ದರ್ಶನ್ ಭೇಟಿಗೆ ಸೆಲೆಬ್ರಿಟಿಗಳಿಗಿಲ್ಲ ಅವಕಾಶ; ಜೈಲು ನೋಡಿ ದರ್ಶನ್ ಕಂಗಾಲು

ವಿಶೇಷ ಆತಿಥ್ಯ ಪಡೆದು ವಿವಾದ ಮಾಡಿಕೊಂಡಿರುವ ಕಾರಣದಿಂದಲೇ ಈಗ ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರಗೊಂಡಿರುವ ಕಾರಣ, ಬಳ್ಳಾರಿ ಜೈಲಿನಲ್ಲಿ ಯಾವುದೇ ಸೌಲಭ್ಯಗಳು ನೀಡದಂತೆ ಉನ್ನತ ಅಧಿಕಾರಿಗಳಿಂದ ಶಿಸ್ತಿನ ಸೂಚನೆಗಳು ಸ್ಥಳೀಯ ಅಧಿಕಾರಿಗಳಿಗೆ ದೊರತಿದೆ.

ದರ್ಶನ್ ಭೇಟಿಗೆ ಸೆಲೆಬ್ರಿಟಿಗಳಿಗಿಲ್ಲ ಅವಕಾಶ; ಜೈಲು ನೋಡಿ ದರ್ಶನ್ ಕಂಗಾಲು
ದರ್ಶನ್
Follow us
Sahadev Mane
| Updated By: ರಾಜೇಶ್ ದುಗ್ಗುಮನೆ

Updated on: Aug 29, 2024 | 2:38 PM

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರನ್ನು ಇಂದು (ಆಗಸ್ಟ್ 19) ಬಳ್ಳಾರಿಗೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರು ಜೈಲಿನಲ್ಲಿ ದರ್ಶನ್ ಹಾಯಾಗಿದ್ದರು. ಅವರು ಸಿಗರೇಟ್ ಸೇದುತ್ತಿದ್ದ ಫೋಟೋ ಹೊರ ಬರುತ್ತಿದ್ದಂತೆ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಬಳ್ಳಾರಿಯಲ್ಲೂ ಅವರಿಗೆ ಸವಲತ್ತು ಸಿಗಲಿದೆ ಎಂಬ ಆರೋಪ ಬಂತು. ಆದರೆ, ಕಾರಾಗೃಹ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಉತ್ತರ ಡಿಐಜಿ ವಿಶೇಷ ಆದೇಶ ನೀಡಿದ್ದಾರೆ. ಪ್ರಮುಖ ಅಂಶಗಳನ್ನೊಳಗೊಂಡ ಆದೇಶ ಪ್ರತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.

ಬಳ್ಳಾರಿ ಸೆಂಟ್ರಲ್ ಜೈಲಿಗೆ ಆರೋಪಿ ನಟ ದರ್ಶನ್‌ ಬೆಳ್ಳಿಗೆ 10 ಗಂಟೆ ಸುಮಾರಿಗೆ ತೆರಳಿದ್ದಾರೆ. ಹೈ ಸೆಕ್ಯೂರಿಟಿ ಸೆಲ್ ಕಂಡು ನಟ ದರ್ಶನ್‌ ಶಾಕ್‌ ಆಗಿದ್ದಾರೆ ಎನ್ನಲಾಗಿದೆ. ಮೊದಲ ಗೇಟ್‌ಗೆ ಎಂಟ್ರಿಯಾಗುತ್ತಿದ್ದಂತೆ ಅವರು ತಲೆ ಚಚ್ಚಿಕೊಂಡಿದ್ದಾರೆ. ಸದ್ಯ ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿಯ 15ನೇ ಸೆಲ್‌ನಲ್ಲಿ ದರ್ಶನ್‌ ಇದ್ದಾರೆ. ಇದರ ಜೊತೆಗೆ ಕಟ್ಟಿನಿಟ್ಟಿನ ಕ್ರಮಕ್ಕೂ ಆದೇಶಿಸಲಾಗಿದೆ. ದರ್ಶನ್​ಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಇಲ್ಲಿದೆ ವಿವರ.

