ಮಠ, ಎದ್ದೇಳು ಮಂಜುನಾಥ್ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ಗುರುಪ್ರಸಾದ್ (Mata Guruprasad) ಅವರು ನಟನೆಯಲ್ಲೂ ಪ್ರತಿಭಾವಂತರು. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಅವರು ‘ಬಾಡಿ ಗಾಡ್’ ಶೀರ್ಷಿಕೆಯ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಗಣಪ’, ‘ಕರಿಯ 2’ (Kariya 2) ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ಪ್ರಭು ಶ್ರೀನಿವಾಸ್ (Prabhu Srinivas) ಅವರು ‘ಬಾಡಿ ಗಾಡ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಲಾಕ್ ಡೌನ್ ವೇಳೆ ನಿರ್ದೇಶಕರು ಹೇಳಿದ ಕಥೆಯನ್ನು ಗುರುಪ್ರಸಾದ್ ತುಂಬ ಇಷ್ಟಪಟ್ಟು ನಟಿಸಲು ಒಪ್ಪಿಕೊಂಡರು. ಆ ಅನುಭವನನ್ನು ಅವರು ಹಂಚಿಕೊಂಡಿದ್ದಾರೆ.
‘ಅರವತ್ತರ ಆಸುಪಾಸಿನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ತನಕ ಪತ್ರಕರ್ತ ಹಾಗೂ ನಿರ್ದೇಶಕನಾಗಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ನನಗೆ ಇದು ವಿಭಿನ್ನ ಪಾತ್ರ. ಚೆನ್ನಾಗಿ ಓದಿದ್ದ ಮಗ-ಮಗಳು ವಿದೇಶದಲ್ಲಿ ನೆಲೆಸಿರುತ್ತಾರೆ. ವಯಸ್ಸಾದವರಿಗೆ ಮಕ್ಕಳ ಅವಶ್ಯಕತೆ ಎಷ್ಟಿರುತ್ತದೆ ಎನ್ನುವುದನ್ನು ಈ ಪಾತ್ರದ ಮೂಲಕ ಹೇಳಲಾಗುತ್ತಿದೆ. ನನ್ನ ಪತ್ನಿ ಪಾತ್ರದಲ್ಲಿ ಪದ್ಮಜಾರಾವ್ ಅಭಿನಯಿಸಿದ್ದಾರೆ. ಒಳ್ಳೆಯ ಕಥೆ, ಒಳ್ಳೆಯ ತಂಡ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ಪ್ರೇಕ್ಷಕರ ಮೆಚ್ಚುಗೆಗೂ ಈ ಸಿನಿಮಾ ಪಾತ್ರವಾಗಲಿದೆ’ ಎಂಬುದು ಗುರುಪ್ರಸಾದ್ ಮಾತುಗಳು.
‘ಸತ್ತ ವ್ಯಕ್ತಿಯ ದೇಹದ ಹಿಂದೆ ಹೆಣೆಯಲಾಗಿರುವ ವಿಭಿನ್ನ ಕಥೆಯ ಈ ಚಿತ್ರವನ್ನು ಲಾಕ್ ಡೌನ್ ಸಮಯದಲ್ಲಿ ನಿರ್ದೇಶಿಸಿದ್ದೇನೆ. ಈ ಕಥೆಯನ್ನು ನನ್ನ ಸ್ನೇಹಿತರ ಬಳಿ ಹೇಳಿದೆ. ಅವರೇ ನಿರ್ಮಾಣ ಮಾಡಬೇಕಿತ್ತು. ಬಳಿಕ ಕಾರಣಾಂತರದಿಂದ ನಾನೇ ನಿರ್ಮಾಣವನ್ನು ಮಾಡಿದ್ದೇನೆ. ಪ್ರಮೋಷನಲ್ ಸಾಂಗ್ ಒಂದರ ಚಿತ್ರೀಕರಣ ಬಿಟ್ಟು ಬಾಕಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಕೂಡ ತೆರೆಗೆ ಬರಲು ಬಹುತೇಕ ಸಿದ್ಧವಾಗಿದೆ. ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ನಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತೇವೆ’ ಎಂದಿದ್ದಾರೆ ನಿರ್ದೇಶಕ ಪ್ರಭು ಶ್ರೀನಿವಾಸ್.
ಮಧ್ಯಮವರ್ಗದ ಯುವಕನ ಪಾತ್ರದಲ್ಲಿ ಮನೋಜ್ ನಟಿಸಿದ್ದಾರೆ. ‘ನನ್ನ ಹಾಗೂ ಗುರುಪ್ರಸಾದ್ ಅವರ ಕಾಂಬಿನೇಶನ್ನಲ್ಲಿ ಬರುವ ಸನ್ನಿವೇಶಗಳು ಚೆನ್ನಾಗಿವೆ’ ಎಂದು ಖುಷಿಪಡುತ್ತಾರೆ ಮನೋಜ್. ಈ ಹಿಂದೆ ‘ಮೊಗ್ಗಿನ ಮನಸು’, ‘ಓ ಪ್ರೇಮವೇ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಅವರಿಗೆ ಇದೆ. ‘ಬಾಡಿ ಗಾಡ್’ ಚಿತ್ರದಲ್ಲಿ ಮನೋಜ್ ಅವರ ನಟನೆಗೆ ನಿರ್ದೇಶಕರಿಗೆ ಮೆಚ್ಚುಗೆ ಆಗಿದೆ. ನಿರಂಜನ್, ಅಶ್ವಿನ್ ಹಾಸನ್ ಕೂಡ ನಟಿಸಿದ್ದಾರೆ. ಕರಣ್ ಬಿ. ಕೃಪ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಕಲನಕಾರರಾಗಿ ಉಜ್ವಲ್ ಚಂದ್ರ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:
ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್ ಬಹಿರಂಗ ಡೆತ್ ನೋಟ್
ದರ್ಶನ್ ವಿವಾದ: ಫ್ಯಾನ್ಸ್ ಇಟ್ಟ ಬೇಡಿಕೆಗೆ ಒಂದೇ ಮಾತಲ್ಲಿ ಉತ್ತರಿಸಿದ ಜಗ್ಗೇಶ್