Niveditha Shivarajkumar: ಸಿನಿಮಾ ನಿರ್ಮಾಪಕಿ ಆದ ಶಿವರಾಜ್ಕುಮಾರ್ ಪುತ್ರಿ ನಿವೇದಿತಾ; ಮೊದಲ ಚಿತ್ರದ ಬಗ್ಗೆ ಸಿಕ್ತು ಮಾಹಿತಿ
Shri Mutthu Cine Services: ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಸಂಸ್ಥೆಯನ್ನು ನಿವೇದಿತಾ ಶಿವರಾಜ್ಕುಮಾರ್ ಅವರು ಮುನ್ನಡೆಸುತ್ತಿದ್ದಾರೆ. ಅವರು ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ವಂಶಿ ಹೀರೋ ಆಗಿದ್ದಾರೆ.
ಡಾ. ರಾಜ್ಕುಮಾರ್ ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಕೆಲವರು ತೆರೆಮೇಲೆ ಮಿಂಚಿದರೆ, ಇನ್ನುಳಿದವರು ತೆರೆಹಿಂದೆ ಬ್ಯುಸಿ ಆಗಿದ್ದಾರೆ. ಶಿವರಾಜ್ಕುಮಾರ್ (Niveditha Shivarajkumar) ಅವರ ಪುತ್ರಿ ನಿವೇದಿತಾ ಅವರು ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಸಂಸ್ಥೆ ಮೂಲಕ ಈಗಾಗಲೇ ಸೀರಿಯಲ್ ಮತ್ತು ವೆಬ್ ಸೀರಿಸ್ಗಳು ನಿರ್ಮಾಣ ಆಗಿವೆ. ಈಗ ಇದೇ ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ಮಿಸಲು ನಿವೇದಿತಾ ಶಿವರಾಜ್ಕುಮಾರ್ (Niveditha Shivarajkumar) ಮುಂದಾಗಿದ್ದಾರೆ. ಈ ಬಗ್ಗೆ ಈಗ ಅಪ್ಡೇಟ್ ಸಿಕ್ಕಿದೆ. ‘ಶ್ರೀ ಮುತ್ತು ಸಿನಿ ಸರ್ವೀಸಸ್’ (Shri Mutthu Cine Services) ಬ್ಯಾನರ್ನಡಿ ಸಿದ್ಧವಾಗಲಿರುವ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯಕ್ಕೆ ಪಾತ್ರವರ್ಗ ಮತ್ತು ತಂತ್ರಜ್ಞರ ಬಗ್ಗೆ ಒಂದಷ್ಟು ಮಾಹಿತಿ ಬಿಟ್ಟು ಕೊಡಲಾಗಿದೆ.
ಶಿವರಾಜ್ಕುಮಾರ್ ಅವರು ಯಾವಾಗಲೂ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾರೆ. ಅದೇ ರೀತಿ ನಿವೇದಿತಾ ಶಿವರಾಜ್ಕುಮಾರ್ ಕೂಡ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಮತ್ತು ಹೊಸ ಆಲೋಚನೆಗಳಿಗೆ ಅವಕಾಶ ನೀಡಲು ಈ ಸಂಸ್ಥೆ ಮುಡಿಪಾಗಿದೆ. ‘ಹೊಂಬಿಸಿಲ ಕಿರಣಗಳಲ್ಲಿ ತಂಗಾಳಿಯೊಂದು ಮೂಡಿದೆ. ಹುಟ್ಟು-ಸಾವಿನ ಸ್ವಾರಸ್ಯವನ್ನು ಅನ್ವೇಷಿಸಲು ಹೊರಟಿದೆ. ಮೇ 1ರಂದು ಒಂದು ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ’ ಎಂಬ ಪೋಸ್ಟರ್ ಮೂಲಕ ನಿವೇದಿತಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸೇರಿದ ಗೀತಾ ಶಿವರಾಜ್ಕುಮಾರ್ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್
ನಿವೇದಿತಾ ನಿರ್ಮಾಣದ ಮೊದಲ ಚಿತ್ರಕ್ಕೆ ವಂಶಿ ಹೀರೋ. ನಿರ್ದೇಶನ ಕೂಡ ಅವರದ್ದೇ. ‘ಪಿಆರ್ಕೆ ಪ್ರೊಡಕ್ಷನ್ಸ್’ ಮೂಲಕ ಮೂಡಿಬಂದ ‘ಮಯಾಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಅವರು ಕೆಲಸ ಮಾಡಿದ್ದರು. ಇತ್ತೀಚೆಗೆ ಬಂದ ‘ಪೆಂಟಗನ್’ ಚಿತ್ರದಲ್ಲೂ ಒಂದು ಪ್ರಮುಖ ಪಾತ್ರ ಮಾಡಿದ್ದರು. ಈಗ ನಿವೇದಿತಾ ಬಂಡವಾಳ ಹೂಡುತ್ತಿರುವ ಮೊದಲ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಜರ್ನಿ ಆರಂಭಿಸುತ್ತಿದ್ದಾರೆ. ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ ಹಾಗೂ ರಘು ನಿಡುವಳ್ಳಿ ಅವರು ಸಂಭಾಷಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇದನ್ನೂ ಓದಿ: ‘ಆ ಹೆಣ್ಮಕ್ಕಳಿಗೆ ಒಳ್ಳೇ ಹೆಸರು ಬಂದಿದ್ದು ಖುಷಿ’: ‘ವೇದ’ ಗೆಲುವಿನ ಬಗ್ಗೆ ಗೀತಾ ಶಿವರಾಜ್ಕುಮಾರ್ ಮಾತು
ಸಿನಿಮಾ ನಿರ್ಮಾಣದಲ್ಲಿ ಅಣ್ಣಾವ್ರ ಕುಟುಂಬಕ್ಕೆ ಅಪಾರ ಅನುಭವ ಇದೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಈ ಕುಟುಂಬಕ್ಕೆ ಸಲ್ಲುತ್ತದೆ. ಡಾ. ಪಾರ್ವತಮ್ಮ ರಾಜ್ಕುಮಾರ್ ಅವರು ‘ಪೂರ್ಣಿಮಾ ಎಂಟರ್ ಪ್ರೈಸನ್’ ಮೂಲಕ ಅನೇಕ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದರು. ‘ಗೀತಾ ಪಿಕ್ಚರ್ಸ್’ ಮೂಲಕ ಗೀತಾ ಶಿವರಾಜ್ಕುಮಾರ್ ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಆರಂಭಿಸಿದ್ದ ‘ಪಿಆರ್ಕೆ’ ಪ್ರೊಡಕ್ಷನ್ ಸಂಸ್ಥೆಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದುವರಿಸಿಕೊಂಡು ಹೋಗತ್ತಿದ್ದಾರೆ. ಅದೇ ರೀತಿ ನಿವೇದಿತಾ ಶಿವರಾಜ್ಕುಮಾರ್ ಅವರು ತಮ್ಮ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಮೂಲಕ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.