AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF 2: ಇತಿಹಾಸ ಸೃಷ್ಟಿಸಿದ ಕೆಜಿಎಫ್ 2 ಸಿನಿಮಾಕ್ಕೆ ಒಂದು ವರ್ಷ, ಕಲೆಕ್ಷನ್ ಮಾತ್ರ ದಾಖಲೆಯಲ್ಲ

KGF 2: ಕೆಜಿಎಫ್ 2 ಸಿನಿಮಾ ಬಿಡುಗಡೆ ಆಗಿ ಇಂದಿಗೆ ಒಂದು ವರ್ಷ. ಈ ಸಿನಿಮಾ ಕಲೆಕ್ಷನ್​ನಲ್ಲಿ ಮಾತ್ರ ದಾಖಲೆ ಬರೆಯಲಿಲ್ಲ. ಸಿನಿಮಾದ ಸಾಧನೆಗಳು ಸಾಮಾನ್ಯವಾದುವಲ್ಲ.

KGF 2: ಇತಿಹಾಸ ಸೃಷ್ಟಿಸಿದ ಕೆಜಿಎಫ್ 2 ಸಿನಿಮಾಕ್ಕೆ ಒಂದು ವರ್ಷ, ಕಲೆಕ್ಷನ್ ಮಾತ್ರ ದಾಖಲೆಯಲ್ಲ
ಕೆಜಿಎಫ್ 2
ಮಂಜುನಾಥ ಸಿ.
|

Updated on: Apr 14, 2023 | 8:00 AM

Share

ಭಾರತ ಚಿತ್ರರಂಗ (Indian Movie Industry), ಕನ್ನಡ ಸಿನಿಮಾಗಳೆಂದರೆ ಅಲಕ್ಷ್ಯ ತೋರುತ್ತಿದ್ದ ಸಮಯದಲ್ಲಿ ಬಂದ ಕೆಜಿಎಫ್; ಚಾಪ್ಟರ್ 1 (KGF; Chapter 1) ಕನ್ನಡ ಸಿನಿಮಾರಂಗದ ಶಕ್ತಿಯನ್ನು ಸಾಬೀತು ಪಡಿಸಿತು. ಆ ಸಿನಿಮಾ ಬಿಡುಗಡೆ ಆಗಿ ನಾಲ್ಕು ವರ್ಷಗಳ ಬಳಿಕ ಬಿಡುಗಡೆ ಆದ ಕೆಜಿಎಫ್ 2 ಸಿನಿಮಾ ಇಡೀಯ ಭಾರತ ಚಿತ್ರರಂಗವನ್ನೇ ಅವಕ್ಕಾಗಿಬಿಡುವಂತೆ ಮಾಡಿಬಿ ಇತಿಹಾಸ ಸೃಷ್ಟಿಸಿಬಿಟ್ಟಿತು. ಕನ್ನಡ ಸಿನಿಮಾರಂಗಕ್ಕೆ ಹೊಸ ಭಾಷ್ಯ ಬರೆದ ಕೆಜಿಎಫ್ 2 (KGF 2) ಸಿನಿಮಾ ಬಿಡುಗಡೆ ಆಗಿ ಇಂದಿಗೆ ಒಂದು ವರ್ಷ. 2022, ಏಪ್ರಿಲ್ 14 ರಂದು ಕೆಜಿಎಫ್ 2 ಸಿನಿಮಾ ಬಿಡುಗಡೆ ಆಯಿತು. ಆ ಮೇಲೆ ನಡೆದಿದ್ದೆಲ್ಲವೂ ಇತಿಹಾಸವೇ.

ಕೆಜಿಎಫ್: ಚಾಪ್ಟರ್ 1 ನೋಡಿ ಥ್ರಿಲ್ ಆಗಿದ್ದ ಅಭಿಮಾನಿಗಳಿಗೆ ಅದಕ್ಕಿಂತಲೂ ಅದ್ಭುತವಾದ ಅನುಭವವನ್ನು ಕೆಜಿಎಫ್ 2 ಸಿನಿಮಾ ನೀಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ಅದ್ಧೂರಿಯಾಗಿ ಬಿಡುಗಡೆ ಆದ ಈ ಸಿನಿಮಾ ಕನ್ನಡಿಗರನ್ನು ಮಾತ್ರವೇ ಅಲ್ಲದೆ ಬಿಡುಗಡೆ ಆದ ಭಾಷೆಗಳಲ್ಲೆಲ್ಲ ಸೂಪರ್ ಡೂಪರ್ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ ಕಲ್ಟ್ ಆಗುವ ಮಟ್ಟಕ್ಕೆ ಜನಾಧರ ಪಡೆದುಕೊಂಡಿತು.

