ರಿಲೀಸ್ ದಿನಾಂಕ ಲಾಕ್ ಮಾಡಿದ ‘ತ್ರಿವಿಕ್ರಮ’; ಜೂ.24ಕ್ಕೆ ಬರಲಿದೆ ವಿಕ್ರಮ್ ರವಿಚಂದ್ರನ್ ಸಿನಿಮಾ
Vikram Ravichandran: ‘ತ್ರಿವಿಕ್ರಮ’ ಚಿತ್ರದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೂ. 24ರಂದು ಈ ಸಿನಿಮಾ ರಿಲೀಸ್ ಆಗಲಿದೆ.
‘ಕ್ರೇಜಿ ಸ್ಟಾರ್’ ರವಿಚಂದ್ರನ್ (Crazy Star Ravichandran) ಅವರ ಮಕ್ಕಳು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಮೊದಲ ಪುತ್ರ ಮನುರಂಜನ್ ರವಿಚಂದ್ರನ್ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಕೂಡ ಈಗ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಅವರು ನಟಿಸಿರುವ ಮೊದಲ ಸಿನಿಮಾ ‘ತ್ರಿವಿಕ್ರಮ’ ಬಿಡುಗಡೆಗೆ ಸಜ್ಜಾಗಿದೆ. ಹಲವು ಕಾರಣಗಳಿಂದಾಗಿ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಜೂನ್ 24ರಂದು ‘ತ್ರಿವಿಕ್ರಮ’ (Trivikrama Movie) ಬಿಡುಗಡೆ ಆಗಲಿದೆ. ಆ ಪ್ರಯುಕ್ತ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರಿಲೀಸ್ ದಿನಾಂಕ ಅನೌನ್ಸ್ ಮಾಡಲು ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಲಾಯಿತು. ಅದರಲ್ಲಿ ಕನ್ನಡ ಚಿತ್ರರಂಗದ ಅನೇಕರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಿನಿಮಾದಲ್ಲಿ ವಿಕ್ರಮ್ ರವಿಚಂದ್ರನ್ ಅವರಿಗೆ ಜೋಡಿಯಾಗಿ ಆಕಾಂಕ್ಷಾ ಶರ್ಮಾ ನಟಿಸಿದ್ದಾರೆ. ವಿಕ್ರಮ್ ಅವರ ಗೆಟಪ್ ಗಮನ ಸೆಳೆಯುತ್ತಿದೆ. ಸಹನಮೂರ್ತಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸೊಮಣ್ಣ ನಿರ್ಮಾಣ ಮಾಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ಅವರ ಕುಟುಂಬ ನೀಡಿದ ಕೊಡುಗೆ ದೊಡ್ಡದು. ಹಾಗಾಗಿ ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಚಿತ್ರಕ್ಕೆ ಚಂದನವನದ ಹಲವು ಕಲಾವಿದರು ಮತ್ತು ತಂತ್ರಜ್ಞರು ಶುಭ ಕೋರಿದ್ದಾರೆ. ಚಿತ್ರತಂಡ ಆಯೋಜಿಸಿದ್ದ ಸುದ್ದಿಗೋಷ್ಠಿಗೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದರು. ಕಲಾವಿದರಾದ ಶರಣ್, ಸಾಧುಕೋಕಿಲ, ತಾರಾ, ಆದಿ ಲೋಕೇಶ್, ನಿರ್ದೇಶಕರಾದ ಚೇತನ್ ಕುಮಾರ್, ಸಂತೋಷ್ ಆನಂದ್ ರಾಮ್, ಶಿವಮಣಿ ಮುಂತಾದವರು ಸೇರಿ ಈ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಮಾಡಿದರು.
