‘ಸೆರೆಮನೆಯಲಿ ವಾಸ, ನೋವಿನಲಿ ದಾಸ..’: ದರ್ಶನ್ ಮೇಲಿನ ಅಭಿಮಾನಕ್ಕೆ ಹೊಸ ಹಾಡು
ಈ ಮೊದಲು ದರ್ಶನ್ ಅವರ ಸಿನಿಮಾಗಳಿಗೆ ಪ್ರಮೋಷನಲ್ ಸಾಂಗ್ ಸಿದ್ಧಪಡಿಸಿದ್ದ ಮಂಜು ಕವಿ ಅವರಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಅವರು ದರ್ಶನ್ ಅವರ ಸಂಕಷ್ಟದ ಬಗ್ಗೆ ಸಾಂಗ್ ರಚಿಸಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಯೂಟ್ಯೂಬ್ನಲ್ಲಿ ಈ ಹಾಡು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಬಗ್ಗೆ ಮಂಜು ಕವಿ ಅವರು ‘ಟಿವಿ9 ಕನ್ನಡ’ ಜೊತೆ ಮಾತಾಡಿದ್ದಾರೆ.
ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ. ಆದಷ್ಟು ಬೇಗ ಅವರು ಹೊರಬರಲಿ ಎಂದು ಫ್ಯಾನ್ಸ್ ಹಂಬಲಿಸುತ್ತಿದ್ದಾರೆ. ಈ ನಡುವೆ ಕನ್ನಡ ಚಿತ್ರರಂಗದ ನಿರ್ದೇಶಕ, ಗೀತರಚನಕಾರ, ಸಂಗೀತ ನಿರ್ದೇಶಕ ಮಂಜು ಕವಿ ಅವರು ದರ್ಶನ್ ಕುರಿತು ಹೊಸ ಹಾಡು ಸಿದ್ಧಪಡಿಸಿದ್ದಾರೆ. ದರ್ಶನ್ ಅವರ ಸದ್ಯದ ಪರಿಸ್ಥಿತಿಯನ್ನೇ ಕೇಂದ್ರವಾಗಿ ಇಟ್ಟುಕೊಂಡು ಮಂಜು ಕವಿ ಸಾಹಿತ್ಯ ರಚಿಸಿದ್ದಾರೆ. ‘ಸೆರೆಮನೆಯಲಿ ವಾಸ, ನೋವಿನಲಿ ದಾಸ..’ ಎಂದು ಶುರುವಾಗುವ ಈ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮಂಜು ಕವಿ ಮಾತನಾಡಿದ್ದಾರೆ.
‘ಈ ಹಾಡನ್ನು ಪೂರ್ತಿಯಾಗಿ ಕೇಳಿದರೆ ಅದರಲ್ಲಿ ಅರ್ಥಪೂರ್ಣವಾದ ಸಾಹಿತ್ಯ ಇದೆ. ಜೀವನದಲ್ಲಿ ಏನನ್ನು ಅಳವಡಿಸಿಕೊಂಡರೆ ಒಳ್ಳೆಯದು ಎಂಬುದನ್ನು ಬರೆದಿದ್ದೇನೆ. ಇದರಲ್ಲಿ ಯಾವುದೇ ವ್ಯಕ್ತಿಗೆ ಧಕ್ಕೆ ತರುವಂತಹ ಒಂದು ಪದ ಕೂಡ ಇಲ್ಲ. ಸಜ್ಜನರ ಮಾತು ದಾರಿದೀಪವು.. ದುರ್ಜನರ ಸಂಘ ಸರ್ವನಾಶವು ಎಂಬ ಸಾಲು ಇದೆ. ದರ್ಶನ್ ಮೇಲಿನ ಅಭಿಮಾನದ ಹಾಡು ಇದು’ ಎಂದು ಮಂಜು ಕವಿ ಹೇಳಿದ್ದಾರೆ.
ಇದನ್ನೂ ಓದಿ: 16ನೇ ದಿನಕ್ಕೆ ಕಾಲಿಟ್ಟ ನಟ ದರ್ಶನ್ ಜೈಲು ವಾಸ; ಸರಿಯಾಗಿ ಊಟ, ನಿದ್ರೆ ಮಾಡದೆ ಹೈರಾಣು
‘ನಾವು ಈ ಹಾಡನ್ನು ರಿಲೀಸ್ ಮಾಡಿದ ಬಳಿಕ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ನಮ್ಮ ಚಾನೆಲ್ ಅಲ್ಲದೇ ಬೇರೆ ಬೇರೆ ಯೂಟ್ಯೂಬ್ ಚಾನೆಲ್ಗಳಲ್ಲಿ ಇದನ್ನು ಅಪ್ಲೋಡ್ ಮಾಡಿದ್ದಾರೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಒಬ್ಬ ವ್ಯಕ್ತಿಗಾಗಿ ಎಷ್ಟು ಕೋಟಿ ಜನರು ಕಾಯುತ್ತಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ. ಆ ಭಾವನೆ ಈ ಹಾಡಿಗೆ ಅನ್ವಯಿಸುತ್ತದೆ’ ಎಂದಿದ್ದಾರೆ ಮಂಜು ಕವಿ.
‘ಎರಡು ಮೂರು ಬಾರಿ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ತುಂಬ ಚೆನ್ನಾಗಿ ಮಾತನಾಡಿಸುತ್ತಾರೆ. ಹೊಸಬರಿಗೆ ಅವರು ಬೆಂಬಲ ನೀಡುತ್ತಾರೆ. ಹೊಸ ಚಿತ್ರತಂಡ ಬಂದಾಗ ಬೆನ್ನು ತಟ್ಟುತ್ತಾರೆ. ಒಂದು ತಪ್ಪು ನಡೆಯಬಾರದಿತ್ತು. ಅದು ನಡೆದು ಹೋಗಿದೆ. ಕಳೆದುಹೋದ ವ್ಯಕ್ತಿಯನ್ನು ವಾಪಸ್ ತರೋಕೆ ಆಗಲ್ಲ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲವೂ ಆಗುತ್ತದೆ. ಆದಷ್ಟು ಬೇಗ ಈ ಕಳಂಕದಿಂದ ದರ್ಶನ್ ಅವರು ಹೊರಬಂದು ನಮ್ಮ ಚಿತ್ರತಂಡಕ್ಕೆ ದೊಡ್ಡ ಕೊಡುಗೆ ನೀಡುತ್ತಾರೆ ಎಂಬ ನಂಬಿಕೆ ನಮಗೆ ಇದೆ’ ಎಂದು ಮಂಜು ಕವಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.