
ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳಾದ ದರ್ಶನ್ ಹಾಗೂ ಸುದೀಪ್ (Kichcha Sudeep) ಅವರ ಅಭಿಮಾನಿಗಳ ನಡುವೆ ಸಂಘರ್ಷ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಲಾಗುತ್ತಿದೆ. ಈ ಘಟನೆಗಳ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಿರ್ದೇಶಕ ‘ಜೋಗಿ’ ಪ್ರೇಮ್ (Jogi Prem) ಅವರು ಟಿವಿ9 ಜೊತೆ ಮಾತನಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ತಾವು ಕಂಡಂತೆ ಕಿಚ್ಚ ಸುದೀಪ್ ಹಾಗೂ ದರ್ಶನ್ (Darshan) ಹೇಗೆ ಇದ್ದಾರೆ ಎಂಬುದನ್ನು ಪ್ರೇಮ್ ವಿವರಿಸಿದ್ದಾರೆ.
‘ನನ್ನ ಮುಂದೆ ಸುದೀಪ್ ಅವರು ದರ್ಶನ್ ಬಗ್ಗೆಯಾಗಲೀ, ದರ್ಶನ್ ಕುಟುಂಬದ ಬಗ್ಗೆಯಾಗಲಿ ಮಾತನಾಡಿಲ್ಲ. ಮಧ್ಯದಲ್ಲಿ ಯಾರೋ ಕಿತಾಪತಿ ಮಾಡುತ್ತಾರೆ. ಅದಕ್ಕೆ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಕಿವಿಗೊಡಬಾರದು. ಸುದೀಪ್ ಅವರು ಒಂದು ಒಳ್ಳೆಯ ಮಾತು ಹೇಳಿದ್ದಾರೆ. ಸಿನಿಮಾ ಚೆನ್ನಾಗಿ ಇದ್ದರೆ ಮಾತ್ರ ಫ್ಯಾನ್ಸ್ ಬರುತ್ತಾರೆ, ಸಿನಿಮಾ ಚೆನ್ನಾಗಿ ಇಲ್ಲದಿದ್ದರೆ ಯಾರೂ ಬರಲ್ಲ ಅಂತ ಹೇಳಿದ್ದಾರೆ. ಇಲ್ಲಿ ಹೀರೋ, ಹೀರೋಗಿರಿಗಿಂತ ಸಿನಿಮಾ ದೊಡ್ಡದು’ ಎಂದಿದ್ದಾರೆ ಜೋಗಿ ಪ್ರೇಮ್.
‘ಸುದೀಪ್ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಅವರ ವೈಯಕ್ತಿಕ ಕಾರಣ ಇರಬಹುದು. ಆದರೆ ಯಾವತ್ತೂ ಕೂಡ ಅವರು ಪರಸ್ಪರ ಕೆಟ್ಟದಾಗಿ ಬೈಯ್ದುಕೊಂಡಿಲ್ಲ. ಕೆಟ್ಟದಾಗಿ ಮಾತನಾಡಿಲ್ಲ. ನನಗೆ ಅವರು ಆತ್ಮೀಯರಾದ ಕಾರಣ ತುಂಬಾ ಚೆನ್ನಾಗಿ ಗೊತ್ತಿದ್ದಾರೆ. ಸುದೀಪ್ ಜೊತೆ ಸಿನಿಮಾ ಮಾಡುತ್ತೇನೆ ಎಂದಾಗ ಚೆನ್ನಾಗಿ ಮಾಡಿ ಅಂತ ದರ್ಶನ್ ಹೇಳುತ್ತಾರೆ. ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಅಂತ ಸುದೀಪ್ ಅವರಿಗೆ ಹೇಳಿದಾಗ ಚೆನ್ನಾಗಿ ಮಾಡು ಅಂತಾನೇ ಅವರು ಕೂಡ ಹೇಳಿದ್ದರು. ದರ್ಶನ್ ಮತ್ತು ಸುದೀಪ್ ಅವರ ಮನಸ್ಸಿನ ಒಳಗಿರುವ ಭಾವನೆ ಬಗ್ಗೆ ನನಗೆ ತಿಳಿದಿಲ್ಲ’ ಎಂದಿದ್ದಾರೆ ಪ್ರೇಮ್.
‘ನನ್ನ ಕುಟುಂಬಕ್ಕೆ ದರ್ಶನ್ ಮತ್ತು ಸುದೀಪ್ ಇಬ್ಬರೂ ಆತ್ಮೀಯರು. ಇಬ್ಬರ ಜೊತೆಗೂ ನಾನು ಕೆಲಸ ಮಾಡಿದ್ದೇನೆ. ಸುದೀಪ್ ಅವರನ್ನು ಅಣ್ಣನ ಸ್ಥಾನದಲ್ಲಿ ನೋಡುತ್ತೇನೆ. ದರ್ಶನ್ ನನಗೆ ಸ್ನೇಹಿತ, ಆತ್ಮೀಯರು. ದರ್ಶನ್ ಅವರು ಸಹ ಸುದೀಪ್ ಬಗ್ಗೆ ಒಂದು ದಿನವೂ ಕೆಟ್ಟದಾಗಿ ಮಾತಾಡಿಲ್ಲ. ಯಾರೋ ಕಿಡಿಗೇಡಿಗಳು ಮಧ್ಯದಲ್ಲಿ ಬೆಂಕಿ ಹಚ್ಚೋದರಿಂದ ಈ ರೀತಿ ಮಾಡುತ್ತಿದ್ದಾರೆ’ ಎಂಬುದು ಜೋಗಿ ಪ್ರೇಮ್ ಮಾತು.
ಇದನ್ನೂ ಓದಿ: ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ? ಉತ್ತರ ನೀಡಿದ ಕಿಚ್ಚ ಸುದೀಪ್
‘ಮಾರ್ಕ್’ ಮತ್ತು ‘45’ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುತ್ತಿವೆ. ಆ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ‘ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದಾಗ ಖಂಡಿತವಾಗಿಯೂ ಬಾಕ್ಸ್ ಆಫೀಸ್ ಮೇಲೆ ಹೊಡೆತ ಬೀಳುತ್ತದೆ. ಒಂದು ಸಮಯಕ್ಕೆ ಒಂದು ಸಿನಿಮಾ ಬಿಡುಗಡೆ ಆದರೆ ನಮ್ಮ ಕನ್ನಡಿಗರು ಖಂಡಿತಾ ಸಪೋರ್ಟ್ ಮಾಡುತ್ತಾರೆ. 2 ಸಿನಿಮಾ ಬಂದರೆ ವ್ಯವಹಾರಕ್ಕೆ ಹೊಡೆತ ಬೀಳುತ್ತದೆ’ ಎಂದು ಪ್ರೇಮ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.