ಕನ್ನಡ ಚಿತ್ರರಂಗದ ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್ ಅವರು ಕೇವಲ ನಟನೆ ಮಾತ್ರವಲ್ಲದೇ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅವರು ಹೊಸದನ್ನು ಕಲಿಯುತ್ತಾರೆ. ಅಭಿಮಾನಿಗಳಿಗೆ ಹೊಸತನ ನೀಡುತ್ತಾರೆ. ನಟನೆ, ನಿರ್ದೇಶನ, ನಿರೂಪಣೆ, ನಿರ್ಮಾಣ, ಮೋಟಿವೇಷನಲ್ ಸ್ಪೀಕಿಂಗ್ ಬಳಿಕ ಅವರು ಈಗ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸ್ಟೋರಿಟೆಲ್ ಸಂಸ್ಥೆ ಜತೆ ರಮೇಶ್ ಅರವಿಂದ್ ಕೈ ಜೋಡಿಸಿದ್ದು, ಕೇಳುಗರಿಗಾಗಿ ಅನೇಕ ವಿಚಾರಗಳನ್ನು ಅವರು ತಿಳಿಸಲಿದ್ದಾರೆ. ಅವರ ಧ್ವನಿಯಲ್ಲಿ ಹಲವು ಎಪಿಸೋಡ್ಗಳು ಮೂಡಿಬರಲಿವೆ. ಆ ಮೂಲಕ 2022ರ ವರ್ಷಪೂರ್ತಿ ರಮೇಶ್ ಅರವಿಂದ್ ಅವರ ವಿಶೇಷ ಮಾತುಗಳು ಕೇಳಲು ಸಿಗಲಿವೆ.
ಈ ಹೊಸ ಪ್ರಯತ್ನದ ಕುರಿತಂತೆ ರಮೇಶ್ ಅರವಿಂದ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಪ್ರತಿ ವರ್ಷದಂತೆ ಈ ವರ್ಷವೂ ನಾನು ಹೊಸ ರೀತಿಯಲ್ಲಿ ನಿಮಗೆ 2022ರ ಶುಭಾಶಯ ಕೋರುತ್ತೇನೆ. ಈ ಬಾರಿ ಸ್ಟೋರಿಟೆಲ್ ಆಡಿಯೋ ಸರಣಿ ರೂಪದಲ್ಲಿ ನಾನು ಶುಭ ಹಾರೈಸುತ್ತೇನೆ. ನಿಮಗೆ ಒಂದಷ್ಟು ಭರವಸೆ ಒದಗಿಸುವ, ನಿಮ್ಮನ್ನು ಬುದ್ಧಿವಂತ, ಶ್ರೀಮಂತ ಮತ್ತು ಸಂತುಷ್ಟರನ್ನಾಗಿಸುವ ಕೆಲವು ಸಲಹೆಗಳನ್ನು ನೀಡಲೆಂದೇ ಇದನ್ನು ವಿನ್ಯಾಸಗೊಳಿಸಿದ್ದೇನೆ. ಇದು ಮುಂಬರುವ ಅಮೋಘವಾದ ವರ್ಷವೊಂದಕ್ಕೆ ಸೊಗಸಾದ ಭೂಮಿಕೆ ಒದಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲ’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಈ ಆಡಿಯೋ ಸರಣಿಗೆ ‘ಮಾಸದ ಮಾತುಗಳು ವಿಥ್ ರಮೇಶ್’ ಎಂದು ಹೆಸರು ಇಡಲಾಗಿದೆ. 2022ರ ವರ್ಷದ 12 ತಿಂಗಳ ಕಾಲ ಸಣ್ಣ ಸಣ್ಣ ಎಪಿಸೋಡ್ ಮೂಲಕ ಇದನ್ನು ಪ್ರಸ್ತುತಪಡಿಸಲಾಗುವುದು. ಜ.2ರಂದು 12 ಎಪಿಸೋಡ್ಗಳು ಬಿಡುಗಡೆ ಆಗಲಿವೆ. ರಮೇಶ್ ಅರವಿಂದ್ ಅವರದ್ದು ತುಂಬಾ ಪಾಸಿಟಿವ್ ವ್ಯಕ್ತಿತ್ವ. ಅವರ ಮಾತುಗಳನ್ನು ಕೇಳುತ್ತಿದ್ದರೆ ಎಂಥವರಿಗೂ ಸ್ಫೂರ್ತಿ ಬರುತ್ತದೆ. ಅವರು ಯಾವುದಾದರೂ ಕಾರ್ಯಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂದರೆ ಅದರಲ್ಲಿ ಏನಾದರೊಂದು ವಿಶೇಷ ಇದ್ದೇ ಇರುತ್ತದೆ. ಈ ಹಿಂದಿನ ಅನೇಕ ಶೋಗಳ ಮೂಲಕ ಅದು ಸಾಬೀತಾಗಿದೆ. ಹಾಗಾಗಿ ‘ಮಾಸದ ಮಾತುಗಳು ವಿಥ್ ರಮೇಶ್’ ಆಡಿಯೋ ಸರಣಿ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.
ಸ್ಟೋರಿ ಟೆಲ್ನಲ್ಲಿ ಅನೇಕ ಆಡಿಯೋ ಬುಕ್ಗಳು ಇವೆ. ಕನ್ನಡದ ಖ್ಯಾತ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ಎಸ್.ಎಲ್. ಭೈರಪ್ಪ, ವೈದೇಹಿ, ಅನುಪಮಾ ನಿರಂಜನ, ವಿವೇಕ ಶಾನಭೋಗ, ವಸುದೇಂದ್ರ ಮುಂತಾದವರ ಕೃತಿಗಳ ಆಡಿಯೋ ರೂಪ ಇದರಲ್ಲಿ ಇದೆ. ಇನ್ನೂ ಅನೇಕರ ಪುಸ್ತಕಗಳು ಸೇರ್ಪಡೆ ಆಗಲಿವೆ. ಈ ಪ್ಲಾಟ್ಫಾರ್ಮ್ನಲ್ಲಿ ಈಗ ರಮೇಶ್ ಅರವಿಂದ್ ಅವರ ಮಾತುಗಳು ಕೂಡ ಕೇಳಲು ಸಿಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ:
‘100’ ಚಿತ್ರದಲ್ಲಿ ಸೈಬರ್ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್ ಅರವಿಂದ್ ಕಸುಬುದಾರಿಕೆ
ಚಿತ್ರರಂಗದ ಸಮಸ್ಯೆಗಳಿಗೆ ಟಿವಿ9 ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಪರಿಹಾರ ಕೇಳಿದ ರಮೇಶ್ ಅರವಿಂದ್