ಪವಿತ್ರಾ ಗೌಡ ವ್ಯಕ್ತಿತ್ವ ವಿವರಿಸಿದ ಮಾಜಿ ಪತಿ ಸಂಜಯ್ ಸಿಂಗ್
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್, ಪವಿತ್ರಾ ಗೌಡ ಅವರ ವ್ಯಕ್ತಿತ್ವವನ್ನು ವಿವರಿಸಿದ್ದಾರೆ. ತಮ್ಮೊಂದಿಗೆ ದಾಂಪತ್ಯದಲ್ಲಿದ್ದಾಗ ಪವಿತ್ರಾ ಹೇಗಿದ್ದರು, ಹೇಗೆ ದೂರಾದರು ಎಂಬುದನ್ನು ಸಂಜಯ್ ಸಿಂಗ್ ವಿವರಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆಯೂ ಮಾತನಾಡಿದ್ದಾರೆ.
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟಿ, ದರ್ಶನ್ (Darshan) ಆಪ್ತೆ ಪವಿತ್ರಾ ಗೌಡ (Pavithra Gowda) ಪ್ರಮುಖ ಆರೋಪಿ ಆಗಿದ್ದಾರೆ. ದರ್ಶನ್ ಆಪ್ತವಲಯದವರು, ದರ್ಶನ್ ಅಭಿಮಾನಿಗಳು ಈ ಪ್ರಕರಣ ನಡೆಯಲು ಪವಿತ್ರಾ ಗೌಡ ಅವರೇ ಕಾರಣ ಎಂದು ನಿಂದಿಸುತ್ತಿದ್ದಾರೆ. ಪವಿತ್ರಾ ಗೌಡ ಅವರ ಅತಿಯಾದ ಮಹಾತ್ವಾಕಾಂಕ್ಷೆ, ಅಹಂ, ದ್ವೇಷ ತೀರಿಸಿಕೊಳ್ಳುವ ಗುಣಗಳಿಂದಲೇ ದರ್ಶನ್ಗೆ ಇಂದು ಈ ಸ್ಥಿತಿ ಬಂದೊದಗಿದೆ ಎನ್ನುತ್ತಿದ್ದಾರೆ. ಈ ಸಮಯದಲ್ಲಿ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್, ಪವಿತ್ರಾ ಗೌಡ ಅವರ ವ್ಯಕ್ತಿತ್ವವನ್ನು ವಿವರಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಸಾಫ್ಟ್ವೇರ್ ಎಂಜಿನಿಯರ್ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಪವಿತ್ರಾ ಗೌಡ ಅವರು ವಾಸವಿದ್ದ ಏರಿಯಾದಲ್ಲಿಯೇ ಗೆಳೆಯರೊಟ್ಟಿಗೆ ರೂಂನಲ್ಲಿ ವಾಸವಿದ್ದರು. ಆಗ ಪವಿತ್ರಾ ಇನ್ನೂ ವಿದ್ಯಾರ್ಥಿನಿ, ಪವಿತ್ರಾರ ತಾಯಿ ಅಂಗಡಿಯೊಂದನ್ನು ನಡೆಸುತ್ತಿದ್ದರಂತೆ. ಆಗ ಪವಿತ್ರಾರ ಪರಿಚಯವಾಗಿ ಆ ಪರಿಚಯ ಪ್ರೀತಿಗೆ ತಿರುಗಿ ಕೆಲವೇ ತಿಂಗಳುಗಳಲ್ಲಿ ಈ ಇಬ್ಬರ ಮದುವೆ ಸಹ ಆಯ್ತು. 2009 ರಲ್ಲಿ ಮಗಳು ಖುಷಿ ಜನಿಸಿದಳು. 2013 ರಲ್ಲಿ ಪವಿತ್ರಾ ಹಾಗೂ ಸಂಜಯ್ ಪರಸ್ಪರ ವಿಚ್ಛೇದನ ಪಡೆದು ದೂರಾದರು.
ಪವಿತ್ರಾ ಗೌಡ ಈಗ ಸಿಲುಕಿರುವ ಪ್ರಕರಣದ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಸಂಜಯ್ ಸಿಂಗ್, ‘ಪ್ರಕರಣದ ಬಗ್ಗೆ ನಾನು ತಿಳಿದುಕೊಂಡೆ, ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಪವಿತ್ರಾ ಖಂಡಿತ ಯಾರನ್ನೂ ಕೊಲ್ಲುವ ಹುಡುಗಿಯಲ್ಲ, ಆಕೆಯದ್ದು ದ್ವೇಷ ತೀರಿಸಿಕೊಳ್ಳುವ ವ್ಯಕ್ತಿತ್ವ ಅಲ್ಲ. ಹೌದು, ಒಂದೆರಡು ಏಟು ಆತನಿಗೆ (ರೇಣುಕಾ ಸ್ವಾಮಿ)ಗೆ ಹೊಡೆದಿರಬಹುದು, ಅದು ಅವಶ್ಯಕವೂ ಸಹ. ಆದರೆ ಕೊಲ್ಲುವ ಮನಸ್ಸು ಆಕೆಯದ್ದಲ್ಲ. ದರ್ಶನ್ಗೂ ಸಹ ಆ ಯೋಚನೆ ಇರಲಿಲ್ಲ ಎಂಬುದೇ ನನ್ನ ಭಾವನೆ’ ಎಂದಿದ್ದಾರೆ ಸಂಜಯ್ ಸಿಂಗ್.
