Kantara: ‘ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತೆ ಅಂತ ರಿಷಬ್ ಶೆಟ್ಟಿ ಹೇಳಿದ್ದು ನಿಜವಲ್ಲ’: ನಟ ಚೇತನ್ ತಕರಾರು
Kantara Movie | Bhoota Kola: ‘ಕಾಂತಾರ’ ಸಿನಿಮಾ ರಿಲೀಸ್ ಆದ ಬಳಿಕ ಭೂತಕೋಲದ ಬಗ್ಗೆ ತಿಳಿದುಕೊಳ್ಳಲು ಜನರು ಆಸಕ್ತರಾಗಿದ್ದಾರೆ. ಇದೇ ವಿಷಯದ ಬಗ್ಗೆ ಚೇತನ್ ಪೋಸ್ಟ್ ಮಾಡಿದ್ದಾರೆ.
ನಟ ‘ಆ ದಿನಗಳು’ ಚೇತನ್ (Aa Dinagalu Chetan) ಅವರು ತಮ್ಮದೇ ದೃಷ್ಟಿಕೋನವನ್ನು ಮಂಡಿಸುವ ಮೂಲಕ ಆಗಾಗ ಸುದ್ದಿ ಆಗುತ್ತಾರೆ. ಆ ಕಾರಣದಿಂದ ಅವರು ಪರ-ವಿರೋಧಗಳನ್ನು ಕಟ್ಟಿಕೊಂಡಿದ್ದು ಕೂಡ ಉಂಟು. ಈಗ ಅವರು ‘ಕಾಂತಾರ’ (Kantara) ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದ ಕುರಿತು ತಮಗೆ ಅನಿಸಿದ್ದನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, ಜನರು ಹಲವು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಚೇತನ್ ಹೇಳುವ ಪ್ರಕಾರ, ‘ಕಾಂತಾರ’ ಚಿತ್ರದಲ್ಲಿ ತೋರಿಸಿದ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ರಿಷಬ್ ಶೆಟ್ಟಿ (Rishab Shetty) ಅವರು ಹೇಳಿರುವುದು ನಿಜವಲ್ಲ ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಈಗ ಚರ್ಚೆ ಶುರುವಾಗಿದೆ.
ಕನ್ನಡದ ‘ಕಾಂತಾರ’ ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿದೆ. ‘ಹೊಂಬಾಳೆ ಫಿಲ್ಮ್ಸ್’ ಮೂಲಕ ಮೂಡಿಬಂದ ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶಿಸಿದ್ದಾರೆ. ಮುಖ್ಯ ಪಾತ್ರದಲ್ಲೂ ಅವರೇ ನಟಿಸಿದ್ದಾರೆ. ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿದ್ದು, ಎಲ್ಲರೂ ‘ಕಾಂತಾರ’ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಟ ಚೇತನ್ ಅವರು ಬೇರೊಂದು ಆಯಾಮವನ್ನು ಮುಂದಿಟ್ಟಿದ್ದಾರೆ.
ಭೂತಕೋಲ ಬಗ್ಗೆ ಚೇತನ್ ಹೇಳಿದ್ದೇನು?
‘ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ’ ಎಂದು ಚೇತನ್ ಪೋಸ್ಟ್ ಮಾಡಿದ್ದಾರೆ.
ಪ್ರಚಾರದಲ್ಲಿ ರಿಷಬ್ ಶೆಟ್ಟಿ ಬ್ಯುಸಿ:
ಚೇತನ್ ಅವರ ಅಭಿಪ್ರಾಯಕ್ಕೆ ನಿರ್ದೇಶಕ ರಿಷಬ್ ಶೆಟ್ಟಿ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ. ‘ಕಾಂತಾರ’ ಸಿನಿಮಾ ರಿಲೀಸ್ ಆದ ಬಳಿಕ ಭೂತಕೋಲದ ಬಗ್ಗೆ ತಿಳಿದುಕೊಳ್ಳಲು ಜನರು ಆಸಕ್ತರಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಅವರು ಸಿನಿಮಾದ ಯಶಸ್ಸನ್ನು ಸಂಭ್ರಮಿಸುವುದರ ಜೊತೆಗೆ ಪ್ರಚಾರ ಕಾರ್ಯದಲ್ಲೂ ಬ್ಯುಸಿ ಆಗಿದ್ದಾರೆ. ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆಗಳಿಗೆ ತೆರಳಿ ಅವರು ಸಂದರ್ಶನ ನೀಡಿದ್ದಾರೆ.
ಭರ್ಜರಿ ಆಗಿದೆ ‘ಕಾಂತಾರ’ ಬಾಕ್ಸ್ ಆಫೀಸ್ ಕಲೆಕ್ಷನ್:
ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ಎಲ್ಲ ಭಾಷೆಗಳಿಂದ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಇಂದಿಗೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಒಟ್ಟಾರೆಯಾಗಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:43 am, Wed, 19 October 22