
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಇನ್ನೂ ಸಮಯವಿದೆ. ಆದರೆ ಈಗಲೇ ಸಿನಿಮಾದ ವಿತರಣೆ ಹಕ್ಕು ಖರೀದಿಗೆ ದೊಡ್ಡ ದೊಡ್ಡ ನಿರ್ಮಾಪಕರು, ವಿತರಣಾ ಸಂಸ್ಥೆಗಳು ಮುಗಿಬಿದ್ದಿವೆ. ತೆಲುಗು ರಾಜ್ಯಗಳಲ್ಲಂತೂ ‘ಕಾಂತಾರ: ಚಾಪ್ಟರ್ 1’ಗೆ ಭಾರಿ ಬೇಡಿಕೆ ಇದ್ದು, ಕೋಟಿಗಟ್ಟಲೆ ಹಣ ಮುಂಗಡವಾಗಿ ಕೊಟ್ಟು ಹಕ್ಕು ಖರೀದಿ ಮಾಡಲಾಗಿದೆ. ಅಷ್ಟಕ್ಕೂ ತೆಲುಗು ರಾಜ್ಯಗಳಲ್ಲಿ ಸಿನಿಮಾದ ಹಕ್ಕು ಮಾರಾಟವಾಗಿದ್ದು ಎಷ್ಟಕ್ಕೆ? ಮಾಹಿತಿ ಇಲ್ಲಿದೆ…
‘ಕಾಂತಾರ ಚಾಪ್ಟರ್ 1’ ಸಿನಿಮಾದ ತೆಲುಗು ರಾಜ್ಯಗಳ ಬಿಡುಗಡೆ ಹಕ್ಕು ಬರೋಬ್ಬರಿ 100 ಕೋಟಿಗೆ ಮಾರಾಟವಾಗಿದೆ. ನೆನಪಿರಲಿ, ತೆಲುಗಿನ ಸ್ಟಾರ್ ನಟರಾದ ಜೂ ಎನ್ಟಿಆರ್ ಅವರ ಜೊತೆಗೆ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಒಟ್ಟಿಗೆ ನಟಿಸಿದ್ದ ‘ವಾರ್ 2’ ಸಿನಿಮಾದ ಬಿಡುಗಡೆ ಹಕ್ಕಿಗೂ ಇಷ್ಟು ದೊಡ್ಡ ಮೊತ್ತದ ಹಣ ನೀಡಲಾಗಿಲ್ಲ. ಆದರೆ ‘ಕಾಂತಾರ ಚಾಪ್ಟರ್ 1’ ಸಿನಿಮಾಕ್ಕೆ ದಾಖಲೆ ಮೊತ್ತವನ್ನು ನೀಡಲಾಗಿದೆ.
ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿ ಇಷ್ಟು ದುಬಾರಿ ಮೊತ್ತಕ್ಕೆ ಮಾರಾಟವಾದ ಮೊದಲ ತೆಲುಗುಯೇತರ ಸಿನಿಮಾ ಎನಿಸಿಕೊಂಡಿದೆ ‘ಕಾಂತಾರ ಚಾಪ್ಟರ್ 1’. ತೆಲುಗು ರಾಜ್ಯಗಳ ಮೂರು ಪ್ರಮುಖ ವಿತರಣೆ ವಿಭಾಗಗಳಾದ ಕೋಸ್ಟಲ್ ಆಂಧ್ರ, ಸೀಡೆಡ್ ಮತ್ತು ನಿಜಾಮ್ ಏರಿಯಾಗಳಲ್ಲಿ ಕ್ರಮವಾಗಿ 45 ಕೋಟಿ, 15 ಕೋಟಿ ಹಾಗೂ 40 ಕೋಟಿ ಹಣ ನೀಡಿ ‘ಕಾಂತಾರ’ ಸಿನಿಮಾದ ಬಿಡುಗಡೆ ಹಕ್ಕು ಖರೀದಿ ಮಾಡಲಾಗಿದೆ.
ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ನಲ್ಲಿ ಕನ್ನಡ ಮೂಲದ ಬಾಲಿವುಡ್ ನಟ
2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ತೆಲುಗು ರಾಜ್ಯಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ‘ಕಾಂತಾರ’ ಸಿನಿಮಾ ತೆಲುಗು ಆವೃತ್ತಿಯಲ್ಲಿ ಬಿಡುಗಡೆ ಆದ ಮೊದಲ ದಿನವೇ 5 ಕೋಟಿ ಹಣ ಗಳಿಸಿತ್ತು. ಅದಾದ ಬಳಿಕ 40 ದಿನಗಳಲ್ಲಿ 60 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿತ್ತು. ಆಗ ಯಾವುದೇ ಹೆಚ್ಚಿನ ಹೈಪ್ ಇಲ್ಲದೆ 60 ಕೋಟಿ ಗಳಿಸಿದ್ದ ಸಿನಿಮಾ ಈಗ ‘ಕಾಂತಾರ ಚಾಪ್ಟರ್ 1’ ಅದರ ಮೂರು ಪಟ್ಟು ಹಣ ಗಳಿಸುವ ನಿರೀಕ್ಷೆ ಸಿನಿಮಾ ವಿತರಕರಿಗೆ ಇದೆ.
ಸದ್ಯಕ್ಕೆ ಆಂಧ್ರ ಮತ್ತು ತೆಲಂಗಾಣ ಭಾಗಗಳಿಗಷ್ಟೆ ‘ಕಾಂತಾರ ಚಾಪ್ಟರ್ 1’ ಸಿನಿಮಾದ ವಿತರಣೆ ಹಕ್ಕನ್ನು ಹೊಂಬಾಳೆ ಫಿಲಮ್ಸ್ ಮಾರಾಟ ಮಾಡಿದೆ. ತಮಿಳುನಾಡು, ಕೇರಳ, ಹಿಂದಿ ಹಾಗೂ ವಿದೇಶದ ಬಿಡುಗಡೆ ಹಕ್ಕನ್ನು ಮಾರಾಟ ಮಾಡಬೇಕಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