ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣ: ವೀರಪ್ಪನ್ ಸಹಚರರ ಖುಲಾಸೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣದಲ್ಲಿ ವೀರಪ್ಪನ್‌ನ 9 ಸಹಚರರನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾ ಆಗಿದೆ. 2000ರಲ್ಲಿ ನಡೆದ ಈ ಐತಿಹಾಸಿಕ ಘಟನೆಗೆ ಸಂಬಂಧಿಸಿದ ದಶಕಗಳ ಕಾಲದ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ತೆರೆ ಬಿದ್ದಿದೆ.

ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣ: ವೀರಪ್ಪನ್ ಸಹಚರರ ಖುಲಾಸೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್
Veerappan, Dr Rajkumar

Updated on: Feb 25, 2026 | 6:51 PM

ಕನ್ನಡದ ವರನಟ ಡಾ. ರಾಜ್‌ಕುಮಾರ್ (Dr Rajkumar) ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಾಡುಗಳ್ಳ ವೀರಪ್ಪನ್‌ನ (Veerappan) ಒಂಬತ್ತು ಮಂದಿ ಸಹಚರರನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ (ಫೆಬ್ರವರಿ 26) ವಜಾಗೊಳಿಸಿದೆ. ಇದರೊಂದಿಗೆ, 2018ರಲ್ಲಿ ಗೋಪಿಶೆಟ್ಟಿಪಾಳ್ಯದ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ (Madras High Court) ಎತ್ತಿಹಿಡಿದಂತಾಗಿದೆ. ನ್ಯಾಯಮೂರ್ತಿಗಳಾದ ಪಿ. ವೇಲ್ಮುರುಗನ್ ಮತ್ತು ಎಂ. ಜ್ಯೋತಿರಾಮನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ.

2000ನೇ ಇಸವಿಯ ಜುಲೈ 30ರಂದು ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ಇರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮತ್ತು ಆತನ ತಂಡ ಅಪಹರಿಸಿತ್ತು. ಸುಮಾರು 108 ದಿನಗಳ ಕಾಲ ಅವರನ್ನು ಅರಣ್ಯದಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಈ ಘಟನೆಯು ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಈ ಪ್ರಕರಣದಲ್ಲಿ ವೀರಪ್ಪನ್ ಸೇರಿದಂತೆ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಆದರೆ, 2004ರಲ್ಲಿ ವೀರಪ್ಪನ್, ಸೇತುಕುಳಿ ಗೋವಿಂದನ್, ಚಂದ್ರಗೌಡ ಮತ್ತು ಸೇತುಮಣಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು. ಮತ್ತೊಬ್ಬ ಆರೋಪಿ ರಮೇಶ್ ಎಂಬಾತ ಇದುವರೆಗೂ ಪತ್ತೆಯಾಗಿಲ್ಲ. ಉಳಿದ 9 ಮಂದಿಯಾದ ಗೋವಿಂದರಾಜ್, ಅಂದ್ರಿಲ್, ಪಸುವಣ್ಣ, ಪುಟ್ಟುಸ್ವಾಮಿ, ಕಾಲ್ಮಂದಿರಾಮನ್, ಮಾರನ್, ಸೆಲ್ವಂ, ಅಮೃತಲಿಂಗಂ ಮತ್ತು ನಾಗರಾಜ್ ವಿರುದ್ಧ ಸುದೀರ್ಘ 18 ವರ್ಷಗಳ ಕಾಲ ವಿಚಾರಣೆ ನಡೆದಿತ್ತು.

ಇದನ್ನೂ ಓದಿ: ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್​ಗೆ ಹೇಳಿದ್ರಂತೆ ರಾಜ್​ಕುಮಾರ್

ಸುಮಾರು 10 ನ್ಯಾಯಮೂರ್ತಿಗಳು ಬದಲಾದ ಈ ಸುದೀರ್ಘ ಕಾನೂನು ಹೋರಾಟವು 2018ರ ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡಿತ್ತು. ಅಂದು ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಒಂಬತ್ತು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ತೀರ್ಪಿನಿಂದ ಅತೃಪ್ತಗೊಂಡಿದ್ದ ತಮಿಳುನಾಡು ಸರ್ಕಾರ 2019ರಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಐದು ವರ್ಷಗಳ ನಂತರ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸುವ ಮೂಲಕ ಕೆಳ ನ್ಯಾಯಾಲಯದ ತೀರ್ಪನ್ನು ಅಂತಿಮಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us