Actor Suraj: ಪಾರ್ವತಮ್ಮ ರಾಜ್ಕುಮಾರ್ ತಮ್ಮನ ಮಗ ಸೂರಜ್ಗೆ ಗಂಭೀರ ಅಪಘಾತ; ಕಾಲು ಕಳೆದುಕೊಂಡ ನಟ
Kannada Actor Suraj: ಅಪಘಾತದಲ್ಲಿ ನಟ ಸೂರಜ್ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ. ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಾ. ರಾಜ್ಕುಮಾರ್ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ನಡೆದಿದೆ. ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಪುತ್ರನಾದ ಸೂರಜ್ (Kannada Actor Suraj) ಅವರು ಗಂಭೀರ ಅಪಘಾತಕ್ಕೆ ಒಳಗಾಗಿದ್ದಾರೆ. ಊಟಿಗೆ ತೆರಳುತ್ತಿದ್ದ ಅವರಿಗೆ ನಂಜನಗೂಡಿನ ಬಳಿ ಲಾರಿ ಡಿಕ್ಕಿ ಆಗಿದೆ. ಶನಿವಾರ (ಜೂನ್ 24) ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (Suraj Accident) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ. ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಂಧಿನಗರಕ್ಕೆ ಎಂಟ್ರಿ ನೀಡಬೇಕು ಎಂದು ಸೂರಜ್ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಸೇರಿದಂತೆ ಒಂದೆರಡು ಸಿನಿಮಾಗಳನ್ನು ಅವರು ಅನೌನ್ಸ್ ಮಾಡಿದ್ದರು. ಅಷ್ಟರಲ್ಲಾಗಲೇ ಅವರಿಗೆ ಈ ದುಸ್ಥಿತಿ ಎದುರಾಗಿದೆ.
ಸೂರಜ್ ಅವರು ಬೈಕ್ನಲ್ಲಿ ಊಟಿಗೆ ತೆರಳುತ್ತಿದ್ದರು. ಈ ವೇಳೆ ಅವರ ಕಾಲಿನ ಮೇಲೆ ಟಿಪ್ಪರ್ ಹರಿದಿದೆ. ಅವರ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ಕತ್ತರಿಸುವುದು ಅನಿವಾರ್ಯ ಆಯಿತು. ಕನ್ನಡ ಚಿತ್ರರಂಗದಲ್ಲಿ ನಟನಾಗಬೇಕು ಎಂದು ಸೂರಜ್ ಕನಸು ಕಂಡಿದ್ದರು. ಕೆಲವು ಚಿತ್ರಗಳ ಶೂಟಿಂಗ್ನಲ್ಲೂ ಪಾಲ್ಗೊಂಡಿದ್ದರು. ಆದರೆ ಈಗ ಅವರು ಕಾಲು ಕಳೆದುಕೊಂಡು ಸಂಕಟಪಡುವಂತಾಗಿರುವುದು ನೋವಿನ ಸಂಗತಿ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ದುರ್ಮರಣ
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಘವಿಸಿದೆ. ಸದ್ಯ ಸೂರಜ್ ಅವರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಚಿತ್ರರಂಗದ ಅನೇಕರು ಭೇಟಿ ನೀಡಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಸೂರಜ್ ಐಸಿಯುನಲ್ಲೇ ಇರಬೇಕಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್ ಸೇರಿದಂತೆ ಡಾ. ರಾಜ್ ಕುಟುಂಬದ ಹಲವರು ಆಸ್ಪತ್ರೆಗೆ ಬಂದು ಸಮಾಧಾನ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:50 am, Sun, 25 June 23