ಅಚ್ಚರಿಯ ರೀತಿಯಲ್ಲಿ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್ ಲೆಕ್ಕ ನೋಡಿ ಪರಭಾಷೆ ಮಂದಿ ಹೌಹಾರಿದ್ದಾರೆ. ಅನೇಕ ಸ್ಟಾರ್ ಸಿನಿಮಾಗಳಿಗೆ ಸೆಡ್ಡು ಹೊಡೆದು ‘ಕೆಜಿಎಫ್ 2’ ಮುನ್ನುಗ್ಗುತ್ತಿದೆ. ವಿಶ್ವಾದ್ಯಂತ ಈ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ. ನಟ ಯಶ್ (Yash) ಅವರ ಅಭಿಮಾನಿಗಳಿಗೆ ಇದು ಸಖತ್ ಖುಷಿ ನೀಡಿದೆ. ವಿಶ್ವಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಬಾಕ್ಸ್ ಆಫೀಸ್ ಕಲೆಕ್ಷನ್ (KGF Chapter 2 Box Office Collection) ಈಗ 551 ಕೋಟಿ ರೂಪಾಯಿ ದಾಟಿದೆ! ಕೇವಲ ನಾಲ್ಕು ದಿನಕ್ಕೆ ಈ ಸಾಧನೆ ಮಾಡಿರುವುದು ‘ಕೆಜಿಎಫ್ 2’ ಹೆಚ್ಚುಗಾರಿಕೆ. ಕನ್ನಡದ ಸಿನಿಮಾಗೆ ಈ ಮಟ್ಟದ ಗೆಲುವು ಸಿಕ್ಕಿರುವುದು ಇಡೀ ಸ್ಯಾಂಡಲ್ವುಡ್ ಪಾಲಿನ ಹೆಮ್ಮೆಯೇ ಸರಿ. ನಾಲ್ಕನೇ ದಿನಕ್ಕೆ 551.83 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಈ ಯಶಸ್ಸಿಗಾಗಿ ‘ಕೆಜಿಎಫ್: ಚಾಪ್ಟರ್ 2’ ತಂಡಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮನೋಬಲ ವಿಜಯಬಾಲನ್ ಹಂಚಿಕೊಂಡಿರುವ ಮಾಹಿತಿ ಪ್ರಕಾರ ವಿಶ್ವ ಮಾರುಕಟ್ಟೆಯಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೊದಲ ದಿನ 165.37 ಕೋಟಿ ರೂ. ಕಲೆಕ್ಷನ್ ಮಾಡಿದೆ. ಎರಡನೇ ದಿನ 139.25, ಮೂರನೇ ದಿನ 115.08 ಹಾಗೂ ನಾಲ್ಕನೇ ದಿನ 132.13 ರೂಪಾಯಿ ಆದಾಯ ಬಂದಿದೆ. ನಾಲ್ಕು ದಿನದ ಒಟ್ಟು ಕಲೆಕ್ಷನ್ 551.83 ಕೋಟಿ ರೂಪಾಯಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
#KGFChapter2 WW Box Office
CROSSES ₹500 cr milestone mark in just 4 days.
Day 1 – ₹ 165.37 cr
Day 2 – ₹ 139.25 cr
Day 3 – ₹ 115.08 cr
Day 4 – ₹ 132.13 cr
Total – ₹ 551.83 cr#2 at the global box office after fantastic beasts. #Yash #KGF2
— Manobala Vijayabalan (@ManobalaV) April 18, 2022
ಈ ಅಂಕಿ-ಸಂಖ್ಯೆಯ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಬೇಕಿದೆ. ಮೊದಲ ಮೂರು ದಿನಕ್ಕೆ ಹಿಂದಿ ವರ್ಷನ್ನಿಂದ ಭರ್ಜರಿ ಕಮಾಯಿ ಆಗಿದೆ. 3 ದಿನಕ್ಕೆ 143.64 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ಭಾನುವಾರ (ಏ.17) ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದಿ ಮಾರುಕಟ್ಟೆಯ ನಾಲ್ಕನೇ ದಿನದ ಕಲೆಕ್ಷನ್ ಕುರಿತು ಶೀಘ್ರವೇ ಲೆಕ್ಕ ಸಿಗಲಿದೆ.
ಯಶ್ ವೃತ್ತಿ ಜೀವನದಲ್ಲಿ ಇದು ಬಹುದೊಡ್ಡ ಗೆಲುವು. ‘ನಾನು ಬರೋವರೆಗೂ ಮಾತ್ರ ನನ್ ಹವಾ, ನಾನ್ ಬಂದ್ಮೇಲೆ ನಂದೇ ಹವಾ’ ಎಂದು ಬಹಳ ವರ್ಷಗಳ ಹಿಂದೆಯೇ ಡೈಲಾಗ್ ಹೊಡೆದಿದ್ದರು. ಅದೀಗ ನಿಜವಾಗಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ‘ವರ್ಲ್ಡ್ ಈಸ್ ಮೈ ಟೆರಿಟರಿ’ ಎಂಬ ಡೈಲಾಗ್ ಫೇಮಸ್ ಆಗಿದೆ. ವಿಶ್ವಾದ್ಯಂತ 551 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಆ ಡೈಲಾಗ್ ಅನ್ನು ಕೂಡ ಯಶ್ ನಿಜವಾಗಿಸುತ್ತಿದ್ದಾರೆ.
‘ಕೆಜಿಎಫ್ 2’ ಸಿನಿಮಾದ ಗೆಲುವಿಗೆ ಪರಭಾಷೆ ಸ್ಟಾರ್ ಕಲಾವಿದರು ಬೆರಗಾಗಿದ್ದಾರೆ. ಶಿವಕಾರ್ತಿಕೇಯನ್, ಜಗಪತಿ ಬಾಬು, ರಾಣಾ ದಗ್ಗುಬಾಟಿ, ಕಾರ್ತಿ ಸೇರಿದಂತೆ ಅನೇಕರು ಶ್ಲಾಘಿಸಿದ್ದಾರೆ. ರಜಾ ದಿನ ಮತ್ತು ವೀಕೆಂಡ್ ಕಳೆದರೂ ಈ ಚಿತ್ರದ ಹವಾ ಕಮ್ಮಿ ಆಗಿಲ್ಲ. ಸೋಮವಾರ (ಏ.18) ಕೂಡ ಎಲ್ಲ ಕಡೆಗಳಲ್ಲಿ ಈ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆ ಮೂಲಕ ಹಲವು ದಾಖಲೆಗಳನ್ನು ಪುಡಿ ಮಾಡುತ್ತ ಮುನ್ನುಗುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಕಲಾವಿದರಾದ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ತಂಡದ ಎಲ್ಲರ ಮೊಗದಲ್ಲೂ ನಗು ಮೂಡಿದೆ.
ಇದನ್ನೂ ಓದಿ:
‘ಕೆಜಿಎಫ್: ಚಾಪ್ಟರ್ 2’ ಚಿತ್ರದ ವಿಜಯ ಪತಾಕೆ: ಪರಭಾಷೆ ಸೆಲೆಬ್ರಿಟಿಗಳ ಪ್ರತಿಕ್ರಿಯೆ ಏನು?
‘ಕೆಜಿಎಫ್ 2’ ಹಿಟ್ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್ ಏನಂದ್ರು?