
ಶೀರ್ಷಿಕೆ ಮತ್ತು ಟ್ರೇಲರ್ ಮೂಲಕ ಗಮನ ಸೆಳೆದಿರುವ ‘ಲಂಬೋದರ 2.0’ ಸಿನಿಮಾ ನವೆಂಬರ್ 13ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಕನ್ನಡದ ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸುನಿ ಅವರ ಸಿನಿಮಾ ಎಂದರೆ ಒಂದಲ್ಲಾ ಒಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿ ಸುನಿ ಅವರು ಹ್ಯೂಮನಾಯ್ಡ್ ರೋಬೋಟ್ ಪಾತ್ರವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಈಗ ಚಿತ್ರದ ಟಿಕೆಟ್ ಬುಕಿಂಗ್ ಶುರುವಾಗಿದೆ.
‘ಲಂಬೋದರ 2.0’ ಬಿಡುಗಡೆಗೆ ಐದು ದಿನ ಮುಂಚಿತವಾಗಿಯೇ ಟಿಕೆಟ್ ಬುಕಿಂಗ್ ಶುರು ಆಗಿರುವುದರಿಂದ ಸಿನಿಪ್ರಿಯರಲ್ಲಿ ಹೆಚ್ಚಿನ ಕುತೂಹಲ ಹಾಗೂ ನಿರೀಕ್ಷೆಯನ್ನು ಮೂಡಿಸಿದೆ. ‘ಮಹಾವೀರ್ ಜೈನ್ ಫಿಲ್ಮ್ಸ್’ ಪ್ರಸ್ತುತಪಡಿಸುತ್ತಿರುವ ಹಾಗೂ ‘ಮಾಸ್ ಪ್ರೊಡಕ್ಷನ್’ ಬ್ಯಾನರ್ ಮೂಲಕ ನಿರ್ಮಾಣವಾಗಿರುವ ಈ ವಿಶೇಷ ಕಥಾಹಂದರದ ಸಿನಿಮಾ ಬಗ್ಗೆ ಸಿನಿಪ್ರಿಯರಿಗೆ ಕೌತುಕ ಹೆಚ್ಚಿದೆ.
ಇದು ಎಐ ಜಮಾನಾ. ಡಿಜಿಟಲ್ ತಂತ್ರಜ್ಞಾನವು ಮಾನವನ ದೈನಂದಿನ ಬದುಕಿನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ. ಈ ಕಾಲಘಟ್ಟದಲ್ಲಿ ‘ಲಂಬೋದರ 2.0’ ಸಿನಿಮಾ ಅತ್ಯಂತ ಪ್ರಚಲಿತವಾದ ಕಥೆಯನ್ನು ಹೊಂದಿದೆ. ಜನರ ಸಂತೋಷದ ಹುಡುಕಾಟ, ಭಾವನೆಗಳ ಮೇಲೆ ತಂತ್ರಜ್ಞಾನ ಉಂಟುಮಾಡುವ ಪರಿಣಾಮ ಹಾಗೂ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನವನ ಸ್ವಾತಂತ್ರ್ಯದಂತಹ ಗಂಭೀರ ವಿಚಾರಗಳನ್ನು ಈ ಚಿತ್ರವು ತೆರೆದಿಡಲಿದೆ.
ಅನಿಲ್ ಶೆಟ್ಟಿ, ಬಾಲಿವುಡ್ ನಟ ಕುನಾಲ್ ಕಪೂರ್, ಸಾಚಿ ಬಿಂದ್ರಾ ಅವರು ‘ಲಂಬೋದರ 2.0’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಮೊದಲೇ ಹೇಳಿದಂತೆ, ‘ಜಿಯಾ’ ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್ ಈ ಸಿನಿಮಾದಲ್ಲಿ ನಟಿಸಿರುವುದು ಪ್ರಮುಖ ಹೈಲೈಟ್. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಜಿಯಾ ವಿಡಿಯೋಗಳು ವೈರಲ್ ಆಗಿವೆ.
ಇದನ್ನೂ ಓದಿ: ಒಟಿಟಿ ಬಗ್ಗೆ ಕಹಿ ಸತ್ಯ ಹೇಳಿದ ನಿರ್ದೇಶಕ ಸಿಂಪಲ್ ಸುನಿ
ನವೆಂಬರ್ 13ರಂದು ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ. ವೈಜ್ಞಾನಿಕ ಕಲ್ಪನೆಯ ಜತೆಗೆ ಹಾಸ್ಯ, ಪ್ರೇಮ, ಸಸ್ಪೆನ್ಸ್, ಕೌಟುಂಬಿಕ ಭಾವನೆಗಳು ಮತ್ತು ಪ್ರೇಕ್ಷಕರನ್ನು ಆಲೋಚನೆಗೆ ಹಚ್ಚುವ ಸಾಮಾಜಿಕ ಸಂದೇಶವನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ನೀಡಲಾಗುತ್ತಿದೆ. ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟ ಆಗಲಿದೆ ಎಂಬುದು ಚಿತ್ರತಂಡದ ನಂಬಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.