
ಡಾಲಿ ಧನಂಜಯ (Daali Dhananjaya) ನಟನೆಯ ‘ಮದರ್ ಪ್ರಾಮಿಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜುಲೈ 10ರಂದು ಈ ಚಿತ್ರ ತೆರೆಕಾಣಲಿದೆ. ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಹಾಡುಗಳು ಮತ್ತು ಕಂಟೆಂಟ್ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಈ ಚಿತ್ರತಂಡ. ಡಾಲಿ ಧನಂಜಯ ನಿರ್ಮಿಸಿ, ನಟನೆ ಮಾಡಿರುವ ಸಿನಿಮಾ ಆದ್ದರಿಂದ ನಿರೀಕ್ಷೆ ಜಾಸ್ತಿ ಇದೆ. ‘ಮದರ್ ಪ್ರಾಮಿಸ್’ (Mother Promise) ಸಿನಿಮಾ ತಂಡದಿಂದ ಹೊಸ ಹಾಡು ಬಿಡುಗಡೆ ಆಗಿದೆ. ಇದು ಮಕ್ಕಳ ಪ್ರಾರ್ಥನಾ ಗೀತೆ ಎಂಬುದು ವಿಶೇಷ.
ಈಗಾಗಲೇ ಪ್ರೇಮಗೀತೆ, ಹಳ್ಳಿ ಸೊಗಡಿನ ಗೀತೆಗಳನ್ನ ಬರೆದಿರುವ ಡಾಲಿ ಧನಂಜಯ ಅವರು ಇದೇ ಮೊದಲ ಬಾರಿಗೆ ಮಕ್ಕಳ ಪ್ರಾರ್ಥನಾ ಗೀತೆಯನ್ನ ರಚಿಸಿದ್ದಾರೆ. ಡಾಲಿ ಬರೆದಿರುವ ‘ಓ ಬೆಳಕೆ ಬಾ ಮನಕೆ..’ ಹಾಡು ಮಕ್ಕಳ ಭಾವನಾತ್ಮಕ ಪ್ರಾರ್ಥನಾ ಗೀತೆಯಾಗಿದ್ದು, ಸಂಪೂರ್ಣ ಹಾಡನ್ನ ತುಮಕೂರಿನ ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳ ಜೊತೆ ಚಿತ್ರೀಕರಣ ಮಾಡಲಾಗಿದೆ.
ಮಕ್ಕಳ ಜೊತೆಯಲ್ಲಿ ಮದರ್ ಪ್ರಾಮಿಸ್ ಸಿನಿಮಾತಂಡವೂ ಸೇರಿ ದಿನ ಪೂರ್ತಿ ಮಠದ ಅಂಗಳ, ಶಾಲೆ, ಅಡುಗೆ ಕೋಣೆ ಹೀಗೆ ಪ್ರತಿ ಸ್ಥಳದಲ್ಲಿಯೂ ಸಮಯ ಕಳೆದು ಈ ಹಾಡನ್ನ ಚಿತ್ರೀಕರಿಸಿದ್ದಾರೆ. ಸದಾ ಕಮರ್ಷಿಯಲ್ , ರೊಮ್ಯಾಂಟಿಕ್ ಹಾಡುಗಳ ಮಧ್ಯೆ ಇಂಥದೊಂದು ಪ್ರಾರ್ಥನಾ ಗೀತೆ ಕೇಳಿ ಸಿನಿಮಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ‘ಮದರ್ ಪ್ರಾಮಿಸ್’ ಚಿತ್ರತಂಡ ಹೇಳಿದೆ.
‘ಮದರ್ ಪ್ರಾಮಿಸ್’ ಸಿನಿಮಾವನ್ನ ‘ಡಾಲಿ ಪಿಕ್ಚರ್ಸ್’ ಸಹಯೋಗದೊಂದಿಗೆ ಹರ್ಷ ನಿರ್ಮಾಣ ಮಾಡಿದ್ದಾರೆ. ಮದರ್ ಪ್ರಾಮಿಸ್ ಎಂಬುದೇ ಒಂದು ಎಮೋಷನ್. ಈ ಶೀರ್ಷಿಕೆ ಇಟ್ಟುಕೊಂಡು ಎಮೋಷನಲ್, ಕಾಮಿಡಿ ಹಾಗೂ ಥ್ರಿಲ್ ಇರುವ ಕಥೆಯನ್ನ ತೆರೆ ಮೇಲೆ ತರುತ್ತಿದ್ದಾರೆ ನಿರ್ದೇಶಕ ಪೂರ್ಣಚಂದ್ರ ಮೈಸೂರು. ಈ ಚಿತ್ರದಲ್ಲಿ ಡಾಲಿ ಧನಂಜಯ ಜೊತೆ ನಾಗಭೂಷಣ್ , ವಿನಯಾ ಪ್ರಸಾದ್ , ಗೀತಾ, ಗುರುದತ್ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ಕಣ್ಣೀರು ಹಾಕುತ್ತಾ ಸುದ್ದಿಗೋಷ್ಠಿಯಿಂದಲೇ ಎದ್ದು ನಡೆದ ಡಾಲಿ ಧನಂಜಯ್ ಚಿತ್ರದ ನಟಿ
ಈ ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ಅವರು ನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಪೂರ್ಣ ಅವರು ನಿಭಾಯಿಸಿದ್ದು, ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾ ಖ್ಯಾತಿಯ ನಿರ್ದೇಶಕ ಶಶಾಂಕ್ ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ರಾಹುಲ್ ರಾಯ್ ಅವರ ಛಾಯಾಗ್ರಹಣ, ನವನೀತ್ ಶ್ಯಾಮ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.