ಹಿರಿಯ ಕಲಾವಿದರಿಗೆ ಅವಕಾಶ ನೀಡಿ ‘ಅತ್ಯುತ್ತಮ’ ಎನಿಸಿಕೊಂಡ ಕನ್ನಡ ಸಿನಿಮಾ ಈ ವಾರ ತೆರೆಗೆ

| Updated By: ಮದನ್​ ಕುಮಾರ್​

Updated on: May 13, 2022 | 7:30 AM

‘ಅತ್ಯುತ್ತಮ’ ಸಿನಿಮಾದಲ್ಲಿ ಶಿವಕುಮಾರ್​ ಜೇವರಗಿ ಜೊತೆ ಪದ್ಮವಾಸಂತಿ, ಎಂ.ಎಸ್​. ಉಮೇಶ್​, ಮೈಸೂರು ರಮಾನಂದ್​ ಸೇರಿದಂತೆ ಅನೇಕ ಹಿರಿಯ ಕಲಾವಿದರು ನಟಿಸಿದ್ದಾರೆ.

ಹಿರಿಯ ಕಲಾವಿದರಿಗೆ ಅವಕಾಶ ನೀಡಿ ‘ಅತ್ಯುತ್ತಮ’ ಎನಿಸಿಕೊಂಡ ಕನ್ನಡ ಸಿನಿಮಾ ಈ ವಾರ ತೆರೆಗೆ
‘ಅತ್ಯುತ್ತಮ’ ಸಿನಿಮಾ ತಂಡ
Follow us on

ಚಿತ್ರರಂಗದಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಗಾಂಧಿನಗರ ಮತ್ತೆ ಹಳೇ ಚಾರ್ಮ್​ ಪಡೆದುಕೊಂಡಿದೆ. ಪ್ರತಿ ವಾರ ಹಲವು ಸಿನಿಮಾಗಳು (Kannada Cinema) ಬಿಡುಗಡೆ ಆಗುತ್ತಿವೆ. ಕೊವಿಡ್​ ಕಾರಣದಿಂದ ರಿಲೀಸ್​ ದಿನಾಂಕ ಮುಂದೂಡಿಕೊಂಡಿದ್ದ ಅನೇಕ ಚಿತ್ರಗಳು ಈಗ ಥಿಯೇಟರ್​ ಬಾಗಿಲಿಗೆ ಬರುತ್ತಿವೆ. ಈಗೇನೋ ಎಲ್ಲವೂ ಸರಿಯಾಗಿದೆ. ಆದರೆ ಕೊರೊನಾ ವೈರಸ್​ ಹಾವಳಿ ಜೋರಾದಾಗ ಕನ್ನಡ ಚಿತ್ರರಂಗದ (Kannada Film Industry) ಪರಿಸ್ಥಿತಿ ಹದಗೆಟ್ಟಿತ್ತು. ನಟನೆಯನ್ನೇ ನಂಬಿಕೊಂಡಿದ್ದ ಅನೇಕ ಹಿರಿಯ ಕಲಾವಿದರು ಸಮಸ್ಯೆಗೆ ಸಿಲುಕಿದ್ದರು. ನಂತರದ ದಿನಗಳಲ್ಲಿ ಅವರ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುವುದು ಕಷ್ಟವಾಗಿತ್ತು. ಹಿರಿಯ ನಟ-ನಟಿಯರಿಗೆ ಅವಕಾಶ ನೀಡಲು ಕೆಲವು ನಿರ್ಮಾಪಕ-ನಿರ್ದೇಶಕರು ಹಿಂದೇಟು ಹಾಕುತ್ತಾರೆ. ಆದರೆ ‘ಅತ್ಯುತ್ತಮ’ ಕನ್ನಡ ಸಿನಿಮಾದಲ್ಲಿ ಹಳೆಯ ಕಲಾವಿದರಿಗೆ ನಿರ್ದೇಶಕ ಕಮ್​ ನಾಯಕ ನಟ ಶಿವಕುಮಾರ್​ ಬಿ. ಜೇವರಗಿ ಅವಕಾಶ ನೀಡಿದ್ದಾರೆ. ಆ ಕಾರಣದಿಂದ ಇದು ನಿಜವಾಗಿಯೂ ‘ಅತ್ಯುತ್ತಮ’ ಸಿನಿಮಾ ಎಂದಿದ್ದಾರೆ ಹಿರಿಯ ಕಲಾವಿದರು. ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಹೊಂದಿರುವ ಎಂ.ಎಸ್​. ಉಮೇಶ್​ (MS Umesh) ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೈಸೂರು ರಮಾನಂದ್​ ಅವರು ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾ ಇಂದು (ಮೇ 13) ಬಿಡುಗಡೆ ಆಗುತ್ತಿದೆ.

‘ಅತ್ಯುತ್ತಮ’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಶಿವಕುಮಾರ್​ ಬಿ. ಜೇವರಗಿ ಅವರು ಹೀರೋ ಆಗಿಯೂ ನಟಿಸಿದ್ದಾರೆ. ಅವರ ಜೊತೆ ಅನುಭವಿ ಕಲಾವಿದರಾದ ಪದ್ಮವಾಸಂತಿ, ಜೈ ಜಗದೀಶ್​, ಸುಚೇಂದ್ರ ಪ್ರಸಾದ್, ಗೀತಾ ಅಡಿಗ​ ಮುಂತಾದವರು ಕೂಡ ಬಣ್ಣ ಹಚ್ಚಿದ್ದಾರೆ. ಸಂಸಾರದ ಸಾಮರಸ್ಯದ ಬಗ್ಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಆಶಯದಿಂದ ತಯಾರಾದ ‘ಅತ್ಯುತ್ತಮ’ ಚಿತ್ರಕ್ಕೆ ಸುನಿತಾ ಎಸ್​. ಜೇವರಗಿ ಬಂಡವಾಳ ಹೂಡಿದ್ದಾರೆ.

