Kuri Prathap: ಹೊಸ ಚಿತ್ರದಲ್ಲಿ ಕುರಿ ಪ್ರತಾಪ್ ಹೀರೋ.. ಆದ್ರೆ ನಾಯಕಿಯ ಭೇಟಿಗೆ ಅವಕಾಶವೇ ಇಲ್ಲ!
Kuri Prathap: ಕನ್ನಡದಲ್ಲಿ ಕಾಮಿಡಿಯನ್ ಆಗಿದ್ದ ನಟ ಶರಣ್ ನಂತರ ಹೀರೋ ಆಗಿದ್ದರು. ಆ ನಂತರ ಪೋಷಕ ಪಾತ್ರ ಮಾಡುವುದನ್ನು ನಿಲ್ಲಿಸಿದ್ದರು. ಆದರೆ, ಕುರಿ ಪ್ರತಾಪ್ ಆ ರೀತಿ ಮಾಡುವುದಿಲ್ಲವಂತೆ.
ಕಾಮಿಡಿಯನ್ಗಳಾಗಿ ಕಾಣಿಸಿಕೊಂಡ ನಂತರ ಹೀರೋ ಆಗುವ ಪ್ರಯತ್ನವನ್ನು ಕನ್ನಡ ಚಿತ್ರರಂಗದಲ್ಲಿ ಅನೇಕರು ಮಾಡಿದ್ದಾರೆ. ಇದರಲ್ಲಿ ಕೆಲವರು ಯಶಸ್ಸು ಕಂಡರೆ, ಇನ್ನೂ ಕೆಲವರು ಸೋತಿದ್ದಾರೆ. ಈಗ ಕನ್ನಡದ ಹಾಸ್ಯ ನಟ ಕುರಿ ಪ್ರತಾಪ್ (Kuri Prathap) ಇದೇ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಹೀರೋ ಆಗಿ ತೆರೆಮೇಲೆ ಬರುತ್ತಿದ್ದಾರೆ. ಚಿತ್ರಕ್ಕೆ ‘ಆರ್ಸಿ ಬ್ರದರ್’ ಎಂದು ನಾಮಕರಣ ಮಾಡಲಾಗಿದೆ. ನಿರ್ದೇಶಕ ಪ್ರಕಾಶ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕುರಿ ಪ್ರತಾಪ್ ಜತೆ ತಬಲಾ ನಾಣಿ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಬಲಾ ನಾಣಿ ಅವರದ್ದು ಕುರಿ ಪ್ರತಾಪ್ ಅಣ್ಣನ ಪಾತ್ರ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಒಡಹುಟ್ಟಿದವರ ಬಾಂಧವ್ಯದ ಕತೆ.
ಮದುವೆ ಅನ್ನೋದು.. ಈ ಸಿನಿಮಾದಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸಲಿದೆಯಂತೆ. ತಬಲಾ ನಾಣಿ ಮದುವೆಗೆ ಪ್ರಯತ್ನ ಪಡುತ್ತಿರುತ್ತಾರೆ. ಆದರೆ, ಹುಡುಗಿ ಸಿಕ್ಕಿರುವುದಿಲ್ಲ. ಇನ್ನು, ಕುರಿ ಪ್ರತಾಪ್ಗೆ ಮದುವೆ ಆದರೂ ಹೆಂಡತಿಯನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ. ಇದು ಇಡೀ ಚಿತ್ರದ ಸಾರಾಂಶ. ಸಿನಿಮಾ ಸಂಪೂರ್ಣವಾಗಿ ಹಾಸ್ಯದಿಂದ ಕೂಡಿರಲಿದೆಯಂತೆ.
ಕನ್ನಡದಲ್ಲಿ ಕಾಮಿಡಿಯನ್ ಆಗಿದ್ದ ನಟ ಶರಣ್ ನಂತರ ಹೀರೋ ಆಗಿದ್ದರು. ಆ ನಂತರ ಪೋಷಕ ಪಾತ್ರ ಮಾಡುವುದನ್ನು ನಿಲ್ಲಿಸಿದ್ದರು. ಆದರೆ, ಕುರಿ ಪ್ರತಾಪ್ ಆ ರೀತಿ ಮಾಡುವುದಿಲ್ಲವಂತೆ. ಅವರು ಹೀರೊ ಆದರೂ ಸ್ಟಾರ್ ಹೀರೋಗಳಿಗೆ ಸಪೋರ್ಟಿಂಗ್ ಪಾತ್ರ ಮಾಡುವುದನ್ನು ಮುಂದು ವರಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಉಳಿದ ಪಾತ್ರವರ್ಗ ಇನ್ನಷ್ಟೇ ಘೋಷಣೆ ಆಗಬೇಕಿದೆ.
ಇದನ್ನೂ ಓದಿ: ಮಜಾ ಟಾಕೀಸ್ನಲ್ಲಿ ಕುರಿ ಪ್ರತಾಪ್ ಸಂಭಾವನೆ ಎಷ್ಟು ಗೊತ್ತಾ?
ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ಕುರಿ ಪ್ರತಾಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಸಿನಿಮಾದ ನಾಯಕಿ. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.