
ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ಆದ ಅನುಭವಗಳು ತುಂಬಾ ಹೊಸದಾಗಿದ್ದವು. ಕೊರೊನಾ (Corona) ಸಂದರ್ಭದಲ್ಲಿ ದೇಶಾದ್ಯಂತ ಜಾರಿಯಾದ 21 ದಿನಗಳ ಲಾಕ್‌ಡೌನ್ ಪ್ರತಿಯೊಬ್ಬರ ಜೀವನದಲ್ಲೂ ದೊಡ್ಡ ಆರ್ಥಿಕ ಹೊಡೆತ ಮತ್ತು ಗೊಂದಲಗಳನ್ನು ಸೃಷ್ಟಿಸಿತ್ತು. ಸಾಮಾನ್ಯ ಜನರ ಬದುಕು-ಬವಣೆ ಹಾಗೂ ಅವರು ಎದುರಿಸಿದ ನೈಜ ಸವಾಲುಗಳನ್ನು ಕೇಂದ್ರವಾಗಿ ಇಟ್ಟುಕೊಂಡು ‘ಲಾಕ್‌ಡೌನ್ 21 ಡೇಸ್’ (Lockdown 21 Days) ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು.
ಈ ಮೊದಲು ಒಂದಷ್ಟು ಯಶಸ್ವಿ ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಜೋಡಿ ನಿರ್ದೇಶಕರಾದ ಮಧುಮೋಹನ್ ಮತ್ತು ಮಾಚಯ್ಯ ಅವರು ‘ಲಾಕ್‌ಡೌನ್ 21 ಡೇಸ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶ್ರೀ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಮುಹೂರ್ತ ಮಾಡಲಾಯಿತು. ‘ನಮ್ ಗಣಿ ಬಿಕಾಂ ಪಾಸ್’ ನಿರ್ದೇಶಕ ಅಭಿಷೇಕ್ ಶೆಟ್ಟಿ ಅವರಿಂದ ಚಿತ್ರಕ್ಕೆ ಚಾಲನೆ ನೀಡಲಾಯಿತು.
‘ಲಾಕ್‌ಡೌನ್ 21 ಡೇಸ್’ ಸಿನಿಮಾದಲ್ಲಿ ಅನಿಲ್ ಸಿ.ಕೆ., ಅರುಣಾ ಯಾದವ್, ಪ್ರಿಯಾಂಕಾ ರಾಜ್, ಮಂಜು ನಂಜನಗೂಡು, ಅಕ್ಷಯ್, ಎಂ.ಕೆ. ಮಠ, ಚಂದನ್ ಗೌಡ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಾಮಾಜಿಕ ಗಂಭೀರತೆಯ ಜೊತೆಗೆ ಹೃದಯಸ್ಪರ್ಶಿ ಪ್ರೇಮಕಥೆಯನ್ನು ಹೊಂದಿರುವ ಈ ಸಿನಿಮಾಗೆ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.
ದೇಶವೇ ಸ್ತಬ್ಧವಾಗಿದ್ದ 21 ದಿನಗಳ ಕಠಿಣ ಲಾಕ್‌ಡೌನ್ ಸಮಯದಲ್ಲಿ ಅರಳುವ ಒಂದು ಸುಂದರ ಪ್ರೇಮಕಥೆ ಹಾಗೂ ಮಾನವ ಸಂಬಂಧಗಳ ಗಟ್ಟಿತನವನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ‘ಅರುಣಾ ಯಾದವ್ ಫಿಲ್ಮ್ ಹೌಸ್’ ಬ್ಯಾನರ್ ಮೂಲಕ ಅರುಣಾ ಯಾದವ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿತು.
ಇದನ್ನೂ ಓದಿ: ಕೊರೊನಾ ಲಾಕ್‌ಡೌನ್ ಸದುಪಯೋಗ ಮಾಡಿಕೊಂಡ ಮಹಿಳೆಯ ಬಾಳಿಗೆ ಬೆಳಕು ಕೊಟ್ಟ ಎಲ್ಇಡಿ ಬಲ್ಬ್ ತಯಾರಿಸುವ ಕಲೆ
‘ಶಾರ್ಟ್ ಫಿಲ್ಮ್‌ಗಳನ್ನು ನಿರ್ದೇಶಿಸಿದ ನಂತರ ದೊಡ್ಡ ಮಟ್ಟದ ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು. ನನ್ನ ಈ ಕನಸಿಗೆ ಸಾಥ್ ನೀಡಿ, ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು’ ಎಂದು ನಿರ್ದೇಶಕ ಮಧುಮೋಹನ್ ಮಾಚಯ್ಯ ಹೇಳಿದರು. ‘ಒಬ್ಬ ಮಹಿಳಾ ನಿರ್ಮಾಪಕಿಯಾಗಿ ಸಮಾಜಕ್ಕೆ ಹತ್ತಿರವಾದ ಹಾಗೂ ಉತ್ತಮ ಅಭಿರುಚಿಯುಳ್ಳ ಇಂತಹ ಕಥೆಯನ್ನು ತೆರೆಯ ಮೇಲೆ ತರುತ್ತಿರುವುದು ನಮ್ಮ ಇಡೀ ತಂಡಕ್ಕೆ ಹೆಮ್ಮೆ ಮತ್ತು ಸಂತಸ ತಂದಿದೆ’ ಚಿತ್ರತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.