ವಿಕ್ರಮ್ ರವಿಚಂದ್ರನ್ ಜೊತೆ ಕೈ ಜೋಡಿಸಿದ ಅಮೃತಾ ಸಿನಿ ಕ್ರಾಫ್ಟ್
ರವಿಚಂದ್ರನ್ ಮಕ್ಕಳಾದ ಮನೋರಂಜನ್ ಮತ್ತು ವಿಕ್ರಮ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿಕ್ರಮ್ ರವಿಚಂದ್ರನ್ ಅವರ ಹೊಸ ಚಿತ್ರಗಳ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. ಅಮೃತಾ ಸಿನಿ ಕ್ರಾಫ್ಟ್ ಮೂಲಕ ಉದ್ಯಮಿ ವಿಜಯ್ ಟಾಟಾ ಜೊತೆ ವಿಕ್ರಮ್ ರವಿಚಂದ್ರನ್ ಕೈ ಜೋಡಿಸಿದ್ದಾರೆ.

ನಟ ವಿಕ್ರಮ್ ರವಿಚಂದ್ರನ್ (Vikram Ravichandran) ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ವೇಳೆ ಸುದ್ದಿಗೋಷ್ಠಿ ನಡೆಸಿ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಲಾಯಿತು. ಉದ್ಯಮಿ ವಿಜಯ್ ಟಾಟಾ ಅವರು ತಮ್ಮ ‘ಅಮೃತಾ ಸಿನಿ ಕ್ರಾಫ್ಟ್’ ಮೂಲಕ ವಿಕ್ರಮ್ ಅವರ ಹೊಸ ಸಿನಿಮಾವನ್ನು ನಿರ್ಮಿಸಲು ಮುಂದಾಗಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಯಲ್ಲಿ ವಿತರಣೆ , ಮಾರ್ಕೆಟಿಂಗ್ ಸೇರಿದಂತೆ ಬೇರೆ ಸಿನಿಮಾಗಳ ಜೊತೆ ಕೈ ಜೋಡಿಸಲು ಅವರು ಸಜ್ಜಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಿಕ್ರಮ್ ರವಿಚಂದ್ರನ್, ‘ಮುಧೋಳ್’ ಸಿನಿಮಾದ ನಿರ್ಮಾಪಕಿ ರಕ್ಷಾ, ಉದ್ಯಮಿ, ನಿರ್ಮಾಪಕ ವಿಜಯ್ ಟಾಟಾ (Vijay Tata) ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿಗೋಷ್ಠಿಯಲ್ಲಿ ವಿಕ್ರಮ್ ರವಿಚಂದ್ರನ್ ಅವರು ಮಾತನಾಡಿದರು. ‘ಸಾಮಾನ್ಯವಾಗಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಬೇರೆ ಬೇರೆ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ಈ ಬಾರಿ ನನ್ನ ಬರ್ತಡೇ ದಿನವೇ ಒಂದೆರಡು ದೊಡ್ಡ ಅನೌನ್ಸ್ಮೆಂಟ್ ಮಾಡಬೇಕು ಎಂದು ನಮ್ಮ ವಿಜಯ್ ಸರ್ ಹೇಳಿದ್ದರಿಂದ ನಿಮ್ಮ ಮುಂದೆ ಹೇಳಬೇಕೆಂದು ನಿರ್ಧರಿಸಿದ್ದೇವೆ’ ಎಂದು ಅವರು ಮಾತು ಆರಂಭಿಸಿದರು.
‘ನಾನು ಏನೇ ಹೇಳಿದರೂ ರವಿಚಂದ್ರನ್ ಮಗ ಎಂಬುದು ಎಲ್ಲರಿಗೂ ಗೊತ್ತೇ ಇದೆ. ನಾನು 2ನೇ ಸಿನಿಮಾ ಮಾಡಿದಾಗ ನಮ್ಮ ಅಣ್ಣ ನಟಿಸಿದ ‘ಮುಗಿಲು ಪೇಟೆ’ ಸಿನಿಮಾದ ನಿರ್ಮಾಣಕ್ಕೆ ಸಾಥ್ ಕೊಟ್ಟ ನಿರ್ಮಾಪಕಿ ರಕ್ಷಾ ಅವರು ನನಗೂ ಬೆಂಬಲವಾಗಿ ನಿಂತರು. ನನ್ನ ಡ್ರೀಮ್ ಪ್ರಾಜೆಕ್ಟ್ಗೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ನನ್ನ ಹೊಸ ಪ್ರಾಜೆಕ್ಟ್ಗೆ ಟೀಮ್ ಹುಡುಕುತ್ತಿದ್ದಾಗ ಒಬ್ಬ ಟ್ಯಾಲೆಂಟೆಡ್ ವ್ಯಕ್ತಿ ಸಿಕ್ಕರು. ಅವರೇ ನಿರ್ದೇಶಕ ಕಾರ್ತಿಕ್ ರಾಜು’ ಎಂದು ವಿಕ್ರಮ್ ರವಿಚಂದ್ರನ್ ಹೇಳಿದರು.
