‘ಪಿಂಗಾಕ್ಷ’ ಸಿನಿಮಾ ಮುಹೂರ್ತ: ಈ ಚಿತ್ರದಲ್ಲಿ ಇರಲಿದೆ ಹಾರರ್ ಕಹಾನಿ
ಬಿ. ಭರತ್ ವಾಸುದೇವ್ ಅವರು ನಿರ್ದೇಶನ ಮಾಡುತ್ತಿರುವ ‘ಪಿಂಗಾಕ್ಷ’ ಸಿನಿಮಾಗೆ ಮುಹೂರ್ತ ನೆರವೇರಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾವನ್ನು ನಿರ್ಮಿಸಲು ಚಿತ್ರತಂಡ ಮುಂದಾಗಿದೆ. ಬಿ. ವಾಸುದೇವ ರಾವ್ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

ಹಾರರ್ ಕಥೆಯುಳ್ಳ ಸಿನಿಮಾಗಳು ಸಾಕಷ್ಟು ಬಂದಿವೆ. ದೇವರ ಶೀರ್ಷಿಕೆ ಇಟ್ಟುಕೊಂಡು ಈಗೊಂದು ಹೊಸ ಹಾರರ್ ಸಿನಿಮಾ (Horror Movie) ಸೆಟ್ಟೇರಿದೆ. ‘ಪಿಂಗಾಕ್ಷ’ ಎಂಬುದು ಈ ಸಿನಿಮಾದ ಹೆಸರು. ಆಂಜನೆಯನಿಗೆ ಭಜರಂಗಿ, ಹನುಮಂತ ಎಂಬ ಹೆಸರುಗಳ ರೀತಿಯೇ ಪಿಂಗಾಕ್ಷ (Pingaksha) ಎಂದು ಕೂಡ ಕರೆಯಲಾಗುತ್ತದೆ. ಇದನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡು ಹಾರರ್ ಕಥೆ ಹೇಳಲು ಹೊಸ ತಂಡ ಸಜ್ಜಾಗಿದೆ. ಇತ್ತೀಚೆಗೆ ಈ ಕನ್ನಡ ಸಿನಿಮಾಗೆ (Kannada Cinema) ಮುಹೂರ್ತ ಸಮಾರಂಭ ನೆರವೇರಿತು. ಈ ವೇಳೆ ಚಿತ್ರತಂಡದವರು ಒಂದಷ್ಟು ಮಾಹಿತಿ ಹಂಚಿಕೊಂಡರು.
ಬೆಂಗಳೂರಿನ ನಂದಿನಿ ಲೇಔಟ್ ಶ್ರೀಬಲಮುರಿ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ‘ಪಿಂಗಾಕ್ಷ’ ಸಿನಿಮಾಗೆ ಮುಹೂರ್ತ ಸಮಾರಂಭ ಮಾಡಲಾಯಿತು. ‘ಸಗಿಟ್ಟರಿಯನ್ ಫಿಲ್ಮ್ಸ್’ ಬ್ಯಾನರ್ ಮೂಲಕ ಬಿ. ವಾಸುದೇವ ರಾವ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಿ. ಭರತ್ ವಾಸುದೇವ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
‘ಪಿಂಗಾಕ್ಷ’ ಸಿನಿಮಾದ ಶೀರ್ಷಿಕೆಗೆ ‘ವಾಯ್ಸಸ್ ಆಫ್ ಡೆಡ್’ ಎಂಬ ಟ್ಯಾಗ್ ಲೈನ್ ಇದೆ. ಆ ಮೂಲಕ ಕುತೂಹಲ ಮೂಡಿಸಲಾಗಿದೆ. ‘ಅನೇಕ ಹಾರರ್ ಸಿನಿಮಾಗಳು ಈವರೆಗೆ ಬಂದಿವೆ. ಆದರೆ ನಮ್ಮ ಸಿನಿಮಾದಲ್ಲಿ ಪ್ರಾರಂಭದಿಂದ ಕೊನೆವರೆಗೂ ಮೈ ಜುಂ ಎನಿಸುವಂತಹ ಭಯಾನಕ ದೃಶ್ಯಗಳು ಇರಲಿವೆ’ ಎಂದು ನಿರ್ದೇಶಕ ಬಿ. ವಾಸುದೇವ ರಾವ್ ಅವರು ಹೇಳಿದರು.
‘ಮನೆಯ ಯಜಮಾನ ದುಷ್ಟ ಶಕ್ತಿಯಿಂದ ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಹೇಗೆ ಹೋರಾಡುತ್ತಾನೆ? ಅವನಿಗೆ ದೈವಶಕ್ತಿ ಹೇಗೆ ಸಹಕಾರ ನೀಡುತ್ತದೆ? ಗಂಡ, ಹೆಂಡತಿ ಮತ್ತು ಮಗುವಿನ ಮೇಲೆ ಸೇಡು ಇರದಿದ್ದರೂ ದೆವ್ವ ಬರುವುದು ಯಾಕೆ? ಇದಕ್ಕೆ ಪರಹಾರ ಏನು ಎಂಬಿತ್ಯಾದಿ ಅಂಶಗಳು ನಮ್ಮ ಸಿನಿಮಾದಲ್ಲಿ ಇರಲಿವೆ’ ಎಂದು ನಿರ್ದೇಶಕರು ಹೇಳಿದರು.
ಈ ಸಿನಿಮಾದಲ್ಲಿ 4 ಹಾಡು, 3 ಫೈಟ್ ಇರಲಿದೆ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು, ಮಡಕೇರಿ, ಕಲಪಿ, ಕೊಚ್ಚಿನ್, ಮುನ್ನಾರ್ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ನಾಯಕನಾಗಿ ಸಂತೋಷ್ ಕುಮಾರ್, ನಾಯಕಿಯಾಗಿ ರಿಶಾ ಗೌಡ ಅವರು ನಟಿಸುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಭಾರ್ಗವ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಹಾರರ್ ಸಿನಿಮಾನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ರಶ್ಮಿಕಾ
ಸಂತೋಷ್ ಕುಮಾರ್ ಅವರು ಎಸಿಪಿ ಪಾತ್ರ ಮಾಡುತ್ತಿದ್ದಾರೆ. ಐರಾ ಮೆನನ್, ಅವಿನಾಶ್, ರಂಗಾಯಣ ರಘು, ಕಿಟ್ಟಿ ತಾಳಿಕೋಟೆ, ನಾಗಮಹೇಶ್, ಕು. ಆರೋಹಿ ಉದನೂರ್, ಬಲರಾಜವಾಡಿ, ವರ್ಧನ್, ಶರತ್ ಲೋಹಿತಾಶ್ವ, ಆಶಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಬಿ. ರಾಜರತ್ನ ಅವರ ಸಂಭಾಷಣೆ, ಕ್ರಿಸ್ಟೋಫರ್ ಜಾಯ್ಸನ್ ಅವರ ಸಂಗೀತ, ಜೆ.ಕೆ. ಗಣೇಶ್ ಅವರ ಛಾಯಾಗ್ರಹಣ, ಯೋಗಾನಂದ್ ಡಿ.ಸಿ ಅವರ ಸಾಹಸ ಈ ಚಿತ್ರಕ್ಕೆ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




