‘ಬಂಗಾರದ ಮನುಷ್ಯ’ ಚಿತ್ರಕ್ಕೆ 50 ವರ್ಷ; ಅಣ್ಣಾವ್ರು ನಟಿಸಿದ ಈ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ
Dr Rajkumar | Bangarada Manushya: ಜನಮನ ಗೆಲ್ಲುವಲ್ಲಿಯೂ, ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುವಲ್ಲಿಯೂ ‘ಬಂಗಾರದ ಮನುಷ್ಯ’ ಚಿತ್ರ ಮೈಲಿಗಲ್ಲು ಸ್ಥಾಪಿಸಿತ್ತು. ಈ ಚಿತ್ರ ತೆರೆಕಂಡು ಇಂದಿಗೆ (ಮಾ.31) ಐವತ್ತು ವರ್ಷ.
ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ಕುಮಾರ್ (Dr Rajkumar) ನೀಡಿದ ಕೊಡುಗೆ ಅಪಾರ. ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಅವರ ಪ್ರತಿ ಸಿನಿಮಾದಲ್ಲಿಯೂ ಸಮಾಜಕ್ಕೊಂದು ಉತ್ತಮ ಸಂದೇಶ ಇದ್ದೇ ಇರುತ್ತಿತ್ತು. ಆ ಕಾರಣಕ್ಕಾಗಿ ಡಾ. ರಾಜ್ಕುಮಾರ್ ಎಂದರೆ ಕನ್ನಡಿಗರ ಪಾಲಿಗೆ ಆದರ್ಶ ವ್ಯಕ್ತಿ ಆಗಿದ್ದರು. ಪಾತ್ರಗಳ ಆಯ್ಕೆಯಲ್ಲಿ ಅವರು ತೋರುತ್ತಿದ್ದ ಕಾಳಜಿ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ನೋಡುಗರನ್ನು ದಾರಿ ತಪ್ಪಿಸುವಂತಹ ಪಾತ್ರವನ್ನು ಅವರು ಎಂದಿಗೂ ಆಯ್ಕೆ ಮಾಡಿಕೊಳ್ಳಲಿಲ್ಲ. ಡಾ. ರಾಜ್ ನಟಿಸಿದ ಪಾತ್ರಗಳನ್ನೇ ಅನುಸರಿಸಿದರೂ ಸಾಕು, ಬಾಳಿಗೊಂದು ಅತ್ಯುತ್ತಮ ಮಾರ್ಗದರ್ಶನ ಸಿಗುತ್ತದೆ ಎಂಬುದರಲ್ಲಿ ಅನುಮಾನ ಬೇಡ. ಅಷ್ಟು ಮೌಲ್ಯಯುತವಾದ ಸಿನಿಮಾಗಳನ್ನೇ (Dr Rajkumar Movie) ಅವರು ಈ ನಾಡಿಗೆ ಕೊಡುಗೆಯಾಗಿ ನೀಡಿದರು. ಆ ಪೈಕಿ ‘ಬಂಗಾರದ ಮನುಷ್ಯ’ ಸಿನಿಮಾವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತೀಯ ಚಿತ್ರರಂಗದ ಬೆಸ್ಟ್ ಸಿನಿಮಾಗಳನ್ನು ಪಟ್ಟಿ ಮಾಡುವಾಗ ‘ಬಂಗಾರದ ಮನುಷ್ಯ’ (Bangarada Manushya) ಚಿತ್ರವನ್ನು ಬಿಡಲು ಸಾಧ್ಯವಿಲ್ಲ. ಈ ಸಿನಿಮಾ ತೆರೆಕಂಡು ಇಂದಿಗೆ (ಮಾ.31) 50 ವರ್ಷ ಪೂರೈಸಿದೆ. ಅರ್ಧ ಶತಮಾನ ಕಳೆದರೂ ಕೂಡ ಈ ಚಿತ್ರದ ಚಾರ್ಮ್ ಕಡಿಮೆ ಆಗಿಲ್ಲ. ಇಂದಿಗೂ ಕೂಡ ಸಿನಿಪ್ರಿಯರ ಸಂವಾದದಲ್ಲಿ ‘ಬಂಗಾರದ ಮನುಷ್ಯ’ ಚಿತ್ರ ಪ್ರಸ್ತುತವಾಗಿ ಉಳಿದುಕೊಂಡಿದೆ.
‘ಬಂಗಾರದ ಮನುಷ್ಯ’ ಸಿನಿಮಾವನ್ನು ನಿರ್ದೇಶನ ಮಾಡಿದವರು ಎಸ್. ಸಿದ್ದಲಿಂಗಯ್ಯ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಸಿದ್ದಲಿಂಗಯ್ಯ ಅವರು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು. ಟಿ.ಕೆ. ರಾಮ ರಾವ್ ಬರೆದ ‘ಬಂಗಾರದ ಮನುಷ್ಯ’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿತ್ತು. ರಾಜ್ಕುಮಾರ್, ಭಾರತಿ, ಬಾಲಕೃಷ್ಣ, ಶ್ರೀನಾಥ್, ಲೋಕನಾಥ್, ದ್ವಾರಕೀಶ್, ವಜ್ರಮುನಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಹತ್ತು ಹಲವು ಕಾರಣಗಳಿಂದಾಗಿ ‘ಬಂಗಾರದ ಮನುಷ್ಯ’ ಚಿತ್ರ ಇಂದಿಗೂ ವಿಶೇಷ ಸ್ಥಾನ ಉಳಿಸಿಕೊಂಡಿದೆ.