‘ನಾನು, ನಿರ್ದೇಶಕರು ಹಾಗೂ ನಿರ್ಮಾಪಕರು ಕೂತು ಚರ್ಚೆ ಮಾಡಿದಾಗ ಹುಟ್ಟಿಕೊಂಡ ಸಿನಿಮಾನೇ ‘ಮುಧೋಳ್’. ಎಲ್ಲವೂ ಅಂದುಕೊಂಡಂತೆ ಚೆನ್ನಾಗಿ ನಡೆದಿತ್ತು. ನಮ್ಮ ಪ್ರಕಾರ ಈ ಸಿನಿಮಾ ಬಹಳ ಜನರಿಗೆ ಲೈಫ್ ಆಗಬೇಕು. ನನ್ನನ್ನೂ ಸೇರಿದಂತೆ ಸಿನಿಮಾದ ಡೈರೆಕ್ಟರ್, ಸಂಗೀತ ನಿರ್ದೇಶಕರು, ಎಡಿಟರ್ ಹಾಗೂ ಬಹಳಷ್ಟು ಜನರು ಹೊಸಬರು’ ಎಂದರು ವಿಕ್ರಮ್.
‘ಈ ಸಿನಿಮಾ ಸರಿಯಾದ ಸಮಯದಲ್ಲಿ ದೊಡ್ಡ ಕೊಲಾಬ್ರೇಶನ್ ಮೂಲಕ ಪ್ರೇಕ್ಷಕರ ಮುಂದೆ ಬರಬೇಕು ಎಂಬ ಹುಡುಕಾಟದಲ್ಲಿ ಇದ್ದಾಗ ಡೈರೆಕ್ಟರ್ ಋಷಿ ಹೇಳಿದ ಕಥೆ ಕೇಳಿ ಇಷ್ಟ ಆಯಿತು. ನಿರ್ಮಾಪಕರು ವಿಜಯ್ ಟಾಟಾ ಎಂಬುದು ಗೊತ್ತಾಗಿತು. ಆಗ ಸಿನಿಮಾ ಮಾಡೋಣ ಅಂತ ನಿರ್ಧಾರ ಮಾಡಿದೆ. ಅಮೃತಾ ಸಿನಿ ಕ್ರಾಫ್ಟ್ ಮೂಲಕ ಸಿನಿಮಾ ಅನೌನ್ಸ್ ಆಯಿತು’ ಎಂದು ವಿಕ್ರಮ್ ರವಿಚಂದ್ರನ್ ಹೇಳಿದರು.
ಇದನ್ನೂ ಓದಿ: ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
‘ಬಳಿಕ ಮುಧೋಳ್ ಬಗ್ಗೆ ಕೂಡ ವಿಜಯ್ ಟಾಟಾ ಕೇಳಿದರು. ಸಿನಿಮಾದ ಕಂಟೆಂಟ್ ತೋರಿಸಿದೆ. ಅವರಿಗೆ ತುಂಬಾ ಇಷ್ಟವಾಯಿತು. ಅಲ್ಲಿಂದ ಸ್ವಲ್ಪ ಬದಲಾವಣೆ ಆಯಿತು. ನಿರ್ಮಾಪಕಿ ರಕ್ಷಾ ಮತ್ತು ವಿಜಯ್ ಚರ್ಚೆ ಮಾಡಿದ ನಂತರ ನಮ್ಮ ತಂಡದ ಜೊತೆ ಅಮೃತಾ ಸಿನಿ ಕ್ರಾಫ್ಟ್ ಸಾಥ್ ನೀಡಿದೆ. ನಮ್ಮ ಮುಧೋಳ್ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಸಹಯೋಗ ಮಾಡಿಕೊಂಡಿದ್ದೇವೆ’ ಎಂದು ವಿಕ್ರಮ್ ರವಿಚಂದ್ರನ್ ಅವರು ಅಪ್ಡೇಟ್ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




