ಫೆಬ್ರವರಿ 23ರಂದು ರಿಲೀಸ್ ಆದ ‘ಮಾರ್ಟಿನ್’ (Martin Teaser) ಸಿನಿಮಾದ ಟೀಸರ್ ಧೂಳೆಬ್ಬಿಸುತ್ತಿದೆ. ನಟ ಧ್ರುವ ಸರ್ಜಾ ಹಾಗೂ ನಿರ್ದೇಶಕ ಎ.ಪಿ. ಅರ್ಜುನ್ (AP Arjun) ಕಾಂಬಿನೇಷನ್ನ ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಪರಭಾಷಿಗರೂ ಕೂಡ ಈ ಚಿತ್ರದ ಟೀಸರ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಕನ್ನಡ ಚಿತ್ರರಂಗದಿಂದ ಮತ್ತೊಂದು ಭರವಸೆಯ ಸಿನಿಮಾ ಬರುತ್ತಿದೆ’ ಎನ್ನುವ ಕಮೆಂಟ್ಗಳು ಬರುತ್ತಿವೆ. ‘ಮಾರ್ಟಿನ್’ ಸಿನಿಮಾದ ಟೀಸರ್ 17 ಗಂಟೆಯಲ್ಲಿ ಬರೋಬ್ಬರಿ 1.7 ಕೋಟಿ ಬಾರಿ ವೀಕ್ಷಣೆ ಪಡೆದಿದೆ. ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ಈ ಚಿತ್ರದ ಟೀಸರ್ನಿಂದ ಹೆಚ್ಚಿದೆ.
ಇತ್ತೀಚೆಗೆ ಪ್ಯಾನ್ ಇಂಡಿಯಾ ಟ್ರೆಂಡ್ ಹೆಚ್ಚಿದೆ. ಕನ್ನಡದ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿವೆ. ‘ಕೆಜಿಎಫ್ 2’, ‘ಕಾಂತಾರ’ ಮೊದಲಾದ ಸಿನಿಮಾಗಳು ಐದು ಭಾಷೆಗಳಲ್ಲಿ ರಿಲೀಸ್ ಆಗಿ ಸದ್ದು ಮಾಡಿವೆ. ಈಗ ‘ಮಾರ್ಟಿನ್’ ಚಿತ್ರದ ಸರದಿ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾನ ತೆರೆಗೆ ತರಲು ಏನೆಲ್ಲ ಸಿದ್ಧತೆ ಬೇಕೋ ಅದನ್ನು ಮಾಡಿಕೊಂಡು ‘ಮಾರ್ಟಿನ್’ ತಂಡ ರೆಡಿ ಆಗಿದೆ. ಸದ್ಯ ಟೀಸರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ.
‘ಮಾರ್ಟಿನ್’ ಸಿನಿಮಾದ ಕಥೆ ರೆಟ್ರೋ ಶೈಲಿಯಲ್ಲಿ ಸಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ. ಧ್ರುವ ಸರ್ಜಾ ಅವರು ಸಖತ್ ಆ್ಯಕ್ಷನ್ ಮೆರೆದಿದ್ದಾರೆ. ಪಾಕಿಸ್ತಾನದ ಉಗ್ರರು, ಐಎಸ್ಐ, ಅಲ್ಲಿನ ಮಿಲಿಟರಿ ವಿಚಾರ ಇಟ್ಟುಕೊಂಡು ಬಾಲಿವುಡ್ ಮಂದಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಆದರೆ, ಕನ್ನಡದವರು ಈ ವಿಚಾರವನ್ನು ಹೆಚ್ಚು ಟಚ್ ಮಾಡಿಲ್ಲ. ಈಗ ‘ಮಾರ್ಟಿನ್’ ಚಿತ್ರದ ಮೂಲಕ ಹಾಗೊಂದು ಪ್ರಯತ್ನ ನಡೆಯುವ ಸೂಚನೆ ಸಿಕ್ಕಿದೆ. ಧ್ರುವ ಸರ್ಜಾ ಅವರ ಬಾಡಿ ಸಾಕಷ್ಟು ಗಮನ ಸೆಳೆದಿದೆ.
ಅರ್ಜುನ್ ಸರ್ಜಾ ಅವರು ನಿರ್ದೇಶನದ ಮೂಲಕ, ನಟನೆ ಮೂಲಕ ಗಮನ ಸೆಳೆದವರು. ಅವರು ‘ಮಾರ್ಟಿನ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಹೀಗಾಗಿ, ಸಹಜವಾಗಿಯೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದ ಕಥೆ ಯಾವ ರೀತಿ ಇರಲಿದೆ ಅನ್ನೋದು ಕುತೂಹಲ. ಸಿನಿಮಾ ಈ ವರ್ಷ ತೆರೆಗೆ ಬರಲಿದೆ ಎಂಬ ವಿಚಾರವಷ್ಟೇ ಟೀಸರ್ನಲ್ಲಿ ಗೊತ್ತಾಗಿದೆ. ಸಿನಿಮಾ ರಿಲೀಸ್ ದಿನಾಂಕ ಇನ್ನಷ್ಟೇ ಅಧಿಕೃತವಾಗಬೇಕಿದೆ.
ಇದನ್ನೂ ಓದಿ:‘ಎಲ್ಲವೂ ಭಾರತದ ಸಿನಿಮಾ ಎಂದು ಕರೆಯಬೇಕು’; ಅಭಿಪ್ರಾಯ ತಿಳಿಸಿದ ಅರ್ಜುನ್ ಸರ್ಜಾ
ಎಪಿ ಅರ್ಜುನ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಮಾಳವಿಕಾ ಅವಿನಾಶ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಮೋನಿ ಶರ್ಮಾ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಅವರು ಟೀಸರ್ನಲ್ಲೇ ತಮ್ಮ ಕೈಚಳಕ ತೋರಿಸಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