
‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF:Chapter 2) ವಿಶ್ವ ಮಟ್ಟದಲ್ಲಿ ಧೂಳೆಬ್ಬಿಸಿದೆ. ಐದು ಭಾಷೆಗಳಲ್ಲಿ ರಿಲೀಸ್ ಆದ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಬಾಲಿವುಡ್ ಚಿತ್ರಗಳೇ ಹಣ ಗಳಿಸಲು ಒದ್ದಾಡುತ್ತಿರುವ ಈ ಕಾಲದಲ್ಲಿ ಕನ್ನಡದ ಸಿನಿಮಾ ‘ಕೆಜಿಎಫ್ 2’ ಗೆದ್ದು ಬೀಗಿದೆ. ಈ ಸಿನಿಮಾ ಏಪ್ರಿಲ್ 8ಕ್ಕೆ 25ನೇ ದಿನ ಪೂರೈಸಿದೆ. ಆದಾಗ್ಯೂ ಬಾಲಿವುಡ್ನಲ್ಲಿ ಸಿನಿಮಾದ ಕಲೆಕ್ಷನ್ ತಗ್ಗುತ್ತಿಲ್ಲ. ‘ಕೆಜಿಎಫ್ 2’ ಸಿನಿಮಾ 25ನೇ ದಿನಕ್ಕೆ ಬಾಲಿವುಡ್ನಲ್ಲಿ ಬರೋಬ್ಬರಿ 412 ಕೋಟಿ ರೂಪಾಯಿ ಗಳಿಸಿದೆ. ವಿಶ್ವ ಮಟ್ಟದ ಕಲೆಕ್ಷನ್ನಲ್ಲಿ ಈ ಸಿನಿಮಾ ರಾಜಮೌಳಿ (Rajamouli) ನಿರ್ದೇಶನದ ‘ಆರ್ಆರ್ಆರ್’ ಸಿನಿಮಾವನ್ನು (RRR Movie) ಹಿಂದಿಕ್ಕಿದೆ.
‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬಂತು. ಬಾಲಿವುಡ್ನಲ್ಲಿ ‘ಕೆಜಿಎಫ್ 1’ ಸಿನಿಮಾದ ಲೈಫ್ಟೈಮ್ ಕಲೆಕ್ಷನ್ 44 ಕೋಟಿ ರೂಪಾಯಿ ಆಗಿತ್ತು. ಮೊದಲ ಚಾಪ್ಟರ್ ನೋಡಿ ಪ್ರಶಾಂತ್ ನೀಲ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ ಎರಡನೇ ಚಾಪ್ಟರ್ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿತ್ತು. ಅದೇ ರೀತಿ ಬಾಲಿವುಡ್ನಲ್ಲಿ ಸಿನಿಮಾ 412 ಕೋಟಿ ರೂಪಾಯಿ ಬಾಚಿಕೊಂಡಿದೆ.
ಈ ಸಿನಿಮಾ ಬಾಲಿವುಡ್ನಲ್ಲಿ ಕಳೆದ ಶನಿವಾರ (ಮೇ 7) 4.75 ಕೋಟಿ ರೂಪಾಯಿ ಹಾಗೂ ಭಾನುವಾರ (ಮೇ 8) 6.25 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ‘ಕೆಜಿಎಫ್ 2’ ಕ್ರೇಜ್ ಕಡಿಮೆ ಆಗಿಲ್ಲ ಎನ್ನುವುದಕ್ಕೆ ಸಾಕ್ಷಿ. ಇಂದು (ಮೇ 9) ಸಿನಿಮಾದ ಕಲೆಕ್ಷನ್ ಎಷ್ಟಾಗಲಿದೆ ಎಂಬುದು ಸದ್ಯದ ಕುತೂಹಲ.
ಕಳೆದ ವಾರ ಈದ್ ಹಬ್ಬ ಇತ್ತು. ಇದು ‘ಕೆಜಿಎಫ್ 2’ ಚಿತ್ರಕ್ಕೆ ಸಹಕಾರಿಯಾಗಿದೆ. ವಿಶ್ವದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 1129.38 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ‘ಆರ್ಆರ್ಆರ್’ ಚಿತ್ರದ (1127.65 ಕೋಟಿ ರೂಪಾಯಿ) ಕಲೆಕ್ಷನ್ ಹಿಂದಿಕ್ಕಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಮೂರನೇ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾಗೆ ಬಂಡವಾಳ ಹೂಡಿದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ಭರಪೂರ ಲಾಭ ಆಗಿದೆ.
ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ, ಯಶ್ ಮ್ಯಾನರಿಸಂ, ಎಲ್ಲ ಕಲಾವಿದರ ನಟನೆ, ತಾಯಿ ಸೆಂಟಿಮೆಂಟ್, ಮೈ ನವಿರೇಳಿಸುವ ಆ್ಯಕ್ಷನ್ ಸನ್ನಿವೇಶ, ಸರಿಸಾಟಿ ಇಲ್ಲದ ಮೇಕಿಂಗ್, ಬೃಹತ್ ಸೆಟ್ಗಳು ಸೇರಿದಂತೆ ಅನೇಕ ಅಂಶಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಜಯಭೇರಿ ಬಾರಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ .
Published On - 6:33 pm, Mon, 9 May 22