ಪಟ್ಟಣಗೆರೆ ಶೆಡ್ಗೆ 4.6 ಸ್ಟಾರ್ ರೇಟಿಂಗ್; ಸಿಗುವ ಸರ್ವಿಸ್ ಬಗ್ಗೆ ರಿವ್ಯೂ ನೀಡಿದ ನೆಟ್ಟಿಗರು
ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಸಹಚರರು ಭಾಗಿ ಆಗಿದ್ದಾರೆ ಎನ್ನಲಾದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಿಂದಾಗಿ ಬೆಂಗಳೂರಿನ ಪಟ್ಟಣಗೆರೆ ಶೆಡ್ ಕುಖ್ಯಾತಿ ಪಡೆದಿದೆ. ಈ ಜಾಗದ ಬಗ್ಗೆ ನೆಟ್ಟಿಗರು ನೂರಾರು ಬಗೆಯ ರಿವ್ಯೂ ಹಂಚಿಕೊಂಡಿದ್ದಾರೆ. ವಿಡಂಬನಾತ್ಮಕವಾಗಿ ಬರೆದಿರುವ ರಿವ್ಯೂಗಳು ವೈರಲ್ ಆಗುತ್ತಿವೆ. ಗೂಗಲ್ ಮ್ಯಾಪ್ನಲ್ಲಿ ಪಟ್ಟಣಗೆರೆ ಶೆಡ್ಗೆ ಜನರು ಭರ್ಜರಿ ರೇಟಿಂಗ್ ನೀಡಿದ್ದಾರೆ.
ಪಾಸಿಟಿವ್ ಅಥವಾ ನೆಗಟಿವ್ ಏನಿದ್ದರೂ ಸರಿ.. ನಟ ದರ್ಶನ್ ಏನೇ ಮಾಡಿದರೂ ಟ್ರೆಂಡ್ ಆಗುತ್ತದೆ. ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ಬೆಂಗಳೂರಿನ ಪಟ್ಟಣಗೆರೆ ಶೆಡ್ ಸಿಕ್ಕಾಪಟ್ಟೆ ಸುದ್ದಿ ಆಯಿತು. ಇದೇ ಶೆಡ್ನಲ್ಲಿ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ಈ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ ಮುಂತಾದವರು ಜೈಲು ಸೇರಿದ್ದಾರೆ. ಈ ಘಟನೆಯಿಂದಾಗಿ ಪಟ್ಟಣಗೆರೆ ಶೆಡ್ ಸಿಕ್ಕಾಪಟ್ಟೆ ಕುಖ್ಯಾತಿ ಪಡೆದಿದೆ. ಗೂಗಲ್ ಮ್ಯಾಪ್ನಲ್ಲಿ ಈ ಶೆಡ್ಗೆ ನೆಟ್ಟಿಗರು 4.6 ಸ್ಟಾರ್ ರೇಟಿಂಗ್ ನೀಡಿದ್ದಾರೆ! ನೂರಾರು ಜನರು ಇದರ ಬಗ್ಗೆ ರಿವ್ಯೂ ತಿಳಿಸಿದ್ದಾರೆ.
ವಾಹನಗಳ ಪಾರ್ಕಿಂಗ್ ಸೇರಿದಂತೆ ಬೇರೆ ಬೇರೆ ಕೆಲಸಗಳಿಗೆ ಪಟ್ಟಣಗೆರೆ ಶೆಡ್ ಬಳಕೆ ಆಗುತ್ತಿತ್ತು. ಆದರೆ ಈ ಜಾಗದಲ್ಲಿ ರೇಣುಕಾ ಸ್ವಾಮಿ ಕೊಲೆ ನಡೆದ ಬಳಿಕ ಇದರ ಬಗ್ಗೆ ಇರುವ ಇಮೇಜ್ ಬದಲಾಯಿತು. ಇದು ಕಿಡಿಗೇಡಿಗಳ ಅಡ್ಡ ಎಂಬಂತೆ ಬಿಂಬಿತವಾಗಿದೆ. ಇಲ್ಲಿ ಕೇವಲ ಅಕ್ರಮ ಚಟುವಟಿಕೆಗಳೇ ನಡೆಯುತ್ತವೆ ಎಂಬರ್ಥದಲ್ಲಿ ಮೀಮ್ಗಳನ್ನು ಹಿರಿಬಿಡಲಾಗಿದೆ. ಅಲ್ಲದೇ, ‘ಶೆಡ್ಡಿಗೆ ಬಾ..’ ಎಂಬ ರೀಲ್ಸ್ ಕೂಡ ವೈರಲ್ ಆಗಿವೆ. ಇಷ್ಟೆಲ್ಲ ಆದ ಬಳಿಕ ಗೂಗಲ್ನಲ್ಲಿ ಪಟ್ಟಣಗೆರೆ ಶೆಡ್ ಬಗ್ಗೆ ಹುಡುಕಾಟ ಮಾಡಿದವರ ಸಂಖ್ಯೆ ಹೆಚ್ಚಾಗಿದೆ.
