂಬುದು ಕೂಡ ಈ ಮೇಕಿಂಗ್ ವಿಡಿಯೋದಲ್ಲಿ ಸೆರೆಯಾಗಿದೆ.
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಚಲನ ಚಿತ್ರಂ’ ಮೂಲಕ ಅದ್ದೂರಿ ಬಜೆಟ್ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು. ‘ಮಯಾಬಜಾರ್’ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಜೊತೆಗೆ ಘಟಾನುಘಟಿ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ‘ಪುಷ್ಪ’ ಸಿನಿಮಾ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರು ಕಿರೀಟಿಯ ಈ ಚೊಚ್ಚಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆ.ಕೆ. ಸೇಂಥಿಲ್ ಕುಮಾರ್ ಐಎಸ್ಸಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.
ಈ ಮೊದಲು ರಿಲೀಸ್ ಆದ ಹೀರೋ ಇಂಟ್ರಡಕ್ಷನ್ ಟೀಸರ್ ಯೂಟ್ಯೂಬ್ನಲ್ಲಿ 49 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈಗ ಮೇಕಿಂಗ್ ವಿಡಿಯೋ ಕೂಡ ಹೆಚ್ಚು ವೀವ್ಸ್ ಪಡೆದುಕೊಳ್ಳುತ್ತಿದೆ. ಮೇಕಿಂಗ್ ವಿಡಿಯೋ ನೋಡಿದ ನೆಟ್ಟಿಗರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ‘ಕಿರೀಟಿ ಅವರ ಹಾರ್ಡ್ ವರ್ಕ್ ಮತ್ತು ಬದ್ಧತೆಗೆ ಹ್ಯಾಟ್ಸಾಫ್’ ಎಂದು ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ನಿಜವಾದ ಸಿನಿಮಾ ಹೀರೋಗೆ ಬೇಕಿರುವ ಗುಣ ಇದು’ ಎಂದು ಅನೇಕರು ಬೆನ್ನು ತಟ್ಟಿದ್ದಾರೆ.
ಇದನ್ನೂ ಓದಿ:
‘ಅಪ್ಪು ಸರ್ ನೋಡಿ ನಾನು ನಟನಾದೆ’; ಹೆಮ್ಮೆಯಿಂದ ಹೇಳಿಕೊಂಡ ಕಿರೀಟಿ
‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೇ ಇಲ್ಲ’: ನೇರವಾಗಿ ಹೇಳಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