ಸಿನಿಮಾಗೆ ಸೂಕ್ತ ಟೈಟಲ್ ನೀಡುವವರಿಗೆ ನಗದು ಬಹುಮಾನ ಘೋಷಿಸಿದ ಚಿತ್ರತಂಡ
‘ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಸಿದ್ಧಗೊಳ್ಳುತ್ತಿರುವುದರಿಂದ 3 ಭಾಷೆಗೆ ಹೊಂದುವಂತೆ ಟೈಟಲ್ ಇರತಕ್ಕದು. ಸಣ್ಣದೊಂದು ವಿವರಣೆ ನೀಡಬೇಕು’ ಎಂದು ಚಿತ್ರತಂಡ ತಿಳಿಸಿದೆ.
ಕನ್ನಡ ಚಿತ್ರರಂಗದಲ್ಲಿ (Kannada Film Industry) ಹೊಸ ಹೊಸ ಪ್ರಯೋಗಗಳು, ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಟೈಟಲ್ ಮೂಲಕವೇ ಗಮನ ಸೆಳೆದ ಅನೇಕ ಸಿನಿಮಾಗಳಿವೆ. ಪ್ರತಿ ಚಿತ್ರಕ್ಕೆ ಶೀರ್ಷಿಕೆ ತುಂಬ ಮುಖ್ಯ ಆಗುತ್ತದೆ. ಕಥೆಗೆ ಸೂಕ್ತವಾಗಿ ಹೊಂದಿಕೆ ಆಗುವಂತಹ ಟೈಟಲ್ ಸಲುವಾಗಿ ಜಗಳಗಳು ನಡೆದ ಉದಾಹರಣೆ ಕೂಡ ಚಂದನವನದಲ್ಲಿ (Sandalwood) ಇದೆ. ಹಾಗಾಗಿ ಸಿನಿಮಾಗೆ ಶೀರ್ಷಿಕೆ ಆಯ್ಕೆ ಮಾಡುವಾಗ ಪ್ರತಿ ತಂಡಗಳು ಕೂಡ ಸಾಕಷ್ಟು ಕಾಳಜಿ ವಹಿಸುತ್ತವೆ. ಈಗ ಇಲ್ಲೊಂದು ಹೊಸ ಸಿನಿಮಾ ಟೀಮ್ ಟೈಟಲ್ಗಾಗಿ ಹುಡುಕಾಟ ನಡೆಸಿದೆ. ಪ್ರೇಕ್ಷಕರೇ ಸೂಕ್ತ ಶೀರ್ಷಿಕೆ (Cinema Title) ಸೂಚಿಸಲಿ ಎಂದು ಕೇಳಲಾಗಿದೆ. ಒಂದು ಪೋಸ್ಟರ್ ಮೂಲಕ ಕೌತುಕ ಹುಟ್ಟಿಸಲಾಗಿದೆ. ಅದನ್ನು ನೋಡಿ ಸರಿಯಾದ ಟೈಟಲ್ ಸೂಚಿಸುವವರಿಗೆ ನಗದು ಬಹುಮಾನ ನೀಡುವುದಾಗಿಯೂ ಚಿತ್ರತಂಡ ಹೇಳಿಕೊಂಡಿದೆ.
‘ಸ್ಟಾಕರ್’ ಸಿನಿಮಾಗೆ ಬಂಡವಾಳ ಹೂಡಿದ್ದ ಎಸ್‌ಎಂಎಲ್ ಪ್ರೊಡಕ್ಷನ್ ಸಂಸ್ಥೆಯಿಂದ ಈಗ 2ನೇ ಚಿತ್ರಕ್ಕಾಗಿ ಸಕಲ ತಯಾರಿ ನಡೆದಿದೆ. ಈ ಪ್ರಾಜೆಕ್ಟ್ಗೆ ತಾತ್ಕಾಲಿಕವಾಗಿ ‘ಪ್ರೊಡಕ್ಷನ್ ನಂ.2’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾಗೆ ಹೆಸರನ್ನು ಸೂಚಿಸಲು ಸಿನಿಪ್ರಿಯರಿಗೆ ಅವಕಾಶ ನೀಡಲಾಗಿದೆ. ಸೂಕ್ತ ಶೀರ್ಷಿಕೆ ನೀಡಿದವರಿಗೆ 21 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿಕೊಂಡಿದೆ. ಇದಕ್ಕಾಗಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ರಮೇಶ್ ನಟಿಸಲಿದ್ದಾರೆ. ಹೇಮಂತ್ ನಿರ್ದೇಶನ, ಸುಧೀರ್ ಛಾಯಾಗ್ರಹಣ ಮಾಡಲಿದ್ದಾರೆ. ‘10 ಅರ್ಥಪೂರ್ಣ ಹೆಸರು ನೀಡಿದವರಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗುವುದು. ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಸಿದ್ಧಗೊಳ್ಳುತ್ತಿರುವುದರಿಂದ 3 ಭಾಷೆಗೆ ಹೊಂದುವಂತೆ ಟೈಟಲ್ ಇರತಕ್ಕದು ಹಾಗೂ ಸಣ್ಣದೊಂದು ವಿವರಣೆ ನೀಡಬೇಕು. ಒಂದೇ ಶೀರ್ಷಿಕೆಯನ್ನು ಹೆಚ್ಚು ಜನ ನೀಡಿದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಸೆಲೆಬ್ರಿಟಿಗಳು ಲಾಟರಿ ತೆಗೆದು ಹೆಸರನ್ನು ಹೇಳುವರು. ಹೆಚ್ಚಿನ ವಿವರಗಳಿಗೆ www.smlproductions.com, sml productions Facebook page, info@smlproductions.com ಅಥವಾ ಮೊಬೈಲ್ ಸಂಖ್ಯೆ 8867579595 ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು’ ಎಂದು ಚಿತ್ರತಂಡ ತಿಳಿಸಿದೆ.
ಈ ಸಿನಿಮಾ ತಂಡದವರು ಹಂಚಿಕೊಂಡಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಕತ್ತಲೆಯ ಹಿನ್ನೆಲೆಯಲ್ಲಿ ಹೀರೋ ನಿಂತಿದ್ದಾನೆ. ಕ್ಯಾಮೆರಾಗೆ ಬೆನ್ನು ತೋರಿಸಿ ನಿಂತಿರುವ ಆತನ ಕೈಯಲ್ಲಿ ಕತ್ತಿ ಇದೆ. ಆ ಕತ್ತಿಯಿಂದ ರಕ್ತ ಸುರಿಯುತ್ತಿದೆ. ಕಪ್ಪು ಬಿಳುಪಿನ ಪೋಸ್ಟರ್ನಲ್ಲಿ ರಕ್ತ ಮಾತ್ರ ಕೆಂಪಾಗಿ ಹೈಲೈಟ್ ಆಗಿದೆ. ಅಂತಿಮವಾಗಿ ಈ ಚಿತ್ರಕ್ಕೆ ಯಾವ ಟೈಟಲ್ ಆಯ್ಕೆ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 pm, Mon, 5 September 22