ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಇಂದು (ಏಪ್ರಿಲ್ 26) ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮತದಾನ ಮಾಡಿದ್ದಾರೆ. ನಟ ಉಪೇಂದ್ರ (Upendra) ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ. ಈ ವೇಳೆ ಅವರು ಮತ ನೀಡುವುದರ ಮಹತ್ವದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕು ಎಂಬುದು ಎಲ್ಲರ ಆಶಯ. ಆದರೆ ಕೆಲವರು ಓಟ್ ಮಾಡುವುದಿಲ್ಲ. ಕಡ್ಡಾಯ ಮತದಾನ ಎಂಬ ಕಾನೂನು ತರಬೇಕು ಎಂಬ ಅನಿಸಿಕೆ ಕೆಲವರದ್ದು. ಆದರೆ ಆ ರೀತಿ ಒತ್ತಾಯ ಮಾಡಿದರೆ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರ (Dictatorship) ಆಗುತ್ತದೆ ಎಂದು ಉಪೇಂದ್ರ ಹೇಳಿದ್ದಾರೆ.
‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಕೆಲವರಿಗೆ ಈ ವ್ಯವಸ್ಥೆಯೇ ಸರಿ ಇಲ್ಲ ಎನಿಸಬಹುದು. ಅದನ್ನೂ ನಾವು ಒಪ್ಪಿಕೊಳ್ಳಬೇಕು. ಅದಕ್ಕೇ ಪ್ರಜಾಪ್ರಭುತ್ವ ಅನ್ನೋದು. ಪ್ರಭುಗೆ ಹೋಗಿ ನೀನು ಹಿಂಗೇ ಮಾಡು, ಹಂಗೇ ಮಾಡು ಅಂದರೆ ಅದು ಪ್ರಜಾಪ್ರಭುತ್ವ ಅಲ್ಲ, ಸರ್ವಾಧಿಕಾರ ಆಗುತ್ತದೆ. ನೀವು ಖಂಡಿತಾ ಮತ ಹಾಕಲೇಬೇಕು ಅಂತ ಹೇಳೋಕೆ ಆಗಲ್ಲ. ಮತ ಹಾಕಿದರೆ ತುಂಬ ಒಳ್ಳೆಯದು. ಯಾಕೆಂದರೆ, ನೀವು ರಾಜರ ರೀತಿ ಫೀಲ್ ಮಾಡುವ ದಿನ ಇದು. ಈ ಒಂದು ದಿನ ನಿರ್ಲಕ್ಷ್ಯ ಬೇಡ’ ಎಂದು ಉಪೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರದ ಈವರೆಗಿನ ಕೆಲಸ ತೃಪ್ತಿ ನೀಡಿದೆಯಾ? ಮತಗಟ್ಟೆಯಲ್ಲೇ ಉತ್ತರ ನೀಡಿದ ಯಶ್
‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಪ್ರಭುಗಳು ಅಂತ ಅನಿಸುವುದೇ ಈ ಒಂದು ದಿನ. ಬಹಳ ಮುಖ್ಯವಾದ ದಿನ ಇಂದು. ತುಂಬ ಜನ ಯುವಕರು ಬರುತ್ತಿದ್ದಾರೆ. ಎಲ್ಲರಿಗೂ ಭರವಸೆ ಬಂದಿದೆ. ಮತದಾನದ ಮಹತ್ವ ಎಲ್ಲರಿಗೂ ಗೊತ್ತಾಗುತ್ತಿದೆ. ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ’ ಎಂದಿದ್ದಾರೆ ಉಪೇಂದ್ರ ಅವರ ಓಟಿಂಗ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
‘ಮೊದಲು ಓಟ್ ಹಾಕಿದ ದಿನದಿಂದ ಇಲ್ಲಿನ ತನಕ ಪ್ರತಿ ಪ್ರಜಾಪ್ರಭುತ್ವದ ದಿನದ ನೆನಪು ನನಗೆ ಹಚ್ಚ ಹಸಿರಾಗಿದೆ. ಆಗೆಲ್ಲ ಈ ವ್ಯವಸ್ಥೆ ಬಗ್ಗೆ ತುಂಬ ತಿಳಿದುಕೊಂಡಿರಲಿಲ್ಲ. ತಿಳಿದುಕೊಂಡಾಗ ಈ ದಿನದ ಮಹತ್ವ ಎಷ್ಟು ಎಂಬುದು ಗೊತ್ತಾಯಿತು. ಬೇಗ ಅರ್ಥ ಆದರೆ ಒಳ್ಳೆಯದು. ಒಂದು ದಿನ ರಜೆ ಇದೆ ಅಂತ ಎಂಜಾಯ್ ಮಾಡೋದಲ್ಲ. ಈ ಒಂದು ದಿನ ನೀವು ಈ ಸಮಯವನ್ನು ಮೀಸಲಿಡಲೇಬೇಕು. ಇನ್ನು ಮುಂದಿನ 5 ವರ್ಷಗಳ ಕಾಲ ನೀವು ನೆಮ್ಮದಿಯಾಗಿ ಇರಬೇಕು ಎಂದರೆ ಇಂದು ನೀವು ವಿಚಾರಗಳಿಗೆ ಮತ ಹಾಕಲೇಬೇಕು’ ಎಂದು ಉಪೇಂದ್ರ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.