2009ರಲ್ಲಿ ತೆರೆಕಂಡ ‘ಎದ್ದೇಳು ಮಂಜುನಾಥ’ (Eddelu Manjunatha) ಸಿನಿಮಾವನ್ನು ಜನರು ಈಗಲೂ ನೋಡಿ ಎಂಜಾಯ್ ಮಾಡುತ್ತಾರೆ. ನಿರ್ದೇಶಕ ಗುರುಪ್ರಸಾದ್ ಮತ್ತು ನಟ ಜಗ್ಗೇಶ್ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದ ಆ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಈಗ ಆ ಸಿನಿಮಾದ ‘ಪಾರ್ಟ್ 2’ ಬರುತ್ತಿದೆ. ಹೌದು, ‘ಎದ್ದೇಳು ಮಂಜುನಾಥ 2’ ಚಿತ್ರವನ್ನು ಜನರ ಮುಂದಿಡಲು ನಿರ್ದೇಶಕ ಗುರುಪ್ರಸಾದ್ (Mata Guruprasad) ಅವರು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಹೀರೋ ಜಗ್ಗೇಶ್ ಅಲ್ಲ! ಮಾ.6ರಂದು ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅನೇಕ ವಿಚಾರಗಳನ್ನು ಗುರುಪ್ರಸಾದ್ ಹಂಚಿಕೊಂಡರು. ವಿಶೇಷ ಏನೆಂದರೆ ‘ಎದ್ದೇಳು ಮಂಜುನಾಥ 2’ (Eddelu Manjunatha 2) ಸಿನಿಮಾದಲ್ಲಿ ಅವರೇ ಹೀರೋ ಆಗಿ ನಟಿಸುತ್ತಿದ್ದಾರೆ. ಆದರೆ ಈ ಪಾತ್ರವನ್ನು ಹೀರೋ ಎನ್ನುವ ಬದಲು ಕಥಾನಾಯಕ ಎಂದು ಅವರು ಹೇಳಿಕೊಂಡಿದ್ದಾರೆ. ಒಟ್ಟಾರೆ ಈ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬುದರ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ಮಹಾಲಕ್ಷ್ಮೀ ಅಭಿನಯಿಸಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಮುಕ್ತಾಯ ಆಗಿದೆ.
‘ಮಂಜುನಾಥನ ಪಾತ್ರ ಎಂದರೆ ಒಬ್ಬ ವ್ಯಕ್ತಿಯ ಸೋಮಾರಿತನ ಅಂತ ಬಿಂಬಿಸಿದ್ದೆ. ಈಗ ಬೇರೆ ವಿಚಾರ ತರುತ್ತೇನೆ. ಕನ್ನಡ ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ಆ ರೀತಿಯ ಒಂದು ಪಾತ್ರ ಬರುತ್ತಿದೆ. ಅದನ್ನು ನಾನೇ ನಿಭಾಯಿಸಿದ್ದೇನೆ. ಅದೇನು ಎಂಬುದನ್ನು ನಾನು ಈಗ ಹೇಳಲ್ಲ. ಜನರು ಚಿತ್ರಮಂದಿರದಲ್ಲಿಯೇ ನೋಡಬೇಕು. ನಾನು ನೋಡಿದ, ಅನುಭವಿಸಿದ ಅನೇಕ ಯಾತನೆಗಳು ಇದರಲ್ಲಿ ಇದೆ. ಈ ಸಿನಿಮಾ ಸಾಕಷ್ಟು ನಗಿಸುತ್ತದೆ’ ಎಂದು ಗುರು ಪ್ರಸಾದ್ ಹೇಳಿದ್ದಾರೆ.
