ಬಿಗ್ ಬಾಸ್ ಮನೆಯಲ್ಲಿ ಬಿತ್ತರ ಆಯ್ತು ‘ಮ್ಯಾಕ್ಸ್’ ಟೀಸರ್; ಮಂಜುಗೆ ಸ್ಪೆಷಲ್ ಟ್ರೀಟ್
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿಸಿದ್ದು, ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಹೊಸ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು. ಈಗ ಬಿಗ್ ಬಾಸ್ ಮನೆಯ ಒಳಗೂ ಈ ಚಿತ್ರದ ಟೀಸರ್ ಬಿತ್ತರ ಮಾಡಲಾಗಿದೆ. ಅದನ್ನು ನೋಡಿ ಉಗ್ರಂ ಮಂಜು ಅವರು ಹೆಚ್ಚು ಖುಷಿಪಟ್ಟಿದ್ದಾರೆ. ಇದು ಅವರಿಗೆ ಸ್ಪೆಷಲ್ ಟ್ರೀಟ್ ಆಗಿತ್ತು.
ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಹೊರ ಜಗತ್ತಿನ ಬಗ್ಗೆ ಅಪ್ಡೇಟ್ ಸಿಗುವುದಿಲ್ಲ. ಹೊರಗೆ ಯಾವ ಸಿನಿಮಾ ಬಿಡುಗಡೆ ಆಗುತ್ತಿದೆ ಎಂಬ ಸುಳಿವು ಕೂಡ ಇರುವುದಿಲ್ಲ. ಆದರೆ ಅಪರೂಪಕ್ಕೆ ಎಂಬಂತೆ ಕೆಲವು ಝಲಕ್ ಕಾಣಿಸುತ್ತಿದೆ. ಭಾನುವಾರ (ಡಿಸೆಂಬರ್ 8) ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಸರ್ಪ್ರೈಸ್ ಕಾದಿತ್ತು. ಸುದೀಪ್ ಅವರು ಸಂಚಿಕೆ ಆರಂಭಿಸುವುದಕ್ಕೂ ಮುನ್ನ ಮನೆಯೊಳಗಿನ ಟಿವಿಯಲ್ಲಿ ‘ಮ್ಯಾಕ್ಸ್’ ಸಿನಿಮಾದ ಟೀಸರ್ ಪ್ರಸಾರ ಮಾಡಲಾಯಿತು. ಅದನ್ನು ನೋಡಿ ಉಗ್ರಂ ಮಂಜು ಅವರು ಹೆಚ್ಚು ಸಂಭ್ರಮಿಸಿದರು.
ಉಗ್ರಂ ಮಂಜು ಅವರು ವಿಲನ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಕೂಡ ಅವರು ಖಳನಟನಾಗಿ ಅಭಿನಯಿಸಿದ್ದಾರೆ. ಸುದೀಪ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ಟೀಸರ್ನಲ್ಲಿ ಕೂಡ ಅವರ ಪಾತ್ರದ ಝಲಕ್ ಕಾಣಿಸಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಉಗ್ರಂ ಮಂಜು ಅವರು ಕಾಣಿಸಿಕೊಂಡಿದ್ದಾರೆ.
ದೊಡ್ಮನೆಯೊಳಗೆ ಬಿತ್ತರವಾದ ‘ಮ್ಯಾಕ್ಸ್’ ಟೀಸರ್ ನೋಡಿ ಎಲ್ಲರೂ ಖುಷಿಪಟ್ಟರು. ‘ಮತ್ತೊಮ್ಮೆ ಹಾಕಿ ಪ್ಲೀಸ್’ ಎಂದು ಉಗ್ರಂ ಮಂಜು ಅವರು ಮನವಿ ಮಾಡಿಕೊಂಡರು. ‘ಈ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ. ಸುದೀಪ್ ಅವರಿಗೆ ಬಿಗ್ ಬಾಸ್ ಶುಭ ಹಾರೈಸುತ್ತಾರೆ. ಮಂಜು ಅವರಿಗೂ ಶುಭವಾಗಲಿ’ ಎಂದು ಬಿಗ್ ಬಾಸ್ ಹೇಳಿದರು. ಈ ಟೀಸರ್ ತುಂಬ ಮಾಸ್ ಆಗಿ ಮೂಡಿಬಂದಿದೆ. ಸುದೀಪ್ ಅವರ ಆ್ಯಕ್ಷನ್ ದೃಶ್ಯಗಳನ್ನು ನೋಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಕಣ್ಣರಳಿಸಿದ್ದಾರೆ.
ಇದನ್ನೂ ಓದಿ: ‘ಅಹಂನಲ್ಲಿ ಕೂರಲುಬಿಟ್ಟು, ನಾಯಿತರ ನಿತ್ಕೊಂಡಿರ್ತನಲ್ಲ’: ಸಿಟ್ಟಲ್ಲಿ ಎಲ್ಲರನ್ನೂ ನಿಲ್ಲಿಸಿಯೇ ಎಪಿಸೋಡ್ ಶುರು ಮಾಡಿದ ಸುದೀಪ್
‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಕಾಲಿವುಡ್ನ ಕಲೈ ಪುಲಿ ಎಸ್. ಧಾನು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬಹುತೇಕ ದೃಶ್ಯಗಳ ಶೂಟಿಂಗ್ ತಮಿಳುನಾಡಿನಲ್ಲೇ ನಡೆದಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ವರ್ಷಾಂತ್ಯಕ್ಕೆ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಈ ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:42 pm, Sun, 8 December 24