ಮಂಡ್ಯಕ್ಕೆ ಹೈಟೆಕ್​ ICU, 2 ಆಮ್ಲಜನಕ ಘಟಕ ನೀಡಿದ ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು

| Updated By: ರಾಜೇಶ್ ದುಗ್ಗುಮನೆ

Updated on: Jun 18, 2021 | 3:55 PM

Vijay Kiragandur: ವಿಜಯ್​ ಕಿರಗಂದೂರು ಅವರ ಹೊಂಬಾಳೆ ಸಂಸ್ಥೆ ನೀಡಿದ ಆರ್ಥಿಕ ನೆರವಿನಿಂದ ಮಂಡ್ಯದ ವಿಮ್ಸ್​ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ತೀವ್ರ ನಿಗಾ ಘಟಕ (ಐಸಿಯು) ಆರಂಭಿಸಲಾಗಿದೆ. ಡಿಸಿಎಂ ಅಶ್ವತ್ಥ್​ ನಾರಾಯಣ ಉದ್ಘಾಟನೆ ಮಾಡಿದ್ದಾರೆ.

ಮಂಡ್ಯಕ್ಕೆ ಹೈಟೆಕ್​ ICU, 2 ಆಮ್ಲಜನಕ ಘಟಕ ನೀಡಿದ ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು
ವಿಜಯ್​ ಕಿರಗಂದೂರು
Follow us on

ದಕ್ಷಿಣ ಭಾರತದಲ್ಲಿ ಪ್ರಮುಖ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವಿಜಯ್​ ಕಿರಗಂದೂರು ಅವರು ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ‘ಕೆಜಿಎಫ್​’ ಸಿನಿಮಾ ಮೂಲಕ ಅವರಿಗೆ ದೇಶಾದ್ಯಂತ ಜನಪ್ರಿಯತೆ ಸಿಕ್ಕಿದೆ. ಅವರ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹಾಗಿದ್ದರೂ ತಮ್ಮ ತವರು ಜಿಲ್ಲೆ ಮಂಡ್ಯ ಬಗ್ಗೆ ವಿಜಯ್​ ಕಿರಗಂದೂರು ಅವರು ಕಾಳಜಿ ಮೆರೆತಿಲ್ಲ. ಕೊವಿಡ್​ ಸಂಕಷ್ಟ ಕಾಲದಲ್ಲಿ ಅವರು ಮಂಡ್ಯಕ್ಕೆ 2.35 ಕೋಟಿ ರೂ. ನೆರವು ನೀಡಿದ್ದಾರೆ.

ವಿಜಯ್​ ಕಿರಗಂದೂರು ಅವರ ಹೊಂಬಾಳೆ ಸಂಸ್ಥೆ ನೀಡಿದ ಆರ್ಥಿಕ ನೆರವಿನಿಂದ ಮಂಡ್ಯದ ವಿಮ್ಸ್​ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ತೀವ್ರ ನಿಗಾ ಘಟಕ (ಐಸಿಯು) ಆರಂಭಿಸಲಾಗಿದೆ. ಅದನ್ನು ಡಿಸಿಎಂ ಅಶ್ವತ್ಥ್​ ನಾರಾಯಣ ಉದ್ಘಾಟನೆ ಮಾಡಿದ್ದಾರೆ. ಈ ಐಸಿಯುನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮಾಸಿಟರ್​ ಮತ್ತು ವೆಂಟಿಲೇಟರ್​ ಸೌಲಭ್ಯ ಇದೆ. ಇದಕ್ಕೆ 55 ಲಕ್ಷ ರೂ. ತಗುಲಿದೆ.

ರೋಗಿಯ ರಕ್ತದೊತ್ತಡ, ಮಧುಮೇಹ, ಆಮ್ಲಜನಕ ಮಟ್ಟ ಸೇರಿ ಹಲವು ಮಾಹಿತಿ ಒಂದೇ ಮಾನಿಟರ್‌ನಲ್ಲಿ ಸಿಗುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಐಸಿಯು ಇದಾಗಿದೆ. ಐಸಿಯು ಉದ್ಘಾಟಿಸಿದ ಬಳಿಕ ವಿಜಯ್​ ಕಿರಗಂದೂರು ಅವರ ಕಾರ್ಯಕ್ಕೆ ಡಿಸಿಎಂ ಅಶ್ವತ್ಥ್​ ನಾರಾಯಣ ಮೆಚ್ಚುಗೆ ಸೂಚಿಸಿದ್ದಾರೆ. ಐಸಿಯು ಮಾತ್ರವಲ್ಲದೆ ಜಿಲ್ಲೆಯಲ್ಲಿ 2 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. 90 ಲಕ್ಷ ರೂ. ವೆಚ್ಚದಲ್ಲಿ ಕೆ.ಆರ್. ಪೇಟೆ, ಪಾಂಡವಪುರ ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗಿದೆ.

ಕೆಲವೇ ದಿನಗಳ ಹಿಂದೆ ಚಿತ್ರರಂಗದ ಹಲವರಿಗೂ ವಿಜಯ್​ ಕಿರಗಂದೂರು ಸಹಾಯ ಮಾಡಿದ್ದರು. ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 32 ಲಕ್ಷ ಹಣ ನೀಡಿದ್ದರು. ಕಾರ್ಮಿಕ ಒಕ್ಕೂಟದ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸಹಾಯ ಆಗುವಂತೆ ಹಣ ನೀಡಲಾಗಿತ್ತು. 21 ವಿಭಾಗದ 3,200 ಕಾರ್ಮಿಕರಿಗೆ ತಲಾ 1,000 ರೂ. ನೀಡಿದ್ದರು. ಅವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಅಷ್ಟೇ ಅಲ್ಲದೆ, ‘ಹೊಂಬಾಳೆ’ ಸಂಸ್ಥೆಯಲ್ಲಿ ಕೆಲಸ ಮಾಡುವ 600ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತವಾಗಿ ಕೊರೊನಾ ಲಸಿಕೆ ಹಾಕಿಸಿದ್ದರು. ತಮ್ಮದೇ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ತೆಲುಗಿನ ‘ಸಲಾರ್’ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಸುಮಾರು 150ಕ್ಕೂ ಅಧಿಕ ಸದಸ್ಯರಿಗೂ ಧನ ಸಹಾಯ ಮಾಡಿದ್ದರು.

ಇದನ್ನೂ ಓದಿ:

ಸಂಕಷ್ಟದಲ್ಲಿ ಇರುವವರಿಗೆ ಕೆಜಿಎಫ್​ ನಿರ್ಮಾಪಕ ವಿಜಯ್​ ಕಿರಗಂದೂರು ಸದ್ದಿಲ್ಲದೇ ಮಾಡಿದ ಸಹಾಯಗಳು ಒಂದೆರಡಲ್ಲ

ಹುಟ್ಟೂರಿನ ಜನರ ಕಷ್ಟಕ್ಕೆ ಮಿಡಿದ ನಿರ್ದೇಶಕ ಆರ್​​. ಚಂದ್ರು; ಸಾವಿರ ಕುಟುಂಬಕ್ಕೆ ಅಕ್ಕಿ ವಿತರಣೆ