‘ವಿಧಿ ಆರ್ಟಿಕಲ್ 370’ ಕನ್ನಡ ಸಿನಿಮಾ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ನಿರ್ದೇಶಕ ಹೇಳಿದ್ದೇನು?
ಕನ್ನಡದ ವಿಧಿ; ಆರ್ಟಿಕಲ್ 370 ಸಿನಿಮಾದ ವಿರುದ್ಧ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದು, ಸಿನಿಮಾವು ಸಾಮಾಜಿಕ ಶಾಂತಿ ಕದಡುವ ಅಂಶಗಳನ್ನು ಹೊಂದಿದೆ ಎಂದು ಆರೋಪಿಸಿದೆ.
ಕಳೆದ ಶುಕ್ರವಾರ (ಮಾರ್ಚ್ 24) ‘ವಿಧಿ: ಆರ್ಟಿಕಲ್ 370’ ಹೆಸರಿನ ಸಿನಿಮಾ ಬಿಡುಗಡೆ ಆಗಿದ್ದು, ಶಶಿಕುಮಾರ್, ಶೃತಿ, ದಿವಂಗತ ನಟ ಶಿವರಾಮ್ ಇನ್ನೂ ಕೆಲವರು ನಟಿಸಿರುವ ಈ ಸಿನಿಮಾದ ವಿರುದ್ಧ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿದ್ದು, ಸಿನಿಮಾದಲ್ಲಿನ ಕೆಲವು ದೃಶ್ಯಗಳನ್ನು ಕಿತ್ತು ಹಾಕಬೇಕೆಂದು ಒತ್ತಾಯಿಸಿದೆ.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದು ಮಾಡಿದ ವಿಷಯದ ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಧಾರ್ಮಿಕ ಅಶಾಂತಿ ಉಂಟು ಮಾಡುವ ಅಂಶಗಳಿವೆಯೆಂದು ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.
ಸಿನಿಮಾದ ವಿರುದ್ಧ ಮೂರು ದಿನಗಳ ಹಿಂದೆಯೇ ಎನ್ಎಸ್ಯುಐ ಸಂಘಟನೆ ಸದಸ್ಯರು ಫಿಲಂ ಚೇಂಬರ್ ಎದುರು ಪ್ರತಿಭಟನೆ ನಡೆಸಿದ್ದರು. ಇಂದು ಮತ್ತೆ ಪ್ರತಿಭಟನೆ ನಡೆಸಲಾಗಿದೆ. ಸಿನಿಮಾ ನೀಡುತ್ತಿರುವ ಸಂದೇಶದ ಕುರಿತಾಗಿ ತಕರಾರು ಎತ್ತಿರುವ ಸಂಘಟನೆ, ಈ ಸಿನಿಮಾದ ಹಲವು ದೃಶ್ಯಗಳು ಹಿಂದು-ಮುಸಲ್ಮಾನರ ನಡುವೆ ದ್ವೇಷ ಬಿತ್ತುವಂತೆ ಇವೆ ಎಂದಿದೆ.
ಸಂಘಟನೆ ನೀಡಿರುವ ಮನವಿ ಪತ್ರದಲ್ಲಿ ಹೇಳಿರುವಂತೆ, ಸಿನಿಮಾದಲ್ಲಿ ಕಾಶ್ಮೀರಿ ಪಂಡಿತನ ಹೆಂಡತಿಯ ಬಟ್ಟೆ ತೆಗೆಯಲು ಮುಂದಾಗುವ ವ್ಯಕ್ತಿಯನ್ನು ಉಗ್ರವಾದಿಯಂತಲ್ಲದೆ, ಮುಸ್ಲಿಂನಂತೆ ಚಿತ್ರಿಸಲಾಗಿದೆ ಹಾಗಾಗಿ ಆ ದೃಶ್ಯವನ್ನು ತೆಗೆಯಿರಿ. ಎಲ್ಲ ರಾಜ-ಮಹಾರಜರು ಸಾಮ್ರಾಜ್ಯಕ್ಕಾಗಿ ಯುದ್ಧಗಳನ್ನು ಮಾಡಿ ಪ್ರಾಣ ಅರ್ಪಿಸಿದ್ದಾರೆ ಆದರೆ ಅಕ್ಬರ್, ಖಿಲ್ಜಿ ಎಲ್ಲವನ್ನೂ ನಾಶ ಮಾಡಿದರು ಎಂದು ಸಂಭಾಷಣೆ ಹೇಳಿಸಿ ಎಲ್ಲ ಮುಸ್ಲಿಂ ರಾಜರಿಗೆ ಅಪಮಾನ ಉಂಟು ಮಾಡಿರುವುದು ಸರಿಯೇ ಎಂದು ವಿದ್ಯಾರ್ಥಿ ಸಂಘಟನೆ ಪ್ರಶ್ನಿಸಿದೆ.
