31ನೇ ದಿನ ಕೂಡ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
ರಾಜ್ ಬಿ. ಶೆಟ್ಟಿ, ಸಂಧ್ಯಾ ಅರಕೆರೆ ಮುಂತಾದವರು ನಟಿಸಿರುವ ‘ಸು ಫ್ರಮ್ ಸೋ’ ಸಿನಿಮಾದ ಅಬ್ಬರ ಮುಂದುವರಿದಿದೆ. ಜೆ.ಪಿ. ತುಮಿನಾಡು ನಿರ್ದೇಶನ ಮಾಡಿರುವ ಈ ಸಿನಿಮಾದ ಕಲೆಕ್ಷನ್ 31ನೇ ದಿನ ಕೂಡ ಕೋಟಿ ರೂಪಾಯಿ ಮೀರಿಸಿದೆ. ‘ಸು ಫ್ರಮ್ ಸೋ’ ಸಿನಿಮಾ ಈವರೆಗೂ ಎಷ್ಟು ಕೆಲಕ್ಷನ್ ಮಾಡಿದೆ ಎಂಬ ಮಾಹಿತಿ ಇಲ್ಲಿದೆ.

ರಿಲೀಸ್ ಆದ ದಿನ ಸಂಜೆಯೇ ಸಕ್ಸಸ್ ಮೀಟ್ ಮಾಡಿಕೊಂಡು ಸಂಭ್ರಮಿಸುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ‘ಸು ಫ್ರಮ್ ಸೋ’ (Su From So) ಸಿನಿಮಾ ಆ ವರ್ಗಕ್ಕೆ ಸೇರುವಂತಹ ಚಿತ್ರ ಅಲ್ಲ. ಈ ಚಿತ್ರದ್ದು ನಿಜವಾದ ಸಕ್ಸಸ್. ಬಿಡುಗಡೆಯಾಗಿ 31 ದಿನ ಕಳೆದರೂ ಕೂಡ ಈ ಸಿನಿಮಾ ಕೋಟ್ಯಂತರ ರೂಪಾಯಿ ಕಲೆಕ್ಷನ್ (Su From So Collection) ಮಾಡುತ್ತಲೇ ಇದೆ. ಪ್ರತಿ ವೀಕೆಂಡ್ನಲ್ಲೂ ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. Sacnilk ವರದಿ ಪ್ರಕಾರ, 30ನೇ ದಿನ ‘ಸು ಫ್ರಮ್ ಸೋ’ ಸಿನಿಮಾಗೆ 1.47 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. 31ನೇ ದಿನ 1.75 ಕೋಟಿ ರೂಪಾಯಿ ಗಳಿಸಿದೆ.
‘ಸು ಫ್ರಮ್ ಸೋ’ ಸಿನಿಮಾದ ಸಾಧನೆ ಸಣ್ಣದಲ್ಲ. ಜುಲೈ 25ರಂದು ಬಿಡುಗಡೆ ಆದ ಈ ಸಿನಿಮಾಗೆ ಜನರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ವಿಶ್ವಾದ್ಯಂತ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರ ತೆರೆಕಂಡ ನಂತರ ಹಲವು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆದವು. ಅವುಗಳಿಗೂ ಪೈಪೋಟಿ ನೀಡಿ ‘ಸು ಫ್ರಮ್ ಸೋ’ ಸಿನಿಮಾ ಮುನ್ನುಗ್ಗುತ್ತಿದೆ.
ಸಾಮಾನ್ಯವಾಗಿ ಕೆಲವು ಸಿನಿಮಾಗಳು ಮೊದಲ ಮೂರು ದಿನ ಅಬ್ಬರಿಸುತ್ತವೆ. ನಂತರ ಅವುಗಳ ಹವಾ ಕಡಿಮೆ ಆಗುತ್ತದೆ. ‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆ ಆದ ಬಳಿಕ ತೆರೆಕಂಡ ‘ಕಿಂಗ್ಡಮ್’, ‘ಕೂಲಿ’, ‘ವಾರ್ 2’ ಮುಂತಾದ ಸಿನಿಮಾಗಳ ಪರಿಸ್ಥಿತಿ ಹೀಗೆಯೇ ಆಯಿತು. ಆದರೆ ‘ಸು ಫ್ರಮ್ ಸೋ’ ಸಿನಿಮಾ ಆ ರೀತಿ ಅಲ್ಲ. 31 ದಿನ ಕಳೆದರೂ ಕೂಡ ಈ ಚಿತ್ರವನ್ನು ಜನರು ಮನಸಾರೆ ವೀಕ್ಷಿಸುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಒಟಿಟಿಗೆ ಬರಲಿದೆ ಎಂಬ ಸುದ್ದಿ ಕೇಳಿಬಂದಿದೆ. ಹಾಗಿದ್ದರೂ ಕೂಡ ಪ್ರೇಕ್ಷಕರು ಈ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇದು ಒಂದರ್ಥದಲ್ಲಿ ಈ ಚಿತ್ರದ ರಿಯಲ್ ಗೆಲವು ಎಂದೇ ಹೇಳಬೇಕು. 31 ದಿನಕ್ಕೆ ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 85.32 ಕೋಟಿ ರೂಪಾಯಿ ಆಗಿದೆ. ವಿದೇಶದ ಗಳಿಕೆಯೂ ಸೇರಿದರೆ 113.37 ಕೋಟಿ ರೂಪಾಯಿ ಆಗಲಿದೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ತಮಿಳು ರಿಮೇಕ್ ಹಕ್ಕನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ ಪುನೀತ್ ಚಿತ್ರದ ನಿರ್ಮಾಪಕ
ಹಾರರ್ ಕಾಮಿಡಿ ಕಥಾಹಂದರ ಇರುವ ‘ಸು ಫ್ರಮ್ ಸೋ’ ಸಿನಿಮಾಗೆ ಜೆ.ಪಿ. ತುಮಿನಾಡು ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಮೊದಲ ಪ್ರಯತ್ನದಲ್ಲೇ ಅವರಿಗೆ ಬ್ಲಾಕ್ ಬಸ್ಟರ್ ಗೆಲುವು ಸಿಕ್ಕಿದೆ. ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ಪಾಲುದಾರಿಕೆ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








