‘ಕೆಜಿಎಫ್: ಚಾಪ್ಟರ್ 2’ (KGF Chapter 2) ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಕೊರೊನಾ ಹಾವಳಿ ನಂತರ ಅತಿ ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ. ವಿಶ್ವಾದ್ಯಂತ 10 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ತೆರೆಕಂಡಿದೆ. ಏ.14ರಂದು ಬಿಡುಗಡೆ ಆಗಿರುವ ಈ ಚಿತ್ರದಿಂದ ಯಶ್ (Yash) ವೃತ್ತಿಜೀವನಕ್ಕೆ ಬಹುದೊಡ್ಡ ಗೆಲುವು ಸಿಕ್ಕಂತಾಗಿದೆ. ಪ್ರಶಾಂತ್ ನೀಲ್ ಅವರು ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ಸಿನಿಮಾದಲ್ಲಿ ನಟಿಸಿದ ಎಲ್ಲ ಕಲಾವಿದರ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ. ಅದ್ದೂರಿ ಮೇಕಿಂಗ್ ಕಂಡು ಪ್ರೇಕ್ಷಕರು ವಾವ್ ಎಂದಿದ್ದಾರೆ. ಎಲ್ಲದರ ಪರಿಣಾಮವಾಗಿ ‘ಕೆಜಿಎಫ್ 2’ ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ (KGF Chapter 2 Box Office Collection) ಮಾಡಿದೆ. ದಾಖಲೆ ಪ್ರಮಾಣದಲ್ಲಿ ಗಲ್ಲಾಪೆಟ್ಟಿಗೆ ಗಳಿಕೆ ಆಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಕನ್ನಡ ಚಿತ್ರರಂಗದ ಮಾರುಕಟ್ಟೆ ಸಣ್ಣದು ಎಂದು ಹೇಳುವ ಒಂದು ಕಾಲ ಇತ್ತು. ಆದರೆ ಆ ಕಾಲ ಈಗ ಬದಲಾಗಿದೆ. ಕನ್ನಡದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾವನ್ನು ವಿಶ್ವಾದ್ಯಂತ ಇರುವ ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ಮೊದಲ ದಿನವೇ ಜನರು ಭರಪೂರ ಪ್ರೀತಿ ತೋರಿಸಿದ್ದಾರೆ. ವಿದೇಶದಲ್ಲೂ ಈ ಚಿತ್ರ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಅಮೆರಿಕದಲ್ಲಿ ಮೊದಲ ದಿನವೇ 7 ಕೋಟಿ ರೂ. ಕಲೆಕ್ಷನ್ ಆಗಿದೆ.
ಕನ್ನಡದಲ್ಲಿ ತಯಾರಾದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳಿಗೆ ಡಬ್ ಆಗಿ ತೆರೆಕಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾಗೆ ಉತ್ತರ ಭಾರತದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಿಂದಿ ವರ್ಷನ್ನಿಂದ ಮೊದಲ ದಿನವೇ ಬರೋಬ್ಬರಿ 45ರಿಂದ 50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗುತ್ತಿದೆ. ದಕ್ಷಿಣ ಭಾರತದ ಕಲೆಕ್ಷನ್ ಮತ್ತು ವಿದೇಶಿ ಬಾಕ್ಸ್ ಆಫೀಸ್ ಗಳಿಕೆಯನ್ನೂ ಸೇರಿಸಿದರೆ 130 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಈ ಸಂಖ್ಯೆಗಳ ಕುರಿತಂತೆ ‘ಕೆಜಿಎಫ್: ಚಾಪ್ಟರ್ 2’ ತಂಡ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ. ಬಾಕ್ಸ್ ಆಫೀಸ್ ದಾಖಲೆಗಳ ವಿಚಾರದಲ್ಲಿ ಈ ಸಿನಿಮಾ ಹೊಸ ಮೈಲಿಗಲ್ಲು ತಲುಪುವ ಸೂಚನೆ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ರಜಾ ದಿನಗಳ ಇರುವುದರಿಂದ ‘ಕೆಜಿಎಫ್ 2’ ಬಳಗಕ್ಕೆ ಹೆಚ್ಚು ಅನುಕೂಲ ಆಗುತ್ತಿದೆ. ಸಿನಿಮಾ ನೋಡಿದ ಎಲ್ಲ ಪ್ರೇಕ್ಷಕರು ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಬಹುದೊಡ್ಡ ಬಲ ಸಿಕ್ಕಂತಾಗಿದೆ.
ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಯಶ್ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಸಂಜಯ್ ದತ್, ರವೀನಾ ಟಂಡನ್, ರಾವ್ ರಮೇಶ್, ಪ್ರಕಾಶ್ ರಾಜ್ ಮುಂತಾದ ಘಟಾನುಘಟಿ ಕಲಾವಿದರಿಂದಾಗಿ ಚಿತ್ರದ ತೂಕ ಹೆಚ್ಚಿದೆ.
ಇದನ್ನೂ ಓದಿ:
‘ಎಲ್ಲ ಶೋ ನೋಡ್ತೀನಿ, ಥಿಯೇಟರ್ನಲ್ಲೇ ಮಲಗ್ತೀನಿ’: ಅಮೆರಿಕದಲ್ಲಿ ‘ಕೆಜಿಎಫ್ 2’ ಪ್ರೇಕ್ಷಕರ ಪ್ರತಿಕ್ರಿಯೆ
‘ಕೆಜಿಎಫ್: ಚಾಪ್ಟರ್ 2’ ಟಿಕೆಟ್ ಪಡೆಯಲು ಫ್ಯಾನ್ಸ್ ಹರಸಾಹಸ; ಕಾಲು ಮೇಲೆ ಮಾಡಿ ನಿಂತ ಅಭಿಮಾನಿ
Published On - 7:57 am, Fri, 15 April 22