ಈ ಸಿನಿಮಾ ನೋಡಿದ ಅನೇಕ ಯುವಕರು ನಗರವನ್ನು ಬಿಟ್ಟು ತಮ್ಮ ಹಳ್ಳಿಗಳಿಗೆ ತೆರಳಿ ಪುನಃ ಕೃಷಿಯಲ್ಲಿ ತೊಡಗಿಕೊಂಡರು. ಈಗಲೂ ಕೂಡ ಈ ಚಿತ್ರದ ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..’ ಹಾಡನ್ನು ಕೇಳಿದರೆ ಎಂಥವರಿಗಾದರೂ ಸ್ಫೂರ್ತಿ ಉಕ್ಕುತ್ತದೆ. ಮನದಲ್ಲಿ ಜೀವನೋತ್ಸಾವ ತುಂಬುತ್ತದೆ. ಕನ್ನಡ ಚಿತ್ರರಂಗ ಇರುವವರೆಗೂ ಈ ಹಾಡಿನ ತೂಕ ಕಡಿಮೆ ಆಗುವುದಿಲ್ಲ. ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಸಂಗೀತ ನೀಡಿದವರು ಜಿ.ಕೆ. ವೆಂಕಟೇಶ್. ಚಿತ್ರದ ಎಲ್ಲ ಹಾಡುಗಳಿಗೆ ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ ಧ್ವನಿ ನೀಡಿದ್ದರು. ‘ನಗು ನಗುತಾ ನಲಿ..’, ‘ಬಾಳ ಬಂಗಾರ ನೀನು..’, ‘ಆಹಾ ಮೈಸೂರು ಮಲ್ಲಿಗೆ..’, ‘ಆಗದು ಎಂದು ಕೈ ಕಟ್ಟಿ ಕುಳಿತರೆ..’ ಗೀತೆಗಳು ಎವರ್ಗ್ರೀನ್ ಆಗಿ ಉಳಿದುಕೊಂಡಿವೆ.
ಕನ್ನಡ ಚಿತ್ರರಂಗದಲ್ಲಿ ‘ಬಂಗಾರದ ಮನುಷ್ಯ’ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ.
- ಜನಮನ ಗೆಲ್ಲುವಲ್ಲಿಯೂ, ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುವಲ್ಲಿಯೂ ಈ ಚಿತ್ರ ಮೈಲಿಗಲ್ಲು ಸ್ಥಾಪಿಸಿತು.
- ಆ ಕಾಲಕ್ಕೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಎಂಬ ಖ್ಯಾತಿಯನ್ನು ‘ಬಂಗಾರದ ಮನುಷ್ಯ’ ಪಡೆದುಕೊಂಡಿತು.
- ಬೆಂಗಳೂರಿನ ‘ಸ್ಟೇಟ್ಸ್’ ಚಿತ್ರಮಂದಿರದಲ್ಲಿ ಸತತ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡಿದ್ದು ಅಮೋಘ ಸಾಧನೆಯೇ ಸರಿ.
- ಮೈಸೂರಿನ ‘ಚಾಮುಂಡೇಶ್ವರಿ’ ಚಿತ್ರಮಂದಿರದಲ್ಲಿ 60 ವಾರಗಳ ಕಾಲ ಪ್ರದರ್ಶನ ಕಂಡಿತು.
- ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಪ್ರದರ್ಶನವಾಯಿತು. ಜನರು ಮುಗಿಬಿದ್ದು ಈ ಸಿನಿಮಾ ವೀಕ್ಷಿಸಿದರು.
- 1988ರಲ್ಲಿ ಮರು ಬಿಡುಗಡೆ ಆದಾಗಲೂ ಈ ಚಿತ್ರ ಬರೋಬ್ಬರಿ 25 ವಾರಗಳ ಕಾಲ ಪ್ರದರ್ಶನ ಕಂಡಿತು.
ಇಂಥ ಹಲವಾರು ದಾಖಲೆಗಳನ್ನು ಬರೆದ ‘ಬಂಗಾರದ ಮನುಷ್ಯ’ ಸಿನಿಮಾ ತೆರೆಕಂಡು ಇಂದಿಗೆ (ಮಾ.31) ಸರಿಯಾಗಿ 50 ವರ್ಷ ಪೂರೈಸಿದೆ. ಈಗಲೂ ಕೂಡ ಈ ಚಿತ್ರ ಟಿವಿಯಲ್ಲಿ ಪ್ರಸಾರವಾದರೆ ಗಮನವಿಟ್ಟು ನೋಡುವ ಪ್ರೇಕ್ಷಕರಿದ್ದಾರೆ. 50 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರದ ಕುರಿತ ತಮ್ಮ ಅನಿಸಿಕೆ ಮತ್ತು ನೆನಪುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
ರಾಜ್ಕುಮಾರ್ ಗೌರವ ಡಾಕ್ಟರೇಟ್ ಪಡೆದು 46 ವರ್ಷ ಪೂರ್ಣ; ಕೋಟ್ಯಂತರ ಜನರಿಗೆ ವರನಟ ಸ್ಫೂರ್ತಿ
3ನೇ ಕ್ಲಾಸ್ ಓದಿದ ಡಾ. ರಾಜ್ಕುಮಾರ್ ಇಂಗ್ಲಿಷ್ ಕಲಿತಿದ್ದು ಹೇಗೆ? ಇಲ್ಲಿದೆ ಅದರ ಸೀಕ್ರೆಟ್