ನಿರ್ದೇಶಕ ಸಹನಾಮೂರ್ತಿ ಸಿದ್ಧ ಮಾಡಿಕೊಂಡಿದ್ದ ಕಥೆಗೆ ಅವರ ಸ್ನೇಹಿತರಾದ ಸೋಮಣ್ಣ ಅವರೇ ಬಂಡವಾಳ ಹೂಡಿ ಈ ಸಿನಿಮಾ ಮಾಡಿದ್ದಾರೆ. ‘ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಹಾಗಾಗಿ ನಾನು ಸಿನಿಮಾ ಮಾಡಲು ಒಪ್ಪಿಕೊಂಡೆ. 2019ರಲ್ಲಿ ಚಿತ್ರ ಆರಂಭವಾಯಿತು. ಪುನೀತ್ ರಾಜ್ಕುಮಾರ್ ಸರ್ ಬಂದು ಕ್ಲಾಪ್ ಮಾಡಿದ್ದರು. ಚಿತ್ರದ ಎಲ್ಲ ಇವೆಂಟ್ಗಳಿಗೂ ಬರುವ ಭರವಸೆ ನೀಡಿದ್ದರು. ಆದರೆ ವಿಧಿ ಲಿಖಿತವೇ ಬೇರೆಯಾಗಿತ್ತು. ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ’ ಎಂದಿದ್ದಾರೆ ನಿರ್ಮಾಪಕ ಸೋಮಣ್ಣ.
‘ಮಧ್ಯಮರ್ಗದ ಹುಡುಗನಾಗಿ ವಿಕ್ರಮ್ ನಟಿಸಿದ್ದಾರೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗ, ಹೈ ಕ್ಲಾಸ್ ಫ್ಯಾಮಿಲಿ ಹುಡುಗಿಯನ್ನು ಏಕೆ ಲವ್ ಮಾಡಬಾರದು ಎಂಬ ವಿಷಯವನ್ನು ಈ ಚಿತ್ರದಲ್ಲಿ ಹೇಳಹೊರಟಿದ್ದೇನೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಅಮ್ಮನ ಕುರಿತಾದ ಹಾಡು ಈಗಾಗಲೇ ಹಿಟ್ ಆಗಿದೆ’ ಎಂದಿದ್ದಾರೆ ನಿರ್ದೇಶಕ ಸಹನಾಮೂರ್ತಿ.
‘ನಾನು ರವಿಚಂದ್ರನ್ ಅವರ ಮಗ ಹೌದು. ಆದರೆ ಚಿತ್ರರಂಗಕ್ಕೆ ನಾಯಕನಾಗಿ ಹೊಸಬ. ಪ್ರೇಕ್ಷಕರ ಆಶೀರ್ವಾದ ಬೇಕು’ ಎನ್ನುತ್ತ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ ವಿಕ್ರಮ್ ರವಿಚಂದ್ರನ್. ‘ನಮ್ಮ ಚಿತ್ರದ ಕೆಲಸ ಪೂರ್ಣವಾಗಿ 3 ವರ್ಷವಾಯಿತು. ಕೊವಿಡ್ ಕಾರಣದಿಂದ ಬಿಡುಗಡೆ ತಡವಾಯಿತು. ಈ ಸಮಯದಲ್ಲಿ ನಾನು ಪುನೀತ್ ಸರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಈ ಚಿತ್ರದ ಕಥೆ ಅವರಿಗೆ ಹೇಳಿದಾಗ ಖುಷಿ ಪಟ್ಟಿದ್ದರು. ನಾನು ಒಂದು ಹಾಡು ಹಾಡುತ್ತೀನಿ ಅಂದಿದ್ದರು. ನೀನು ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ಇಲ್ಲದಿದ್ದರೆ ಹೊಡೀತಿನಿ ಅಂದಿದ್ದರು ಪ್ರೀತಿಯಿಂದ. ಅವರು ಈಗ ಇಲ್ಲ ಅಂತ ನಾನು ಹೇಳಲ್ಲ. ಇಲ್ಲೇ ನಮ್ಮ ಜೊತೆ ಇದ್ದಾರೆ. ಈ ಚಿತ್ರದ ಕಥೆಯನ್ನು ನಾನು ನಮ್ಮ ತಂದೆಯವರಿಗೂ ಪೂರ್ತಿ ಹೇಳಿಲ್ಲ. ಕಥೆ ಗೊತ್ತಿರುವುದು ನನಗೆ, ಅಪ್ಪು ಸರ್ಗೆ ಹಾಗೂ ಶಿವಣ್ಣ ಅವರಿಗೆ ಮಾತ್ರ’ ಎಂದಿದ್ದಾರೆ ವಿಕ್ರಮ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:46 pm, Wed, 11 May 22