ಪಟ್ಟಣಗೆರೆ ಶೆಡ್ನಲ್ಲಿ ಏನೆಲ್ಲ ಸರ್ವಿಸ್ ಸಿಗುತ್ತದೆ ಎಂಬ ಬಗ್ಗೆ ನೆಟ್ಟಿಗರು ಲೇವಡಿ ಮಾಡಿದ್ದಾರೆ. ದರ್ಶನ್ ಮತ್ತು ಗ್ಯಾಂಗ್ನವರು ರೇಣಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಈ ಶೆಡ್ನಲ್ಲಿ ಚಿತ್ರಹಿಂಸೆ ನೀಡಿದ್ದನ್ನೇ ಗಮನದಲ್ಲಿ ಇಟ್ಟುಕೊಂಡು ಜನರು ಈ ಶೆಡ್ ಬಗ್ಗೆ ರಿವ್ಯೂ ಬರೆದಿದ್ದಾರೆ. ನೂರಾರು ಮಂದಿ ರಿವ್ಯೂ ಪೋಸ್ಟ್ ಮಾಡಿದ್ದಾರೆ.
ಈ ಎಲ್ಲ ರಿವ್ಯೂಗಳು ವಿಡಂಬನಾತ್ಮಕಾಗಿವೆ. ‘ಒಂದು ಮೆಸೇಜ್ ಮಾಡಿದರೆ ಸಾಕು ಉಚಿತವಾಗಿ ಕರೆದುಕೊಂಡು ಹೋಗುತ್ತಾರೆ’, ‘ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳ. ಆದರೆ ಅದೇ ನಿಮ್ಮ ಕೊನೇ ದಿನ ಆಗುತ್ತದೆ’, ‘ದರ್ಶನ್ನ ಭೇಟಿ ಮಾಡಬೇಕು ಅಂದರೆ ಇಲ್ಲಿಗೆ ಬನ್ನಿ, ಆದರೆ ನೀವು ವಾಸಪ್ ಹೋಗಲ್ಲ’, ‘ತುಂಬ ಒಳ್ಳೆಯ ಜಾಗ.. ರಿಸ್ಕ್ ತೆಗೆದುಕೊಂಡು ಬರುವುದಾದರೆ ನಿಮಗೆ ಸುಸ್ವಾಗತ’, ‘ಇಲ್ಲಿನ ಸಿಬ್ಬಂದಿ ಫ್ರೆಂಡ್ನಿ ಆಗಿದ್ದಾರೆ.. ಒಳ್ಳೆಯ ಮಸಾಜ್ ಮತ್ತು ಕರೆಂಟ್ ಕೊಡುವ ಸರ್ವಿಸ್ ಸಿಗುತ್ತದೆ’ ಎಂಬಿತ್ಯಾದಿ ರಿವ್ಯೂಗಳನ್ನು ಬರೆಯಲಾಗಿದೆ.
ಇದನ್ನೂ ಓದಿ: ವಕೀಲರಿಗೆ ದರ್ಶನ್, ಪವಿತ್ರಾ ಗೌಡ ಕೋಟಿ ಕೋಟಿ ಕೊಡ್ತಾರಾ? ಲಾಯರ್ ಹೇಳೋದು ಕೇಳಿ..
‘ಇಲ್ಲಿ ನಾವು ಕುಂಟಾಬಿಲ್ಲೆ ಆಡಬಹುದಾ?’ ಎಂದು ಕೆಲವರು ಪ್ರಶ್ನೆ ಕೇಳಿದ್ದಾರೆ. ‘ಖಂಡಿತವಾಗಿಯೂ ಆಡಬಹುದು’ ಎಂದು ಉತ್ತರ ನೀಡಲಾಗಿದೆ. ‘ನಿಮಗೆ ಮಾಡಲು ಏನೂ ಕೆಲಸ ಇಲ್ಲ ಎಂದರೆ ಇಲ್ಲಿ ಬಂದು ನ್ಯೂಸ್ ಆ್ಯಂಕರ್ಗಳ ಜೊತೆ ಕುಂಟಾಬಿಲ್ಲೆ ಆಡಬಹುದು’ ಎಂದು ಕೂಡ ಉತ್ತರ ಬರೆಯಲಾಗಿದೆ. ಇದರ ಸ್ಕ್ರೀನ್ ಶಾಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.