
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಆಗಿರುವ ನಟಿ ಜಯಮಾಲಾ ಅವರು ‘ವಿದಿ’ (Vidhi) ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇರಲಿದೆ ಎಂದು ಚಿತ್ರತಂಡ ಹೇಳಿದೆ. ಇತ್ತೀಚೆಗೆ ಚಿತ್ರತಂಡದವರು ಜಯಮಾಲಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಜಯಮಾಲಾ (Jayamala) ಅವರು ಚಿತ್ರತಂಡಕ್ಕೆ ಶುಭ ಕೋರಿದರು.
‘ವಿದಿ’ ಸಿನಿಮಾದ ಪೋಸ್ಟರ್ ಅನಾವರಣ ಮಾಡಿದ ಬಳಿಕ ಜಯಮಾಲಾ ಅವರು ಮಾತನಾಡಿದರು. ಮಹಿಳಾಪ್ರಧಾನ ಕಥೆ ಇರುವ ಸಿನಿಮಾ ಎಂಬುದನ್ನು ತಿಳಿದು ಅವರು ಸಂತಸ ವ್ಯಕ್ತಪಡಿಸಿದರು. ಈ ರೀತಿಯ ಸಿನಿಮಾಗಳ ಅವಶ್ಯಕತೆ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟರು. ತಾವು ಕೂಡ ಇಂಥ ಸಿನಿಮಾಗಳನ್ನು ನೋಡಲು ಆಸಕ್ತಿ ಹೊಂದಿರುವುದಾಗಿ ಅವರು ತಿಳಿಸಿದರು.
‘ಈ ಚಿತ್ರದಲ್ಲಿ ಹೆಣ್ಣುಮಗಳ ಕಥೆ ಇರುತ್ತದೆಂದು ಚಿತ್ರತಂಡದವರು ಹೇಳಿದ್ದಾರೆ. ದೀಪವು ನಿನ್ನದೆ ಗಾಳಿಯೂ ನಿನ್ನದೆ. ಆರದಿರಲಿ ಬೆಳಕು ಎಂಬ ಮನಮುಟ್ಟುವಂತಹ ಪದಗಳು ಕುತೂಹಲ ಮೂಡಿಸುತ್ತದೆ. ಇಂತಹ ಚಿತ್ರಗಳು ಮಹಿಳೆಯರಿಗೆ ಧೈರ್ಯ ತುಂಬುವಂತಿರಬೇಕು. ನಾನು ಕೂಡ ಚಿತ್ರ ನೋಡಲು ಉತ್ಸುಕಳಾಗಿದ್ದೇನೆ’ ಎಂದು ಜಯಮಾಲಾ ಅವರು ಹೇಳಿದರು.
ಜಯಮಾಲಾ ಅವರನ್ನು ‘ವಿದಿ’ ಚಿತ್ರತಂಡ ಭೇಟಿಯಾದಾಗ ಹಿರಿಯ ಕಲಾವಿದರಾದ ಸುಂದರ್ ರಾಜ್, ಕರಿಸುಬ್ಬು, ಜಯಸಿಂಹ ಮುಸೂರಿ ಮುಂತಾದವರು ಉಪಸ್ಥಿತರಿದ್ದರು. ‘ವಿ.ಆರ್.ಎಸ್. ಪ್ರೊಡಕ್ಷನ್’ ಮೂಲಕ ಉದ್ಯಮಿ ಮತ್ತು ಸಮಾಜ ಸೇವಕರಾಗಿರುವ ಎಸ್.ವಿ. ಉಮಾಶಂಕರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ.
ಇದನ್ನೂ ಓದಿ: 93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ನಾಗತ್ತಿಹಳ್ಳಿ ಚಂದ್ರಶೇಖರ್ ಹಾಗೂ ಪಿ. ಶೇಷಾದ್ರಿ ಅವರ ಶಿಷ್ಯನೆಂದು ಗುರುತಿಸಿಕೊಂಡ ಜಗದೀಶ್ ಕೊಪ್ಪ ಅವರು ‘ವಿದಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾ. ನಿರ್ದೇಶನದ ಜೊತೆ ಚಿತ್ರಕಥೆ ಬರೆದು, ನಿರ್ಮಾಣದಲ್ಲಿಯೂ ಅವರ ಕೈ ಜೋಡಿಸಿದ್ದಾರೆ. ಪಾತ್ರವರ್ಗ ಮತ್ತು ತಂತ್ರಜ್ಞರ ವಿವರಗಳನ್ನು ಸದ್ಯದಲ್ಲೇ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.