ಸಿನಿಮಾ ಮಾಡಿದ ಕಲೆಕ್ಷನ್ ಅಂತೂ ಸ್ವತಃ ಸಿನಿಮಾದ ನಿರ್ಮಾಪಕರು, ಯಶ್ ಸಹ ಊಹಿಸಿರಲಿಲ್ಲ. ಕೆಜಿಎಫ್: ಚಾಪ್ಟರ್ 1, 250 ಕೋಟಿ ಕಲೆಕ್ಷನ್ ಮಾಡಿದ್ದೆ ಅತ್ಯದ್ಭುತ ಎನ್ನಲಾಗುತ್ತಿದ್ದ ಸಮಯದಲ್ಲಿ ಕೆಜಿಎಫ್ 2 ಸಿನಿಮಾ ವಿಶ್ವದಾದ್ಯಂತ 1250 ಕೋಟಿ ಕಲೆಕ್ಷನ್ ಮಾಡಿ ಬಾಲಿವುಡ್ ಸಿನಿಮಾದ ದಾಖಲೆಗಳನ್ನು ಮುರಿದು ಮೂಲೆಗುಂಪು ಮಾಡಿತು. ಸಿನಿಮಾ ಮಾಂತ್ರಿಕ ರಾಜಮೌಳಿಯ ಆರ್​ಆರ್​ಆರ್ ಸಿನಿಮಾ ಕೂಡ 900 ಕೋಟಿ ಗಳಿಸಿ ಸುಸ್ತಾಗಿದ್ದಾಗ 1250 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿತು ಕೆಜಿಎಫ್ 2.

ಕೇವಲ ಕಲೆಕ್ಷನ್ ಮಾತ್ರವೇ ಕೆಜಿಎಫ್ 2 ಸಿನಿಮಾ ಮಾಡಿದ ಸಾಧನೆಯಲ್ಲ, ಅದನ್ನೂ ಮೀರಿಸಿದ ಸಾಧನೆಗಳನ್ನು ಮಾಡಿದೆ ಈ ಸಿನಿಮಾ. ಕನ್ನಡ ಚಿತ್ರರಂಗದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದವರಿಗೆ ಕಪಾಳಕ್ಕೆ ಭಾರಿಸಿ ಮತ್ತೆ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿತು ಈ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಬಹು ದಶಕದಿಂದ ಸಲ್ಲಬೇಕಿದ್ದ ಗೌರವಾಧರಗಳು ಸಿಗುವಂತೆ ಮಾಡಿದ್ದು ಈ ಸಿನಿಮಾದ ಅತಿ ದೊಡ್ಡ ಸಾಧನೆ. ಜೊತೆಗೆ ಕನ್ನಡದ ಕಲಾವಿದರಿಗೆ ಪರಭಾಷೆಗಳಲ್ಲಿ ಇನ್ನೂ ಹೆಚ್ಚಿನ ಗೌರವ ಸಿಗುವಂತೆ ಮಾಡಿದ ಸಿನಿಮಾ ಕೆಜಿಎಫ್ 2.

