ಹುಟ್ಟುಹಬ್ಬದ ದಿನ ರಾಯರ ಸಾನಿಧ್ಯದಲ್ಲಿ ನಿಂತು ಜನರ ಬಳಿ ಕ್ಷಮೆ ಕೇಳಿದ ಜಗ್ಗೇಶ್
Jaggesh: ಇಂದು (ಮಾರ್ಚ್ 17) ಜಗ್ಗೇಶ್ ಹುಟ್ಟುಹಬ್ಬ. ಮಂತ್ರಾಯಲಯಕ್ಕೆ ತೆರಳಿರುವ ಜಗ್ಗೇಶ್, ರಾಯರ ಸನ್ನಿಧಿಯಲ್ಲಿ ನಿಂತು ಫೇಸ್ಬುಕ್ ಲೈವ್ ಮಾಡಿ ಎರಡು ವಿಷಯಗಳಿಗೆ ಜನರ ಬಳಿ ಕ್ಷಮೆ ಕೇಳಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಹುಟ್ಟುಹಬ್ಬ ಇಂದು, ಅದರ ಜೊತೆಗೆ ಮತ್ತೊಬ್ಬ ಜನಪ್ರಿಯ ನಟ ಜಗ್ಗೇಶ್ ಅವರ ಹುಟ್ಟುಹಬ್ಬವೂ ಸಹ ಇದೇ ದಿನ. ಜಗ್ಗೇಶ್ ಹಾಗೂ ಅಪ್ಪು ಪರಸ್ಪರ ಆತ್ಮೀಯರಾಗಿದ್ದವರು. ಅಪ್ಪು ಅಗಲಿದ ಬಳಿಕ ಜಗ್ಗೇಶ್, ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಾರಿ ಹುಟ್ಟುಹಬ್ಬಕ್ಕೆ ತಮ್ಮ ಮೆಚ್ಚಿನ ದೈವ ರಾಯರ ಬಳಿ ತೆರಳಿದ್ದಾರೆ. ಮಂತ್ರಾಲಯದಲ್ಲಿ ರಾಯರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದಲೂ ಮಂತ್ರಾಲಯದಲ್ಲಿರುವ ಜಗ್ಗೇಶ್ ಇಂದು ಅಲ್ಲಿಂದಲೇ ಫೇಸ್ಬುಕ್ ಲೈವ್ ಬಂದಿದ್ದರು. ಅಭಿಮಾನಿಗಳೊಡನೆ ಹಲವು ವಿಷಯಗಳನ್ನು ಮಾತನಾಡಿದರು. ಕೊನೆಗೆ ಕ್ಷಮೆ ಸಹ ಕೇಳಿದರು.
ಲೈವ್ನ ಆರಂಭದಲ್ಲಿ ತಮಗೂ ಮಂತ್ರಾಲಯ ರಾಯರಿಗೂ ಇರುವ ನಂಟಿನ ಬಗ್ಗೆ ಮಾತನಾಡಿದರು. ರಾಯರೇ ತಮ್ಮನ್ನು ಇಷ್ಟು ವರ್ಷ ಕೈಹಿಡಿದು ನಡೆಸಿದ್ದಾರೆ ಎಂದರು. ಬಳಿಕ ಮುಖ್ಯ ವಿಷಯಕ್ಕೆ ಬಂದ ಜಗ್ಗೇಶ್, ‘ನಾನು ನೇರ ನುಡಿಯ ಮನುಷ್ಯ, ಹಳ್ಳಿಯ ಸೊಗಡಿನವನು, ನನ್ನ ಮಾತು ತುಸು ಹಳ್ಳಿಸೊಗಡಿನಿಂದ ಕೂಡಿದ ಮಾತುಗಳು, ಯಾರಿಗೂ ಕೆಟ್ಟದನ್ನು ಬಯಸುವವನಲ್ಲ. ಮೈಕ್ ಹಿಡಿದ ಭರದಲ್ಲಿ ಆಡಿದ ಮಾತುಗಳಿಗೆ ಯಾರಿಗಾದರೂ ಬೇಜಾರಾಗಿದ್ದರೆ ಕ್ಷಮಿಸಿಬಿಡಿ. ನಿಮ್ಮ ತಂದೆಯ ವಯಸ್ಸಿನವನು ಹಾಗೆಯೇ ಎಂದುಕೊಂಡು ಕ್ಷಮಿಸಿಬಿಡಿ ಎಂದು ಮನವಿ ಮಾಡಿದ್ದಾರೆ. ‘ರಂಗನಾಯಕ’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ, ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆ ಜಗ್ಗೇಶ್ ನಿಂದಿಸಿ ಮಾತನಾಡಿದ್ದರು. ಅದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಅದೇ ಕಾರಣಕ್ಕೆ ಜಗ್ಗೇಶ್ ಈ ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ:ಜಗ್ಗೇಶ್ ಜನ್ಮದಿನ: ಇವರ ಲವ್ಸ್ಟೋರಿ ತುಂಬಾನೇ ಡಿಫರೆಂಟ್; ಕೋರ್ಟ್ನಿಂದ ಸಿಕ್ಕಿತ್ತು ಸಮ್ಮತಿ
