ಹೊರಾಂಗಣ ಚಿತ್ರೀಕರಣ (Outdor Shooting) ಕಾರ್ಮಿಕರ ಸಂಘವು (Shooting Labor) ವೇತನ ಹೆಚ್ಚಳ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂನ್ 5ರಿಂದ ಚಿತ್ರೀಕರಣಕ್ಕೆ ಬಹಿಷ್ಕಾರ ಹೇಳಿದ್ದವು. ಆದರೆ ಫಿಲಂ ಚೇಂಬರ್ ಹಾಗೂ ನಿರ್ಮಾಪಕರ ಸಂಘವು (Producer) ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘದೊಟ್ಟಿಗೆ ಮಾತುಕತೆ ನಡೆಸಿದ್ದು ಬೇಡಿಕೆಗಳ ಈಡೇರಿಕೆಗೆ ಹದಿನೈದು ದಿನಗಳ ಗಡುವನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲೆ ನಿರ್ಮಾಪಕರ ಸಂಘವು ಲೈಟ್ಮೆನ್ ಕಾರ್ಮಿಕರ ಸಂಘ, ಯೂನಿಕ್ ಮಾಲೀಕರ, ತಂತ್ರಜ್ಞರ ಸಂಘದ ವಿರುದ್ಧ ಸರಣಿ ದೂರುಗಳನ್ನು ಮಾಡಿದ್ದು, ಕೆಲವಾರು ಪ್ರಶ್ನೆಗಳನ್ನು ಸಹ ಮಾಡಿದೆ.
ಕ್ಯಾಮೆರಾಮನ್ಗಳ ಬಳಿ ಕೆಲಸಕ್ಕೆ ಇರುವವರೇ ಪ್ರತ್ಯೇಕವಾಗಿ ಜನರೇಟರ್ ಇನ್ನಿತರೆ ಯೂನಿಟ್ಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ. ಲೈಟ್ಮೆನ್ ಹಾಗೂ ಇನ್ನಿತರೆ ಸಂಘಗಳ ಒಟ್ಟು ಸದಸ್ಯರ ಸಂಖ್ಯೆಯಾದರೂ ಗೊತ್ತಿದೆಯೇ? ಪ್ಯಾಕೇಜ್ ಹೆಸರಲ್ಲಿ ಕಡಿಮೆ ಹಣದ ಆಮಿಷ ತೋರಿಸಿ ಆ ಬಳಿಕ ಹೆಚ್ಚುವರಿ ಹಣ ಪೀಕಿಸುತ್ತಿರುವುದು ನಿರ್ಮಾಪಕರಿಗೆ ಹೊರೆಯಾಗುತ್ತಿದೆ. ಯುನಿಟ್ ಮಾಲೀಕರು ಒಪ್ಪಿಕೊಂಡ ಚಿತ್ರಗಳಿಗೆ ಯೂನಿಟ್ನ ಸದಸ್ಯರೇ ಬೇರೆ ಯೂನಿಟ್ನಿಂದ ಯಂತ್ರಗಳನ್ನು ಕರೆಸಿ ಹಾಕುತ್ತಿದ್ದಾರೆ. ಇದು ನಿಯಮಕ್ಕೆ ಬಾಹಿರವಲ್ಲವೆ? ಇತ್ಯಾದಿ ಪ್ರಶ್ನೆಗಳನ್ನು ನಿರ್ಮಾಪಕ ಸಂಘದವರು ಕೇಳಿದ್ದಾರೆ.
