In His Name: ವಿಡಿಯೋ ಸಾಂಗ್ ಮೂಲಕ ಎಲ್ಲರ ಮನ ಮುಟ್ಟಿದ ಚಂದನಾ
ಚಂದನಾ ಅನಂತಕೃಷ್ಣ ಅವರು ಪೆಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿ 'ಇನ್ ಹಿಸ್ ನೇಮ್' ಎಂಬ ಹಾಡನ್ನು ನಿರ್ಮಿಸಿ ಹಾಡಿದ್ದಾರೆ. ಈ ಹಾಡು ವೈರಲ್ ಆಗಿದ್ದು, ಕಿಚ್ಚ ಸುದೀಪ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಡಿನಲ್ಲಿ ನವವಿವಾಹಿತೆಯ ಪಾತ್ರವನ್ನು ಚಂದನಾ ನಿರ್ವಹಿಸಿದ್ದು, ಮಯೂರ್ ಅಂಬೆಕಲ್ಲು ಸಂಗೀತ ಸಂಯೋಜನೆ ಮಾಡಿದ್ದಾರೆ.

ಜಮ್ಮು-ಕಾಶ್ಮೀರದ ಪೆಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ಕಹಿ ನೆನಪು ಎಂದಿಗೂ ಮಾಸುವಂಥದ್ದಲ್ಲ. ಈ ದಾಳಿಯಲ್ಲಿ ನಿಧನ ಹೊಂದಿದವರದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಇದರಲ್ಲಿ ನವ ಜೋಡಿಯೂ ಇತ್ತು. ಆಗತಾನೇ ಮದುವೆ ಆಗಿ, ಹನಿಮೂನ್ಗೆಂದು ಬಂದಿದ್ದವರ ಪೈಕಿ ಪತಿಯನ್ನು ಹತ್ಯೆ ಮಾಡಲಾಯಿತು. ಇದೇ ವಿಚಾರವನ್ನು ಇಟ್ಟುಕೊಂಡು ಚಂದನಾ ಅನಂತಕೃಷ್ಣ (Chandana) ಅವರು ಸಾಂಗ್ ಒಂದನ್ನು ಮಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ಹೊರಹಾಕಿದ್ದಾರೆ.
‘ಇನ್ ಹಿಸ್ ನೇಮ್’ ಅನ್ನೋದು ಹಾಡಿನ ಹೆಸರು. ಈ ಹಾಡನ್ನು ಚಂದನಾ ಅವರೇ ಹಾಡಿದ್ದಾರೆ. ಈ ವಿಡಿಯೋ ಸಾಂಗ್ನಲ್ಲಿ ನವ ವಿವಾಹಿತೆಯಾಗಿ ಕಾಣಿಸಿಕೊಂಡಿದ್ದೂ ಅಲ್ಲದೆ, ಇದನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಪೆಹಲ್ಗಾಮ್ ಉಗ್ರರರ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಅರ್ಪಿಸುವ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ. ಮಯೂರ್ ಅಂಬೆಕಲ್ಲು ಹಾಡನ್ನು ಸಂಯೋಜನೆ ಮಾಡಿದ್ದಾರೆ. ತೇಜಸ್ ಕಿರಣ್ ಹಾಗೂ ಮಯೂರ್ ಒಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಚಂದನಾ ಜೊತೆ ನಿದರ್ಶನ್, ಸಂದೀಪ್ ರಾಜ್ಗೋಪಾಲ್ ನಟಿಸಿದ್ದಾರೆ.
ಚಂದನಾ ಪೋಸ್ಟ್
View this post on Instagram
ಈ ಹಾಡಿನ ಬಗ್ಗೆ ಮಾತನಾಡಿರೋ ಚಂದನಾ ಅವರು, ‘ನಾನು ಈಗ ಚಂದ್ರನ ಮೇಲಿದ್ದಂತೆ ಭಾಸ ಆಗುತ್ತಿದೆ. ಎಲ್ಲವೂ ಟೀಂ ವರ್ಕ್ ಇದೆ. ಇದನ್ನು ತುಂಬಾ ಜನರು ಇಷ್ಟಪಟ್ಟಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶಿವಣ್ಣ ಇನ್ಸ್ಟಾಗ್ರಾಮ್ ಸ್ಟೇಟಸ್ ಹಾಕಿದ್ದರು. ಈಗ ಸುದೀಪ್ ಕೂಡ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅವರು ತುಂಬಾನೇ ವಿವರವಾಗಿ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಹಾಡು ಇನ್ನೂ ಹೆಚ್ಚಿನ ಜನರಿಗೆ ತಲುಪಬೇಕಿದೆ’ ಎನ್ನುತ್ತಾರೆ.
ಇದನ್ನೂ ನೋಡಿ: ಚಂದನಾ ವಿಡಿಯೋ ಸಾಂಗ್ಗೆ ಕಿಚ್ಚನ ಮೆಚ್ಚುಗೆ
‘ಕಾನ್ಸೆಪ್ಟ್ ಇಷ್ಟ ಆಯಿತು, ಅದಕ್ಕೆ ಹಾಡನ್ನು ನಿರ್ಮಾಣ ಮಾಡಿದೆ. ಈ ರೀತಿಯ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಒಳ್ಳೆಯ ಅವಕಾಶ ಸಿಕ್ಕಾಗ ಅದನ್ನು ಬೇಡ ಅನ್ನಬಾರದು. ಈ ಹಾಡಿನಿಂದ ದುಡ್ಡು ಬರುತ್ತದೆಯೋ ಇಲ್ಲವೋ ಅದು ಎರಡನೇ ವಿಚಾರ. ಆದರೆ, ಇಂಥ ಅವಕಾಶ ಸಿಕ್ಕಾಗ ನನಗೆ ಹಣ ಹಾಕಬೇಕು ಎಂದು ಅನಿಸಿತು. ಇದನ್ನು ನಿರ್ದೇಶಕರು ಹೇಳಿದಾಗ ಖುಷಿ ಆಯ್ತು’ ಎಂದಿದ್ದಾರೆ ಚಂದನಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:59 pm, Tue, 19 August 25








