‘ಇಂದಿರಾ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಟೈಟಲ್ ಬಗ್ಗೆ ಸ್ಪಷ್ಟನೆ ನೀಡಿದ ಚಿತ್ರತಂಡ

ಹೊಸ ಕನ್ನಡ ಸಿನಿಮಾಗೆ ಇಂದಿರಾ ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಜೆನ್ ಜಿ’ ಎಂಬ ಟ್ಯಾಗ್​ ಲೈನ್ ಈ ಶೀರ್ಷಿಕೆಗೆ ಇದೆ. ಅದರಂತೆ ಹೊಸ ತಲೆಮಾರಿನ ಕಥೆ ಈ ಚಿತ್ರದಲ್ಲಿ ಇರಲಿದೆ. ಇತ್ತೀಚೆಗೆ ‘ಇಂದಿರಾ’ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿತು. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

‘ಇಂದಿರಾ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಟೈಟಲ್ ಬಗ್ಗೆ ಸ್ಪಷ್ಟನೆ ನೀಡಿದ ಚಿತ್ರತಂಡ
Indira Movie Poster

Updated on: Jan 23, 2026 | 5:05 PM

ಇಂದಿನ ತಲೆಮಾರಿನ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ‘ಇಂದಿರಾ’ ಸಿನಿಮಾ (Indira Movie) ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಜೆನ್ ಜೀ (Gen Z) ಜೀವನ ಶೈಲಿಯ ಕುರಿತ ಕಥೆ ಇರಲಿದೆ. ಈ ತಲೆಮಾರಿನ ಯುವಕರ ಅಂಗೈಯಲ್ಲಿ ಯಾವಾಗಲೂ ಸ್ಮಾರ್ಟ್‌ ಪೋನ್‌ ಇರುತ್ತದೆ. ಈ ತಂತ್ರಜ್ಞಾನವನ್ನು ಹೇಗೆಲ್ಲ ಬಳಸಿಕೊಳ್ಳಲಾಗುತ್ತಿದೆ? ಹೇಗೆಲ್ಲ ಬಳಸಿಕೊಳ್ಳಬಹುದು ಎಂಬ ಕಥೆಯನ್ನು ‘ಇಂದಿರಾ’ ಸಿನಿಮಾ ಮೂಲಕ ಹೇಳಲಾಗುವುದು. ಈ ಹಿಂದೆ ‘ರಾವೆನ್‌’ ಸಿನಿಮಾ ನಿರ್ದೇಶಿಸಿದ್ದ ವೇದ್‌ ಅವರು ಈಗ ‘ಇಂದಿರಾ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

‘ಕಿರಣ್‌ ಫಿಲ್ಮ್ಸ್’ ಮೂಲಕ ಕಿರಣ್‌ ಕುಮಾರ್‌ ಎಂ. ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಟೈಟಲ್ ಬಗ್ಗೆ ಅವರು ಸ್ಪಷ್ಟನೆ ನೀಡಿದರು. ‘ಇಂದಿರಾ ಎಂಬ ಶೀರ್ಷಿಕೆ ಇದ್ದರೂ ಕೂಡ ಈ ಸಿನಿಮಾಕ್ಕೂ ಇಂದಿರಾ ಗಾಂಧಿಯವರಿಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯ ಕಥೆಯಾಧಾರಿತ ಸಿನಿಮಾವಲ್ಲ. ಆದರೆ ಸಿನಿಮಾದ ಕಥೆಯಲ್ಲಿ ಇಂದಿನ ಹಲವು ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಸಿನಿಮಾದ ಕಥೆಗೆ ತಕ್ಕಂತೆ ಪವರ್‌ಫುಲ್‌ ಟೈಟಲ್‌ ಇರಬೇಕೆಂಬ ಕಾರಣಕ್ಕೆ ಈ ಹೆಸರಿಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಇಂದಿನ ಜೆನ್‌ ಜೀ ಪ್ರೇಕ್ಷಕರಿಗೆ ಕನೆಕ್ಟ್‌ ಆಗುವ ಸಿನಿಮಾ ಇದಾಗಿರುವುದರಿಂದ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಈ ಸಿನಿಮಾ ನಿರ್ಮಿಸುತ್ತಿದ್ದೇವೆ. ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ. ಈಗಾಗಲೇ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇದೇ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದ್ದೇವೆ’ ಎಂದು ನಿರ್ಮಾಪಕರು ಹೇಳಿದರು.

‘ಇದೊಂದು ಮಹಿಳಾ ಪ್ರಧಾನ ಕಥಾಹಂದರದ ಸಿನಿಮಾ. ಹಾಗಾಗಿ ಸಿನಿಮಾಕ್ಕೆ ಇಂದಿರಾ ಎಂದು ಹೆಸರಿಟ್ಟಿದ್ದೇವೆ. ಈ ಸಿನಿಮಾದಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ಕೂಡ ಇರಲಿದೆ’ ಎಂದು ನಿರ್ದೇಶಕ ವೇದ್‌ ಅವರು ಹೇಳಿದ್ದಾರೆ. ರವಿವರ್ಮ ಅವರು ಛಾಯಾಗ್ರಹಣ ಹಾಗೂ ಧನುಶ್‌ ಅವರು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ‘ಮಾರ್ಕ್‌’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ

‘ಇಂದಿರಾ’ ಸಿನಿಮಾದ ಮುಖ್ಯ ಪಾತ್ರಕ್ಕೆ ಕನ್ನಡದ ಜನಪ್ರಿಯ ನಟಿಯೊಬ್ಬರನ್ನು ಕರೆತರುವ ಪ್ಲ್ಯಾನ್ ಚಿತ್ರತಂಡಕ್ಕೆ ಇದೆ. ಅದು ಯಾರು ಎಂಬುದು ನಂತರದ ದಿನಗಳಲ್ಲಿ ತಿಳಿಯಲಿದೆ. ಮಾರ್ಚ್‌ ತಿಂಗಳ ಕೊನೆಯೊಳಗೆ ಕಲಾವಿದರು ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸಿ, ಶೂಟಿಂಗ್ ಆರಂಭಿಸಲಾಗುವುದು. ಟೈಟಲ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾ.ಮ. ಹರೀಶ್‌, ಟಿ.ಪಿ. ಸಿದ್ಧರಾಜು, ನಿತ್ಯಾನಂದ ಪ್ರಭು, ಭಾ.ಮ. ಗಿರೀಶ್‌, ದೇವ್ ದೇವಯ್ಯ ಮುಂತಾದವರು ಆಗಮಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.