ರಾಜೀವ್ ಹೊಸ ಚಿತ್ರ ‘ಉಸಿರೇ ಉಸಿರೇ’ಗೆ ಕಿಚ್ಚ ಸುದೀಪ್ ಸಿನಿಮಾ ಕನೆಕ್ಷನ್
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ಉಸಿರೇ ಉಸಿರೇ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸುದೀಪ್ ಅವರು ವಿಶೇಷ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಬಿಗ್ ಬಾಸ್ ಸ್ಪರ್ಧಿ ರಾಜೀವ್ ಹಾಗೂ ನಟ ಕಿಚ್ಚ ಸುದೀಪ್ ನಡುವೆ ಒಳ್ಳೆಯ ಗೆಳೆತನವಿದೆ. ಸುದೀಪ್ ಅವರನ್ನು ಪ್ರೀತಿಯಿಂದ ಅಣ್ಣ ಎಂದೇ ಸಂಭೋದಿಸುತ್ತಾರೆ ರಾಜೀವ್. ಇಬ್ಬರಿಗೂ ಕ್ರಿಕೆಟ್ ಮೇಲೆ ಎಲ್ಲಿಲ್ಲದ ಆಸಕ್ತಿ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯೋಕೆ ಸಿಸಿಎಲ್ ಕೂಡ ಕಾರಣ. ಈಗ ರಾಜೀವ್ ಅವರು ‘ಉಸಿರೇ ಉಸಿರೇ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕಿಚ್ಚ ಸುದೀಪ್ ಅವರು ಬೆಂಬಲಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ‘ಉಸಿರೇ ಉಸಿರೇ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸುದೀಪ್ ಅವರು ವಿಶೇಷ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ‘ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ರಾಜೀವ್. ಅವನಲ್ಲಿ ಈಗಲೂ ಮುಗ್ಧತೆ ಇದೆ. ಎಲ್ಲವನ್ನೂ ಬೇಗ ನಂಬಿ ಬಿಡುತ್ತಾನೆ. ಪುಣ್ಯ, ಅವನ ಪಕ್ಕದಲ್ಲಿರುವ ಹೆಂಡತಿ ಜಾಣೆ. ಆ ಹುಡುಗಿ ಇವನಿಗೆ ಎಲ್ಲವನ್ನೂ ಹೇಳಿ ಕೊಡುತ್ತಿದ್ದಾರೆ. ಸಿಸಿಎಲ್ ದಿನಗಳಿಂದಲೂ ನನಗೆ ಈತ ಪರಿಚಯ. ಅವನು ಕ್ರಿಕೆಟ್ ಸರಿಯಾಗಿ ಅಭ್ಯಾಸ ಮಾಡಿದ್ದರೆ, ಇಷ್ಟೊತ್ತಿಗೆ ರಾಜ್ಯ ಮಟ್ಟದಲ್ಲಿ ಆಡುತ್ತಿದ್ದ. ಈ ಸಿನಿಮಾದಿಂದ ರಾಜೀವ್ಗೆ ಒಳ್ಳೆದಾಗಲಿ’ ಎಂದು ಸುದೀಪ್ ಶುಭಹಾರೈಸಿದರು.
‘ಕೊವಿಡ್ ಕಾರಣದಿಂದ ಯಾರೂ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬರುತ್ತಿಲ್ಲ. ಆದರೆ ಇಂಥ ಸಂದರ್ಭದಲ್ಲಿ ಪ್ರದೀಪ್ ಅವರು ಸಿನಿಮಾ ನಿರ್ಮಾಣ ಮಾಡೋಕೆ ಮುಂದೆ ಬಂದಿದ್ದಾರೆ ಎಂಬುದು ಖುಷಿಯ ವಿಚಾರ. ಅವರು ಸಿನಿಮಾ ಕೈಗೆತ್ತಿಕೊಂಡಿದ್ದಾರೆ ಎಂದರೆ ಒಳ್ಳೆಯದೇ ಆಗುತ್ತದೆ’ ಎಂದರು ಸುದೀಪ್.
ಕಿಚ್ಚ ಸುದೀಪ್ ಅವರಿಗೆ ಚಿತ್ರತಂಡ ಬೆಳ್ಳಿ ಪೆನ್ಅನ್ನು ಉಡುಗರೆಯಾಗಿ ನೀಡಿದರು. ಈ ಪೆನ್ಅನ್ನು ಸುದೀಪ್ ಅವರು ನಿರ್ದೇಶಕರಿಗೆ ನೀಡಿದರು. ನಿಮ್ಮ ಮುಂದಿನ ಕೆಲಸಗಳೆಲ್ಲಾ ಸುಲಲಿತವಾಗಿ ನಡೆಯಲಿ ಎಂದು ಹಾರೈಸಿದರು.
‘ನಾನು ಸುದೀಪ್ ಅವರ ಜೊತೆ ಕಾರಿನಲ್ಲಿ ಬರುತ್ತಿದ್ದೆ. ಆಗ ಅವರ ಚಿತ್ರದ ‘ಉಸಿರೇ ಉಸಿರೇ..’ ಹಾಡು ಕೇಳಿದ್ದೆ. ನನಗೆ ಈ ಚಿತ್ರದ ಕಥೆ ಗೊತ್ತಿದ್ದರಿಂದ ನಿರ್ದೇಶಕರಿಗೆ ಕರೆ ಮಾಡಿ ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಡೋಣ ಎಂದೆ. ಚಿತ್ರಕ್ಕಾಗಿ ನಾನು ಹೆಚ್ಚು ವರ್ಕ್ಔಟ್ ಮಾಡಿಲ್ಲ. ಸಹಜವಾಗಿರುವ ಪಾತ್ರ. ನಮ್ಮ ನಾಲ್ಕುವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ. ಎಲ್ಲರ ಹಾರೈಕೆಯು ನಮಗಿರಲಿ’ ಎಂದು ಕೋರಿದರು ರಾಜೀವ್.
ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಾಜೀವ್ಗೆ ನಾಯಕಿಯಾಗಿ ಶ್ರೀಜಿತ ಘೋಷ್ ನಟಿಸುತ್ತಿದ್ದು, ಇದು ಅವರ ಕನ್ನಡದ ಚೊಚ್ಚಲ ಚಿತ್ರ. ಖ್ಯಾತ ನಟ ಅಲಿ ಕೂಡ ಈ ಸಿನಿಮಾದಲ್ಲಿದ್ದಾರೆ. ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶಿವರಾಜ್ಕುಮಾರ್ 124ನೇ ಚಿತ್ರಕ್ಕೆ ಅಪ್ಪಟ ಕನ್ನಡ ಶೀರ್ಷಿಕೆ ‘ನೀ ಸಿಗೋವರೆಗೂ’; ಮುಹೂರ್ತಕ್ಕೆ ಕಿಚ್ಚ ಅತಿಥಿ
ಸುದೀಪ್ ನಿರ್ದೇಶನದಲ್ಲಿ ಶಿವಣ್ಣ ನಟನೆ; ಹೊಸ ಸಿನಿಮಾ ಬಗ್ಗೆ ವೇದಿಕೆ ಮೇಲೆ ‘ಹ್ಯಾಟ್ರಿಕ್ ಹೀರೋ’ ಮಾತು