  1. ಸೂಕ್ತ ನಿಗಾ ವಹಿಸಲು 24 ಗಂಟೆಯೂ ಸಿಸಿಟಿವಿ ಕಣ್ಗಾವಲು ಇರಲಿದೆ.
  2. ದರ್ಶನ್ ಪತ್ನಿ, ರಕ್ತ ಸಂಬಂಧಿಗಳು ಮತ್ತು ಪ್ರಕರಣದ ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಕಾರಾಗೃಹದ ನಿಯಮಾನುಸಾರ ಸಂದರ್ಶನ ನೀಡಲು ಅವಕಾಶ ಕಲ್ಪಿಸತಕ್ಕದ್ದು.
  3. ದರ್ಶನ್ ಸಂದರ್ಶನಕ್ಕಾಗಿ ಕನ್ನಡ ಚಿತ್ರರಂಗದ ಕಲಾವಿದರು, ಅಭಿಮಾನಿ ಬಳಗದವರು ಮತ್ತು ಪ್ರಭಾವಿ/ರಾಜಕೀಯ ವ್ಯಕ್ತಿಗಳು ಆಗಮಿಸಬಾರದು.
  4. ದರ್ಶನ್ ಅವರನ್ನು ಬಂಧಿಯಂತೆ ಪರಿಗಣಿಸಿ ಸಾಮಾನ್ಯ ಬಂಧಿಗೆ ಕಲ್ಪಿಸತಕ್ಕಂತಹ ಸೌಲಭ್ಯಗಳನ್ನು ಮಾತ್ರ ಕೊಡುವುದು. ಯಾವುದೇ ವಿಶೇಷ ಆತಿಥ್ಯ ನೀಡತಕ್ಕದ್ದಲ್ಲ.
  5. ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರತಿನಿತ್ಯ ಮುಂಜಾಗ್ರತಾ ಕ್ರಮವಾಗಿ ಶೇಖರಣೆ ಮಾಡಿ ಪ್ರತ್ಯೇಕವಾಗಿ ಇಟ್ಟುಕೊಳ್ಳಲು ನಿರ್ಧರಿಸಲಾಗಿದೆ.
  6. ಕರ್ತವ್ಯಕ್ಕೆ ಮುಖ್ಯ ವೀಕ್ಷಕ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ಅನುಭವವುಳ್ಳ ಸಿಬ್ಬಂದಿ ವರ್ಗದವರನ್ನು ನಿಯೋಜಿಸಲಾಗುತ್ತದೆ.
  7. ಜೈಲರ್ ಮತ್ತು ಹಿರಿಯ ಅಧಿಕಾರಿ ವರ್ಗದವರು ಪ್ರತಿನಿತ್ಯ ಭೇಟಿ ನೀಡಿ ಮೇಲ್ವಿಚಾರಣೆ ಮಾಡಬೇಕು.
  8. ನಿಷೇಧಿತ ವಸ್ತುಗಳು ಇಲ್ಲದಂತೆ ನೋಡಿಕೊಳ್ಳುವುದು.
  9. ಪಹರೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಬಾಡಿವೋರ್ನ ಕ್ಯಾಮರಾಗಳನ್ನು ಧರಿಸಬೇಕು. ಪ್ರತಿ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿಟ್ಟುಕೊಂಡು ಆ ದೃಶ್ಯಾವಳಿಗಳನ್ನು ಪ್ರತಿನಿತ್ಯ ಕಾರಾಗೃಹದ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಸಂಗ್ರಹಿಸಿಡುವುದು.
  10. ಉಪಹಾರ ಗೃಹ, ಮನರಂಜನೆ ಸೌಲಭ್ಯಗಳನ್ನು ಕಾರಾಗೃಹದ ನಿಯಮಾವಳಿಗಳಂತೆ ಮಾತ್ರ ಒದಗಿಸುವುದು. ಯಾವುದೇ ನಿಯಮಗಳ ಉಲ್ಲಂಘನೆಗೆ ಆಸ್ಪದ ನೀಡತಕ್ಕದ್ದಲ್ಲ.
  11. ದರ್ಶನ್ ಹಿರಿಯ ಅಧಿಕಾರಿಯವರ ಅನುಮತಿ ರಹಿತವಾಗಿ ತಮ್ಮ  ವಿಭಾಗದಿಂದ ನಿರ್ಗಮಿಸದಂತೆ ಮತ್ತು ಬೇರೆ ಬಂಧಿಗಳ ಜೊತೆಗೆ ಬೆರೆಯದಂತೆ ನಿಗಾವಹಿಸತಕ್ಕದ್ದು.
  12. ಯಾವುದೇ ನಿಷೇಧಿತ/ ಕಾನೂನುಬಾಹಿರ ವಸ್ತುಗಳು ನುಸುಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.
  13. ಬಂಧಿಯ ಸಂದರ್ಶನಕ್ಕೆ ಆಗಮಿಸುವ ಅರ್ಹ ವ್ಯಕ್ತಿಗಳನ್ನು ಸಂಪೂರ್ಣವಾಗಿ ತಪಾಸಣೆಯನ್ನು ಮಾಡತಕ್ಕದ್ದು. ಯಾವುದೇ ತರಹದ ನಿಷೇಧಿತ/ ಕಾನೂನುಬಾಹಿರ ವಸ್ತುಗಳು ನುಸುಳದಂತೆ ಕಟ್ಟುನಿಟ್ಟಿನ ಕ್ರಮ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.