1990 ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯವನ್ನು ಕರ್ನಾಟಕದಲ್ಲಿ ಈಗ ತೋರಿಸಿ ಇಲ್ಲಿನ ಮುಸ್ಲಿಂ-ಹಿಂದುಗಳ ನಡುವೆ ಜಗಳ ತಂದಿಡುತ್ತಿದ್ದೀರಿ ಏಕೆ? ಇದರಿಂದ ಏನು ಲಾಭ? ಇಲ್ಲಿ ಸಹೋದರರಂತೆ ಬದುಕಿ ಬಾಳುತ್ತಿರುವವರ ಮಧ್ಯೆ ಹಗೆತನ ತಂದಿಟ್ಟಂತಾಗುತ್ತದೆ. ಆದ್ದರಿಂದ ಸಿನಿಮಾದಲ್ಲಿ ಹಿಂದೂ ಪಂಡಿತರ ಮೇಲಾಗಿರುವ ದೌರ್ಜನ್ಯದ ಎಲ್ಲ ದೃಶ್ಯಗಳನ್ನು ಕತ್ತರಿಸಿ ತೆಗೆಯಬೇಕು ಎಂದು ಮನವಿ ಮಾಡಲಾಗಿದೆ.
ಎನ್ಎಸ್ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಮಾತನಾಡಿ, ಈ ಚಿತ್ರದಲ್ಲಿ ಇರುವ ದೃಶ್ಯಗಳು ಪ್ರಚೋದನಾಕಾರಿಯಾಗಿವೆ. ಸಿನಿಮಾದ ಹಿಂದೆ ರಾಜಕೀಯ ದುರುದ್ದೇಶವಿದೆ. ಇರುವ ಸತ್ಯ ತೋರಿಸಲಿ ಆದರೆ ಹಲವು ಸುಳ್ಳುಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದ ಹೆಸರಲ್ಲಿ ಒಂದು ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಪ್ರಚೋದನಕಾರಿಯಾಗಿರುವ ದೃಶ್ಯಗಳನ್ನು ತೆಗೆಯಬೇಕು. ಸಿನಿಮಾದಲ್ಲಿ ಅಮಿತ್ ಶಾ ಮಾತನಾಡಿರುವ ದೃಶ್ಯಗಳಿವೆ ಅವನ್ನೂ ತೆಗೆಯಬೇಕು ಎಂದಿದ್ದಾರೆ.
ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ವಿಧಿ ಆರ್ಟಿಕಲ್ 370 ಸಿನಿಮಾದ ನಿರ್ದೇಶಕ ಕೆ.ಶಂಕರ್, ನಾವು ತೆಗೆದಿರೋದೆ ಆರ್ಟಿಕಲ್ 370 ಕುರಿತಾದ ಸಿನಿಮಾ. ಸಿನಿಮಾದಲ್ಲಿ ಸಹಜವಾಗಿಯೇ ಅಮಿತ್ ಶಾ ಅವರ ದೃಶ್ಯಗಳು ಇವೆ. ಸಿನಿಮಾ ಬಿಡುಗಡೆಗೆ ಮುನ್ನ ಸೆನ್ಸಾರ್ ಮಂಡಳಿಗೆ ತೋರಿಸಿದ್ದೇವೆ. ಅವರ ಪ್ರಮಾಣ ಪತ್ರ ಪಡೆದೇ ನಾವು ಬಿಡುಗಡೆ ಮಾಡಿದ್ದೇವೆ ಎಂದಿದ್ದಾರೆ.