‘ನಮ್ಮ ನಮ್ಮ ಮನೆಗಳಲ್ಲಿ ನಡೆಯುವ ಜಗಳಗಳಿಂದಾಗಿ ಎಳೆ ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಜಾಣತನ. ಅದನ್ನು ಸರಿಯಾಗಿ ಸಾಧಿಸಿದವವೇ ಅತ್ಯುತ್ತಮರು’ ಎಂಬ ಡೈಲಾಗ್​ ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಅದೇ ಥೀಮ್​ನಲ್ಲಿ ಇಡೀ ಸಿನಿಮಾ ಮೂಡಿಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾಗೆ ದಿನೇಶ್​ ಕುಮಾರ್​ ಸಂಗೀತ ನೀಡಿದ್ದಾರೆ. ರವಿ ಸಂಕಲನ, ಸಿ. ನಾರಾಯಣ್​ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇದನ್ನೂ ಓದಿ
ರಿಲೀಸ್​ ದಿನಾಂಕ ಲಾಕ್​ ಮಾಡಿದ ‘ತ್ರಿವಿಕ್ರಮ’; ಜೂ.24ಕ್ಕೆ ಬರಲಿದೆ ವಿಕ್ರಮ್​ ರವಿಚಂದ್ರನ್​ ಸಿನಿಮಾ
ಸೀರಿಯಲ್​, ಸಿನಿಮಾ ಬಳಿಕ ಶ್ರೀಮಹದೇವ್ ಇನ್ನೊಂದು ಪ್ರಯತ್ನ; ಹೊಸಬರ ಜತೆ ‘Saturday ನೈಟಲಿ’​ ಸಾಂಗ್​
ಹಿಂದಿಯಲ್ಲಿ ‘777 ಚಾರ್ಲಿ’ ಚಿತ್ರಕ್ಕೆ ಸಿಕ್ತು ದೊಡ್ಡ ಬೆಂಬಲ; ರಕ್ಷಿತ್ ಫ್ಯಾನ್ಸ್​ಗೆ ಗುಡ್​ ನ್ಯೂಸ್
Bairagee Song: ಹೊಸ ಅವತಾರದಲ್ಲಿ ಶಿವಣ್ಣ; ಅಭಿಮಾನಿಗಳ ಮನಗೆದ್ದ ಬೈರಾಗಿ ಚಿತ್ರದ ‘ನಕರನಖ’

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮೈಸೂರು ರಮಾನಂದ್​ ಮಾತನಾಡಿದರು. ‘ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎನ್ನುವ ಮಾತಿನಂತೆ ನಮ್ಮಂಥ ಹಳೇ ಕಲಾವಿದರಿಗೆ ನಿರ್ದೇಶಕರು ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಸೂಕ್ತವಾದ ಸಂಭಾವನೆ ನೀಡಿದ್ದಾರೆ. ಶೂಟಿಂಗ್​ ಸಮಯದಲ್ಲಿ ಎಲ್ಲ ಅನುಕೂಲವನ್ನೂ ಮಾಡಿಕೊಟ್ಟಿದ್ದರು. ಆ ವಿಚಾರದಲ್ಲಿ ಹೆಸರಿಗೆ ತಕ್ಕಂತೆಯೇ ಈ ಚಿತ್ರತಂಡ ಅತ್ಯುತ್ತಮ ಆಗಿದೆ. ಈ ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಸಂದೇಶ ಇದೆ’ ಎಂದರು ಮೈಸೂರು ರಮಾನಂದ್.

ಈ ಚಿತ್ರದಲ್ಲಿ ನಟಿಸಿದ್ದು ಪದ್ಮವಾಸಂತಿ ಅವರಿಗೆ ಖುಷಿ ನೀಡಿದೆ. ‘ನಾನು ಜೈಗದೀಶ್​ ಅವರ ಜೊತೆ ತೆರೆ ಹಂಚಿಕೊಂಡಿದ್ದೇನೆ. ಎಲ್ಲ ಹಳೇ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಹೆಚ್ಚು ಖುಷಿ ಆಯಿತು. ಕೊವಿಡ್​ ನಂತರ ಇಷ್ಟು ಜನ ಕಲಾವಿದರಿಗೆ ಕೆಲಸ ಕೊಟ್ಟಿದ್ದಕ್ಕೆ ನಿರ್ದೇಶಕ ಶಿವಕುಮಾರ್​ ಜೇವರಗಿ ಅವರಿಗೆ ಧನ್ಯವಾದಗಳು. ಕುಟುಂಬದ ಎಲ್ಲ ಸದಸ್ಯರಿಗೆ ಈ ಸಿನಿಮಾದಲ್ಲಿ ಒಳ್ಳೆಯ ಮೆಸೇಜ್​ ಇದೆ’ ಎಂದಿದ್ದಾರೆ ನಟಿ ಪದ್ಮವಾಸಂತಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.