ಮುಂದುವರೆದು ಇನ್ನೊಂದು ವಿಷಯಕ್ಕೂ ಕ್ಷಮೆ ಕೇಳಿದರು ಜಗ್ಗೇಶ್. ಕತೆಯೊಂದರ ಮೂಲಕ ಮಾತು ಶುರು ಮಾಡಿದ ಜಗ್ಗೇಶ್, ಇತ್ತೀಚೆಗೆ ಒಂದು ಸಿನಿಮಾ ಮಾಡಿದ್ದೆ. ಆ ಸಿನಿಮಾ ನೋಡಿದ ಹಲವರು ನನ್ನ ಮೇಲೆ ಬೇಸರ ಮಾಡಿಕೊಂಡಿದ್ದಾರೆ’ ಎಂದರು ನೆಟ್ವರ್ಕ್ ಸಮಸ್ಯೆ ಇದ್ದ ಕಾರಣ ಜಗ್ಗೇಶ್ ಮಾತುಗಳು ಸರಿಯಾಗಿ ಕೇಳುತ್ತಿರಲಿಲ್ಲ. ಅದರ ನಡುವೆಯೂ ಮಾತನಾಡಿದ ಜಗ್ಗೇಶ್, ‘ಅದು ನನ್ನ ಸಿನಿಮಾ ಅಲ್ಲ, ನಿರ್ದೇಶಕನನ್ನು ನಂಬಿಕೆ ಕೆಲಸ ಕೊಟ್ಟೆ. ಆ ನಿರ್ದೇಶಕ ತನ್ನ ಆಸೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಿದ್ದಾನೆ. ಆ ಸಿನಿಮಾದಿಂದ ಅಕಸ್ಮಾತ್ ಬೇಸರವಾಗಿದ್ದರೆ ಕ್ಷಮೆ ಇರಲಿ. ನಾನು ‘ಪ್ರೀಮಿಯರ್ ಪದ್ಮಿನಿ’ ಎಂಬ ಒಳ್ಳೆಯ ಸಿನಿಮಾ ಕೊಟ್ಟಿದ್ದೀನಿ, ‘8 ಎಂಎಂ’, ’ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಕೊಟ್ಟಿದ್ದೀನಿ. ಈ ಒಂದು ಸಿನಿಮಾದಿಂದ ದೂರಾಗುವುದು ಬೇಡ. ವೃತ್ತಿಯಲ್ಲಿ ಲೋಪದೋಷಗಳಾಗಿದ್ದರೆ ಕ್ಷಮೆ ಇರಲಿ. ರಾಯರ ಸನ್ನಿಧಿಯಲ್ಲಿ ನಿಂತು ಈ ಕುರಿತು ಮಾತನಾಡಬೇಕು, ಮನಸ್ಸಿನಲ್ಲಿ ಇದ್ದ ವಿಷಯಗಳನ್ನು ಹೇಳಿ ಬಿಡಬೇಕು ಅಂದುಕೊಂಡಿದ್ದೆ, ಅದನ್ನೇ ಹೇಳಿದ್ದೇನೆ’ ಎಂದಿದ್ದಾರೆ ಜಗ್ಗೇಶ್.
ಗುರು ಪ್ರಸಾದ್ ನಿರ್ದೇಶನದ ‘ರಂಗನಾಯಕ’ ಸಿನಿಮಾದಲ್ಲಿ ಜಗ್ಗೇಶ್ ನಟಿಸಿದ್ದರು. ಸಿನಿಮಾ ನೋಡಿದ ಮಂದಿ, ಜಗ್ಗೇಶ್ ವೃತ್ತಿ ಜೀವನದ ಅತ್ಯಂತ ಕೆಟ್ಟ ಸಿನಿಮಾ ‘ರಂಗನಾಯಕ’ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಗುರು ಪ್ರಸಾದ್, ತಮಗೆ ತೋಚಿದಂತೆಲ್ಲ ಸಿನಿಮಾ ಮಾಡಿದ್ದಾರೆ. ತೆರೆ ಮೇಲೆ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಸಿನಿಮಾವನ್ನು ಹಾಳುಗೆಡವಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಬೇಸರಗೊಂಡಿರುವ ಜಗ್ಗೇಶ್, ಇದೀಗ ‘ರಂಗನಾಯಕ’ ಸಿನಿಮಾ ಮಾಡಿದ ಬಗ್ಗೆ ಕ್ಷಮೆ ಕೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