
ಯಶ್ ನಟನೆಯ ‘ಕೆಜಿಎಫ್ 2’ (KGF Chapter 2) ಸಿನಿಮಾ ತೆರೆಗೆ ಬಂದು ಹಲವು ತಿಂಗಳು ಕಳೆದಿದೆ. ಇನ್ನು ಕೆಲವೇ ದಿನಗಳಲ್ಲಿ ‘ಕೆಜಿಎಫ್ 2’ ರಿಲೀಸ್ ಆಗಿ ಒಂದು ವರ್ಷ ಆಗಲಿದೆ. ಆದಾಗ್ಯೂ ಯಶ್ (Yash) ಅವರ ಮುಂದಿನ ಸಿನಿಮಾ ಯಾವುದು ಎಂಬುದು ಘೋಷಣೆ ಆಗಿಲ್ಲ. ಮೂಲಗಳ ಪ್ರಕಾರ ಯಶ್ ಒಂದು ವಿಶೇಷ ಡೇಟ್ಗಾಗಿ ಕಾದಿದ್ದಾರೆ ಎನ್ನಲಾಗಿದೆ. ಆ ದಿನವೇ ಯಶ್ ಹೊಸ ಸಿನಿಮಾ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. ಈ ದಿನಕ್ಕಾಗಿ ಅಭಿಮಾನಿಗಳು ಕೂಡ ಕಾದು ಕೂತಿದ್ದಾರೆ.
‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದಿದ್ದು ಏಪ್ರಿಲ್ 14ಕ್ಕೆ. ಅದಕ್ಕೂ ಮೊದಲೇ ಯಶ್ ಮುಂದಿನ ಸಿನಿಮಾ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು. ಯಶ್ ಅವರು ನರ್ತನ್ ಜತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ನರ್ತನ್ ಆಗಲೀ ಯಶ್ ಆಗಲೀ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ಯಶ್ ತಮಿಳು ನಿರ್ದೇಶಕ ಶಂಕರ್ ಜತೆ ಕೈ ಜೋಡಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತು. ಯಶ್ ಕೈಗೆತ್ತಿಕೊಳ್ಳುತ್ತಿರುವ ಮುಂದಿನ ಚಿತ್ರ ‘ಕೆಜಿಎಫ್ 3’ ಎಂಬ ಸುದ್ದಿ ಕೂಡ ಹರಿದಾಡಿದವು. ಇದ್ಯಾವುದಕ್ಕೂ ಸ್ಪಷ್ಟನೆ ಸಿಗಲಿಲ್ಲ. ಈಗ ಯಶ್ ಮುಂದಿನ ಚಿತ್ರವನ್ನು ಬರ್ತ್ಡೇಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಯಶ್ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಅನೇಕರಿಗೆ ಇದೆ. ಇದಕ್ಕೆ ಜನವರಿ 8ರಂದು ಉತ್ತರ ಸಿಗುವ ಸಾಧ್ಯತೆ ಇದೆ. ಅಂದು ಯಶ್ ಜನ್ಮದಿನ. ಈ ವಿಶೇಷ ದಿನಕ್ಕೆ ಹೊಸ ಘೋಷಣೆ ಆಗುವ ಸಾಧ್ಯತೆ ಇದೆ ಎಂಬುದು ಮೂಲಗಳ ಮಾಹಿತಿ. ಘೋಷಣೆ ಆದರೆ ಅದು ಯಾವ ಸಿನಿಮಾ ಆಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಂದೂ ಯಾವುದೇ ಅನೌನ್ಸ್ಮೆಂಟ್ ಆಗಲಿಲ್ಲ ಎಂದರೆ ಫ್ಯಾನ್ಸ್ಗೆ ನಿರಾಸೆ ಆಗೋದು ಪಕ್ಕಾ.
ಇದನ್ನೂ ಓದಿ: Rocking Star Yash: ‘ಎಲ್ಲರನ್ನೂ ಗೌರವಿಸೋಣ’; ನೇರವಾಗಿ ಪ್ರತಿಕ್ರಿಯಿಸಿದ ರಾಕಿಂಗ್ ಸ್ಟಾರ್ ಯಶ್
ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ವಿಶ್ವಮಟ್ಟದಲ್ಲಿ ಅವರು ಹೆಸರು ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಅವರು ವಿದೇಶಿ ನಿರ್ದೇಶಕರ ಜತೆ ಕಾಣಿಸಿಕೊಂಡಿದ್ದರು. ಇದರಿಂದ ಒಂದಷ್ಟು ವದಂತಿಗಳು ಹುಟ್ಟಿಕೊಂಡಿದ್ದವು. ಆದರೆ, ಅದು ಕೂಡ ನಿಜ ಆಗಿಲ್ಲ. 2023ರ ಜನವರಿ8ಕ್ಕೆ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬೀಳುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