‘ನಮ್ಮದು ಚಿಕ್ಕ ಮಾರುಕಟ್ಟೆ, ಪರರಾಜ್ಯಗಳಲ್ಲಿ ನಮ್ಮ ಸಿನಿಮಾಗಳಿಗೆ ಬೇಡಿಕೆ ಇಲ್ಲ’ ಎಂಬ ಸಂಕುಚಿತ ಮನಸ್ಥಿತಿಯಲ್ಲಿದ್ದ ಕನ್ನಡ ಚಿತ್ರರಂಗದವರಿಗೆ, ಇಲ್ಲ ಒಳ್ಳೆಯ ಕಂಟೆಂಟ್ ಕೊಟ್ಟರೆ ಎಲ್ಲೆಡೆಯೂ ಸಿನಿಮಾವನ್ನು ಸ್ವೀಕರಿಸುತ್ತಾರೆ. ನಮ್ಮ ಸಿನಿಮಾಗಳನ್ನು ಮುಗಿಬಿದ್ದು ಜನ ನೋಡುತ್ತಾರೆ, ದೊಡ್ಡದಾಗಿ ಯೋಚಿಸಿ, ದೊಡ್ಡದಾಗಿ ಯೋಜಿಸಿ ಎಂದು ಹುರಿದುಂಬಿಸಿದ ಸಿನಿಮಾ ಕೆಜಿಎಫ್ 2. ಇದು ಸಾಮಾನ್ಯ ಸಾಧನೆಯಲ್ಲ.

ಕೇವಲ ನಾಲ್ಕು ಹಾಡು, ಫೈಟ್, ಐಟಂ ಸಾಂಗ್, ಉದ್ದುದ್ದ ಡೈಲಾಗ್​ಗಳ ಸೂತ್ರ ಹಾಕಿಕೊಂಡು ಅದರನ್ವಯವೇ ಸಿನಿಮಾ ಮಾಡುತ್ತಿದ್ದವರಿಗೆ, ಸಿನಿಮಾಕ್ಕೆ ತಾಂತ್ರಿಕ ಅಂಶಗಳು ಎಷ್ಟು ಅವಶ್ಯಕ ಎಂದು ಮನದಟ್ಟು ಮಾಡಿಸಿ, ಸಿದ್ಧ ಸೂತ್ರದಿಂದ ಹೊರಗೆ ಬಂದು ಸಿನಿಮಾ ಮಾಡುವಂತೆ ಅದರಲ್ಲಿಯೂ ತಾಂತ್ರಿಕ ಅಂಶಗಳ ಬಗ್ಗೆ ಅತಿ ಹೆಚ್ಚು ಗಮನ ಕೊಡುವಂತೆ ಹೇಳಿಕೊಟ್ಟಿದ್ದು ಕೆಜಿಎಫ್ 2 ಸಿನಿಮಾ.

ಒಂದು ಸಿನಿಮಾಕ್ಕೆ ಎಷ್ಟರ ಮಟ್ಟಿಗೆ ತೊಡಗಿಕೊಳ್ಳಬೇಕು, ಎಷ್ಟು ಶ್ರದ್ಧೆವಹಿಸಬೇಕು, ವರ್ಷಗಟ್ಟೆ ಶ್ರಮಪಟ್ಟು ಅದ್ಭುತವಾದ ಪ್ರಾಡೆಕ್ಟ್ ಅನ್ನು ಹೇಗೆ ಹೊರತೆಗೆಯಬೇಕು ಎಂಬುದನ್ನು ತೋರಿಸಿಕೊಟ್ಟಿದ್ದು ಸಹ ಕೆಜಿಎಫ್ 2. ಮಾತ್ರವೇ ಅಲ್ಲದೆ ಸಿನಿಮಾ ಒಂದಕ್ಕೆ ಪ್ರೋಮೋಷನ್ ಎಷ್ಟು ಅವಶ್ಯಕ, ಪ್ರಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆಗಳನ್ನು ಹೇಳಿಕೊಟ್ಟಿದ್ದು ಕೆಜಿಎಫ್ 2. ಈ ಸಿನಿಮಾದ ಸಾಧನೆಗಳನ್ನು ಎಣಿಸುತ್ತಾ ಹೋದರೆ ನೂರುಗಳು ದಾಟುತ್ತವೆ. ಏನೇ ಆಗಲಿ ಕನ್ನಡಿಗರ ಹೆಮ್ಮೆಯ ಸಿನಿಮಾ ಕೆಜಿಎಫ್ 2 ಬಿಡುಗಡೆ ಆಗಿ ಒಂದು ವರ್ಷವಾಗಿದ್ದು, ಕನ್ನಡ ಚಿತ್ರರಂಗದ ಜೈತಯಾತ್ರೆ ಹೀಗೆಯೇ ಮುಂದುವರೆಯಬೇಕೆಂಬುದು ಕನ್ನಡ ಸಿನಿಪ್ರೇಮಿಗಳ ಆಶಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