‘ಶರತ್ ಲೋಹಿತಾಶ್ವ ಅವರು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೆಂಡತಿಯನ್ನು ಯಾಕೆ ಕೊಂದೆ ಎಂದು ನನ್ನನ್ನು ವಿಚಾರಣೆ ನಡೆಸುವ ಪಾತ್ರ ಅವರದ್ದು. ಯಾಕೆ ಕೊಂದೆ ಎಂಬ ಪ್ರಶ್ನೆಗೆ ದ್ವಿತೀಯಾರ್ಧದಲ್ಲಿ ಉತ್ತರ ಸಿಗತ್ತೆ’ ಎಂದು ಹೇಳಿರುವ ನಿರ್ದೇಶಕರು, ‘ಈ ಚಿತ್ರದಲ್ಲಿ ಸಾಕಷ್ಟು ಬಾಂಬ್ಗಳಿವೆ’ ಅಂತ ಕೂಡ ಹೇಳಿದ್ದಾರೆ. ಆ ಮೂಲಕ ಕೌತುಕ ಮೂಡಿಸಲು ಪ್ರಯತ್ನಿಸಿದ್ದಾರೆ. ಹಾಗಾದರೆ ಆ ಬಾಂಬ್ಗಳು ಯಾವುವು? ಅದರ ಬಗ್ಗೆ ಅವರು ಬೇರೆಯದೇ ರೀತಿಯಲ್ಲಿ ಉತ್ತರಿಸಿದ್ದಾರೆ.
‘ಬಾಂಬ್ ಎಲ್ಲಿ ಮುಚ್ಚಿಟ್ಟಿದ್ದೇವೆ ಎಂಬುದನ್ನು ಮೊದಲೇ ಹೇಳಿದರೆ ಆ ಕೌತುಕ ಹೋಗುತ್ತದೆ. ದೇವರನ್ನು ನಂಬಿ ಬದುಕುವಂತಹ ವ್ಯಕ್ತಿ ಈ ಸಿನಿಮಾ ನೋಡಿದರೆ ದೇವರು ಇದ್ದಾನೋ ಇಲ್ಲವೋ ಎಂಬುಷ್ಟು ಚರ್ಚೆ ಮಾಡುವ ರೀತಿಯಲ್ಲಿ ಬಾಂಬ್ ಇಟ್ಟಿದ್ದೇನೆ’ ಎಂದಿದ್ದಾರೆ ಗುರುಪ್ರಸಾದ್. ಇದಕ್ಕೆ ಅವರು ಬಾಂಬ್ ಅನ್ನೋದು ಯಾಕೆ? ಬಾಂಬ್ ಅಂದ್ರೆ ವಿವಾದಗಳು ಎಂದುಕೊಳ್ಳಬಹುದಾ? ಅದನ್ನೂ ಅವರು ವಿವರಿಸಿದ್ದಾರೆ.
‘ಇದು ವಿವಾದ ಅಲ್ಲ. ಬರೀ ಮನರಂಜನೆ. ನನ್ನ ಪಾಲಿಗೆ ಅದು ವಿಚಾರ. ನಿಮ್ಮ ಪಾಲಿಗೆ ಅದು ವಿವಾದ ಆಗಿರಬಹುದು. ಈ ಸಿನಿಮಾ ಒಂದು ಸೀಕ್ವೆಲ್ ಅಲ್ಲ. ಆದರೆ ಎದ್ದೇಳು ಮಂಜುನಾಥ ಎಂಬ ಶೀರ್ಷಿಕೆಗೆ ನ್ಯಾಯ ಕೊಡುತ್ತೇನೆ. ಒಂದು ಹಾಡು ಈ ಚಿತ್ರದಲ್ಲಿ ಇದೆ. ಪ್ರೇಮಕ್ಕೆ ಎರಡು ಮುಖ ಇರತ್ತೆ. ಕರ್ಕಶ ಮತ್ತು ಮಾಧುರ್ಯ ಕೂಡ ಪ್ರೇಮದಲ್ಲಿ ಇರುತ್ತದೆ. ಕಥೆಗೆ ಅನುಗುಣವಾಗಿ ಪ್ರೇಮ ಎಂಬುದು ಬೇರೆ ಬೇರೆ ರೀತಿಯಲ್ಲಿ ಬಿಂಬಿತ ಆಗುತ್ತದೆ’ ಎಂದಿದ್ದಾರೆ ಗುರು ಪ್ರಸಾದ್.
ಇದನ್ನೂ ಓದಿ:
3 ತಿಂಗಳ ರಾಯರ ಸೇವೆ ಬಳಿಕ ನಡೆದಿದ್ದು ಪವಾಡ; ಬದುಕಿನ ಅಚ್ಚರಿಯ ವಿಚಾರ ತೆರೆದಿಟ್ಟ ನಟ ಜಗ್ಗೇಶ್