
ಈ ರೀತಿ ಆಗುತ್ತದೆ ಎಂದು ನಟ ಮಡೆನೂರು ಮನು (Madenur Manu) ಅವರು ಕನಸಿನಲ್ಲಿಯೂ ಊಹಿಸಿರಲಿಲ್ಲ. ಭಾರಿ ಉತ್ಸಾಹದಲ್ಲಿ ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮಾಡಿದ್ದಾರೆ. ಅದರ ಬಿಡುಗಡೆಗೆ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಹಲವು ಊರುಗಳಿಗೆ ತೆರಳಿ ಅವರು ಪ್ರಮೋಷನ್ ಕೂಡ ಮಾಡಿದರು. ಆದರೆ ಇನ್ನೇನು ಸಿನಿಮಾ ನಾಳೆ ಬಿಡುಗಡೆ ಆಗಬೇಕು ಎನ್ನುವಾಗ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿಬಂತು. ಅದರ ನಡುವೆಯೂ ಶುಕ್ರವಾರ (ಮೇ 23) ‘ಕುಲದಲ್ಲಿ ಕೀಳ್ಯಾವುದೋ’ (Kuladalli Keelyavudo) ಸಿನಿಮಾ ರಿಲೀಸ್ ಆಗುತ್ತಿದೆ.
ಕೆ. ರಾಮ್ ನಾರಾಯಣ್ ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮಡೆನೂರು ಮನು ಮತ್ತು ಮೌನ ಗುಡ್ಡೆಮನೆ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕಾಗಿ ಮನು ಅವರು ತುಂಬ ಸಮಯ ಮೀಸಲಿಟ್ಟಿದ್ದರು. ಅಂತಿಮವಾಗಿ ಸಿನಿಮಾವನ್ನು ತೆರೆಕಾಣಿಸಲಾಗುತ್ತಿದೆ. ಈ ಸಿನಿಮಾ ಮೇಲೆ ಮನು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ರಿಲೀಸ್ ಸಮಯವನ್ನು ಎಂಜಾಯ್ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಅತ್ಯಾಚಾರದ ಆರೋಪದಲ್ಲಿ ಅವರು ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯೋಗರಾಜ್ ಭಟ್ ಮತ್ತು ಇಸ್ಲಾವುದ್ದೀನ್ ಅವರು ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಆ ಕಾರಣದಿಂದಲೂ ಸಿನಿಪ್ರಿಯರಿಗೆ ನಿರೀಕ್ಷೆ ಇದೆ. ಇನ್ನು, ಈ ವಾರ ಈ ಚಿತ್ರಕ್ಕೆ ಪೈಪೋಟಿ ನೀಡಲು ಸ್ಟಾರ್ ಸಿನಿಮಾಗಳು ಯಾವವೂ ಇಲ್ಲ. ಒಂದುವೇಳೆ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಒಳ್ಳೆಯ ವಿಮರ್ಶೆ ನೀಡಿದರೆ ಉತ್ತಮ ಕಲೆಕ್ಷನ್ ಆಗುತ್ತದೆ.
ಈ ವಾರ ಕನ್ನಡದಲ್ಲಿ ‘ಕುಲದಲ್ಲಿ ಕೀಳ್ಯಾವುದೋ’ ಜೊತೆಗೆ ‘ಜೈ ಕಿಸಾನ್’, ‘ಕಿರಿಕ್’, ‘ಮಂಕು ತಿಮ್ಮನ ಕಗ್ಗ’ ಸಿನಿಮಾಗಳು ಕೂಡ ಬಿಡುಗಡೆ ಆಗುತ್ತದೆ. ಈ ಪೈಕಿ ಪ್ರೇಕ್ಷಕರು ಯಾವ ಚಿತ್ರಕ್ಕೆ ಬೆಂಬಲ ನೀಡುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಹಿಂದಿಯಲ್ಲಿ ರಾಜ್ಕುಮಾರ್ ರಾವ್, ವಮಿಕಾ ಗಬ್ಬಿ ನಟನೆಯ ‘ಭೂಲ್ ಚುಕ್ ಮಾಫ್’ ಸಿನಿಮಾ ಕೂಡ ಮೇ 23ಕ್ಕೆ ತೆರೆ ಕಾಣುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಹಾಲಿವುಡ್ನ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’, ‘ಫೈನಲ್ ಡೆಸ್ಟಿನೇಷನ್ ಬ್ಲಡ್ಲೈನ್ಸ್’ ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ಥ್ರಿಲ್ಲರ್ ಕಥೆ ಇರುವ ಈ ಸಿನಿಮಾಗಳನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.