ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿ (Jayanthi) ಅವರು ಸೋಮವಾರ (ಜು.26) ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಐದು ಗಂಟೆಗೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಇಂದು (ಜು.26) ಸಂಜೆ ಬನಶಂಕರಿ ಚಿತಾಗಾರದಲ್ಲಿ ಪೊಲೀಸ್ ಗೌರವದೊಂದಿಗೆ ಜಯಂತಿ ಅಂತ್ಯಕ್ರಿಯೆ ನೆರವೇರಿದೆ. ಪುತ್ರ ಕೃಷ್ಣಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಜಯಂತಿ ಕುಟುಂಬದವರು, ಅಭಿಮಾನಿಗಳು, ಚಿತ್ರರಂಗದ ಕೆಲವರು ಈ ಸಂದರ್ಭದಲ್ಲಿ ಹಾಜರಿದ್ದರು.
ಜನವರಿ 6, 1945ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಜಯಂತಿಯ ಮೂಲ ಹೆಸರು ಕಮಲಾ ಕುಮಾರಿ. ಕನ್ನಡ ಮಾತ್ರವಲ್ಲದೆ ಹಿಂದಿ, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲೂ ಅವರು ನಟಿಸಿದ್ದರು. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ಅವರದ್ದು. ಅವರ ಸಾವಿಗೆ ಸಾಕಷ್ಟು ಜನರು ಕಂಬನಿ ಮಿಡಿದಿದ್ದಾರೆ.
‘ಬಹುಭಾಷಾ ನಟಿ, ಅಭಿನಯ ಶಾರದೆ ಜಯಂತಿ ಅಮ್ಮಾವ್ರು ಇಂದು ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ದೇವರು ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ’ ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.
‘ಪ್ರಖ್ಯಾತ ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಅವರ ಕುಟುಂಬ, ಅಪಾರ ಅಭಿಮಾನಿ ಬಳಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
‘ಅಭಿಜಾತ ಪ್ರತಿಭೆಯ ಮೂಲಕ ದಶಕಗಳ ಕಾಲ ಚಿತ್ರಪ್ರೇಮಿಗಳ ಮನಗೆದ್ದಿದ್ದ ಮತ್ತು ನನ್ನ ಇಷ್ಟದ ನಟಿ ಅಭಿನಯ ಶಾರದೆ ಜಯಂತಿಯವರ ನಿಧನದಿಂದ ಅತೀವ ದುಃಖವಾಗಿದೆ. ಜಯಂತಿ ಅವರು ತಮ್ಮ ಚಿತ್ರಗಳ ಮೂಲಕ ಸದಾಕಾಲ ನಮ್ಮೆಲ್ಲರ ಮನದಲ್ಲಿ ಅಜರಾಮಾರರಾಗಿ ಇರುತ್ತಾರೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು’ ಎಂದು ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಅಭಿನಯ ಶಾರದೆ ಜಯಂತಿ ಕೊನೇ ದಿನಗಳ ಬಗ್ಗೆ ಪುತ್ರ ಕೃಷ್ಣ ಕುಮಾರ್ ತೆರೆದಿಟ್ಟ ವಿವರ
ನಟ ಜಗ್ಗೇಶ್ ನೆನಪಿನ ಪುಟದಲ್ಲಿವೆ ‘ಅಭಿನಯ ಶಾರದೆ’ ಜಯಂತಿ ಜೊತೆ ಕಳೆದ ಸುಂದರ ಕ್ಷಣಗಳು
Published On - 5:49 pm, Mon, 26 July 21