ಎಂಟು ಲೈಟ್ಮೆನ್ಗಳನ್ನು ಕೆಲಸಕ್ಕೆ ಕಳಿಸಿ 10 ಜನರ ಭತ್ಯೆ ಪಡೆದುಕೊಳ್ಳಲಾಗುತ್ತಿದೆ. ಯೂನಿಟ ಸದಸ್ಯರ ಮಾಹಿತಿ ಕೇಳಿದರೆ ನಾವು ಸಂಘದಲ್ಲಿಲ್ಲ ಎಂದು ಹೇಳುತ್ತಾರೆ, ಸಂಘದ ಸದಸ್ಯರಲ್ಲದೇ ಇರುವವರನ್ನು ಏಕೆ ಕೆಲಸಕ್ಕೆ ಕಳಿಸುತ್ತಿದ್ದೀರಿ? ನಿರ್ಮಾಪಕರಿಂದ ಹೆಚ್ಚಿನ ಹಣ ಪಡೆದು ಕಾರ್ಮಿಕರಿಗೆ ಕಡಿಮೆ ಹಣ ನೀಡುತ್ತಿರುವುದು ಸಹ ನಮ್ಮ ಗಮನಕ್ಕೆ ಬಂದಿದೆ. ಇದು ನಿರ್ಮಾಪಕರಿಗೆ ಮಾಡಿದ ಮೋಸ ಅಲ್ಲವೆ? 40-50 ಜನ ಯೂನಿಟ್ ಸರಬರಾಜು ಮಾಡುತ್ತಿದ್ದಾರೆ. ಇದರಲ್ಲಿ ಒಬ್ಬರೂ ಸಹ ವಾಣಿಜ್ಯ ಮಂಡಳಿ ಸದಸ್ಯರಾಗಿಲ್ಲ ಎಂದಿದೆ ನಿರ್ಮಾಪಕರ ಸಂಘ.
ಇನ್ನು ಈ ಒತ್ತಾಯ, ಪ್ರತಿಭಟನೆಗಳ ಬಗ್ಗೆ ಮಾತನಾಡಿರುವ ಫಿಲಂ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್, ”ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಭತ್ಯೆ ಹೆಚ್ಚಳದ ಬಗ್ಗೆ ಮೊದಲಿನಿಂದಲೂ ಬೇಡಿಕೆ ಇದೆ. ಕೋವಿಡ್ ಇದ್ದ ಕಾರಣದಿಂದ ಭತ್ಯೆ ಹೆಚ್ಚಳ ಮಾಡಿರಲಿಲ್ಲ. ಆ ಬಗ್ಗೆ ಸಮಿತಿ ರಚಿಸಲಾಗಿದ್ದು ಕೆ.ಮಂಜು, ರಾಕ್ಲೈನ್ ವೆಂಕಟೇಶ್, ದಯಾಳು ಅವಿನಾಶ್, ಸೂರಪ್ಪ ಬಾಬು ಸಮಿತಿಯಲ್ಲಿದ್ದಾರೆ. ಇನ್ನು ಡ್ಯಾನ್ಸ್ ಹಾಗೂ ಫೈಟರ್ ಅಸೋಸಿಯೇಷನ್ನ ಮೀಟಿಂಗ್ ಇದೆ. ಅದರ ಬಗ್ಗೆ ಚರ್ಚೆ ಮಾಡಿ ಅದನ್ನೂ ಸರಿಪಡಿಸುತ್ತೇವೆ. ಇನ್ನು ಯೂನಿಟ್ ಮಾಲೀಕರು ಹಾಗೂ ಅವರ ಕಾರ್ಮಿಕರ ನಡುವೆ ಭಿನ್ನಾಭಿಪ್ರಾಯ ಇತ್ತು ಅದನ್ನು ಸಹ ಸರಿಪಡಿಸುತ್ತೇವೆ” ಎಂದಿದ್ದಾರೆ.
ಶೂಟಿಂಗ್ ಬಂದ್ ಮಾಡುವ ಬೆದರಿಕೆ ಬಗ್ಗೆ ಮಾತನಾಡಿದ ಭಾಮಾ ಹರೀಶ್, ”ಶೂಟಿಂಗ್ ಬಂದ್ ಮಾಡುವ ಬಗ್ಗೆ ಕೆಲವರು ಹೇಳಿದ್ದರು. ಆದರೆ ಹಾಗಾಗಲು ಬಿಟ್ಟಿಲ್ಲ. ಅವರನ್ನು ಕಚೇರಿಗೆ ಕರೆಸಿ ಮಾತನಾಡಿದ್ದೇವೆ. ನಮ್ಮ ಕಾರ್ಯದರ್ಶಿಗಳು ಅವರೊಟ್ಟಿಗೆ ಮಾತನಾಡಿಸಿ ಸಂಧಾನ ಮಾಡಿದ್ದಾರೆ. ಜೂನ್ 5 ರಂದು ಚಿತ್ರೀಕರಣ ಬಂದ್ ಆಗುವುದಿಲ್ಲ. ಎಂದಿನಂತೆ ಸರಾಗವಾಗಿ ಶೂಟಿಂಗ್ ನಡೆಯಲಿದೆ” ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