ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; ಇನ್ನೂ ಹಲವು ದಿನ ಜೈಲೇ ಗತಿ

| Updated By: ಮದನ್​ ಕುಮಾರ್​

Updated on: Aug 22, 2024 | 3:42 PM

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆಗಿರುವ ಪವಿತ್ರಾ ಗೌಡ ಇನ್ನೂ ಒಂದಷ್ಟು ದಿನಗಳ ಕಾಲ ಜೈಲುವಾಸ ಅನುಭವಿಸಲೇಬೇಕಿದೆ. ಜಾಮೀನು ಕೋರಿ ನಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಆ.27ಕ್ಕೆ ಅವರ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ. ಹಲವು ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿದ್ದು, ಚಾರ್ಜ್​ಶೀಟ್​ ಸಲ್ಲಿಕೆಗೆ ಸಮಯ ಬಂದಿದೆ.

ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; ಇನ್ನೂ ಹಲವು ದಿನ ಜೈಲೇ ಗತಿ
ಪವಿತ್ರಾ ಗೌಡ
Follow us on

ನಟಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ. ಬೇಲ್​ ಪಡೆಯಲು ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎರಡನೇ ಬಾರಿಗೆ ಅವರ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ. ಆಗಸ್ಟ್​ 27ಕ್ಕೆ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಪವಿತ್ರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿ ನ್ಯಾಯಾಧೀಶ ಜೈಶಂಕರ್ ಅವರು ಆದೇಶ ನೀಡಿದ್ದಾರೆ. ಹಾಗಾಗಿ ಇನ್ನಷ್ಟು ದಿನಗಳ ಕಾಲ ಪವಿತ್ರಾ ಗೌಡ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯ ಆಗಿದೆ.

ಪವಿತ್ರಾ ಗೌಡಗೆ ಜಾಮೀನು ನೀಡದಂತೆ ಎಸ್​ಪಿಪಿ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿಸಿದ ಆರೋಪ ಪವಿತ್ರಾ ಗೌಡ ಅವರ ಮೇಲಿದೆ. ಈ ಕೇಸ್​ನಲ್ಲಿ ನಟ ದರ್ಶನ್​ ಕೂಡ ಪ್ರಮುಖ ಆರೋಪಿ. ಇವರೆಲ್ಲರೂ ಪ್ರಭಾವಿ ವ್ಯಕ್ತಿಗಳಾದ ಕಾರಣ ಒಂದು ವೇಳೆ ಜಾಮೀನು ಸಿಕ್ಕರೆ ಸಾಕ್ಷಿ ನಾಶಕ್ಕೆ ಪ್ರಯತ್ನಿಸುವ ಸಾಧ್ಯತೆ ಇದೆ. ಹಾಗಾಗಿ ಜಾಮೀನು ನೀಡದಂತೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಈಗ ಕೊನೆಯ ಹಂತವನ್ನು ತಲುಪಿದೆ. ಚಾರ್ಜ್​ಶೀಟ್​ ಸಲ್ಲಿಸಲು ಬೆಂಗಳೂರು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ಈ ಕೇಸ್​ನಲ್ಲಿ ಪವಿತ್ರಾ ಗೌಡ ಅವರನ್ನು ಎ1 ಎಂದು ಪರಿಗಣಿಸಲಾಗಿತ್ತು. ಆದರೆ ಚಾರ್ಜ್​ಶೀಟ್​ನಲ್ಲಿ ದರ್ಶನ್​ ಅವರನ್ನು ಎ1 ಎಂದು ಉಲ್ಲೇಖಿಸುವ ಸಾಧ್ಯತೆ ಇದೆ. ಅವರೇ ಈ ಕೊಲೆಯ ಸೂತ್ರಧಾರ ಎಂಬುದಕ್ಕೆ ಪೊಲೀಸರಿಗೆ ಹಲವು ಸಾಕ್ಷಿಗಳು ಸಿಕ್ಕಿವೆ.

ಇದನ್ನೂ ಓದಿ: ಜೈಲಿನೊಳಗೆ ವಿಜಯಲಕ್ಷ್ಮಿ, ಪವಿತ್ರಾ ಗೌಡ ನಡುವಿನ ವರ್ತನೆಯಲ್ಲಿ ಎಷ್ಟೊಂದು ವ್ಯತ್ಯಾಸ

ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುವ ರೇಣುಕಾಸ್ವಾಮಿಯ ಮರ್ಡರ್​ ಕೇಸ್​ನಲ್ಲಿ ಆರಂಭದಿಂದ ಇಲ್ಲಿಯತನಕ ವಿವಿಧ ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಎಫ್​ಎಸ್​ಎಲ್​ ವರದಿಯಲ್ಲಿ ನಟನ ವಿರುದ್ಧ ಪ್ರಮುಖ ಸಾಕ್ಷಿಗಳು ದೊರೆತಿವೆ. ದರ್ಶನ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಮಾಡಲು ಪೊಲೀಸರು ತಯಾರಾಗಿದ್ದಾರೆ. ದರ್ಶನ್ ಮತ್ತು ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ಎಲ್ಲ ಆರೋಪಿಗಳ ವಿರುದ್ಧ ಅಂದಾಜು 4 ಸಾವಿರ ಪುಟಗಳ ಚಾರ್ಜ್​ಶೀಟ್ ಸಿದ್ಧವಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್​ನಿಂದ ಶಾಕಿಂಗ್​ ಫೋಟೋಗಳು ಕೂಡ ಪೊಲೀಸರಿಗೆ ಸಿಕ್ಕಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.