ಇದನ್ನೂ ಓದಿ:ಕೊಲೆಗೂ ಮುನ್ನ ದರ್ಶನ್ ಗ್ಯಾಂಗ್ ಜೊತೆ ರೇಣುಕಾ ಸ್ವಾಮಿ ಮಾತು; ವಿಡಿಯೋ ವೈರಲ್
‘ಆಕೆ ನಾನು ಜೊತೆಯಾಗಿದ್ದಾಗಲೂ ಸಹ ಆಕೆಗೆ ಬಹಳ ಮಹಾತ್ವಾಕಾಂಕ್ಷೆಗಳು ಇದ್ದವು. ಸಿನಿಮಾ ರಂಗಕ್ಕೆ ಹೋಗಬೇಕು, ಒಳ್ಳೆಯ ಬ್ಯುಸಿನೆಸ್ ವುಮೆನ್ ಆಗಬೇಕು, ಫ್ಯಾಷನ್ ಕ್ಷೇತ್ರದಲ್ಲಿ ಹೆಸರು ಮಾಡಬೇಕು ಎಂಬುದು ಆಕೆಯ ಆಸೆಗಳಾಗಿದ್ದವು. ಅದನ್ನು ಇಂದು ಆಕೆ ತೀರಿಸಿಕೊಂಡಿದ್ದಾರೆ. ಆ ಬಗ್ಗೆ ನನಗೆ ಖುಷಿ ಇದೆ. ಪವಿತ್ರಾ ತಾವು ಕಂಡ ಕನಸನ್ನು ಸಾರ್ಥಪಡಿಸಿಕೊಂಡಿದ್ದಾರೆ. ಆಕೆ ಗುರಿಯನ್ನು ನೋಡುವ ಮಹಿಳೆ, ಹಿಂದೆ ತಿರುಗಿ ನೋಡುವ ಮನಸ್ಥಿತಿ ಅವರದ್ದಲ್ಲ’ ಎಂದಿದ್ದಾರೆ ಸಂಜಯ್ ಸಿಂಗ್.
‘ಮಗಳು ಖುಷಿ ಹುಟ್ಟಿದ ಬಳಿಕ ಆಕೆಗೆ ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷಿಸುವ ಮನಸ್ಸಾಗಿ ಆಡಿಷನ್ಗೆ ಹೋಗುತ್ತಿದ್ದರು. ಅಲ್ಲಿ ಸೆಲೆಕ್ಟ್ ಸಹ ಆಗುತ್ತಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸಿದರು. ನಾನು ಒಂದೆರಡು ಸಿನಿಮಾಗಳ ಮುಹೂರ್ತಕ್ಕೆ ಸಹ ಹೋಗಿದ್ದೆ. ಆದರೆ ಕೆಲವು ಸಿನಿಮಾಗಳು ಕೈ ಹಿಡಿಯಲಿಲ್ಲ. ಅಲ್ಲದೆ ನನ್ನದು ಐಟಿ ಕ್ಷೇತ್ರ, ಆಕೆಯದ್ದು ಸಿನಿಮಾ ಕ್ಷೇತ್ರ ನಮ್ಮಿಬ್ಬರ ಸಮಯ ಮ್ಯಾಚ್ ಆಗುತ್ತಿರಲಿಲ್ಲ. ಇದರಿಂದಾಗಿ ಆಗಾಗ್ಗೆ ಸಣ್ಣ-ಪುಟ್ಟ ಜಗಳಗಳು ನಮ್ಮ ನಡುವೆ ಪ್ರಾರಂಭವಾದವು. ಅವೇ ಮುಂದುವರೆದು 2013 ರಲ್ಲಿ ನಮ್ಮ ವಿಚ್ಛೇದನವಾಯ್ತು’ ಎಂದಿದ್ದಾರೆ ಸಂಜಯ್.
ದರ್ಶನ್ ಜೊತೆಗಿನ ಗೆಳೆತನ ಬಗ್ಗೆ ಕೇಳಿದ್ದಕ್ಕೆ, ‘ನನಗೆ ಆ ಬಗ್ಗೆ ಆಗ ಅರಿವಿರಲಿಲ್ಲ. ಈಗಲೂ ಅದರ ಬಗ್ಗೆ ನಾನು ಚಿಂತಿಸುವುದಿಲ್ಲ. ಅದು ಪವಿತ್ರಾರ ಆಯ್ಕೆ. ಈ ವಿಷಯ (ಕೊಲೆ ಪ್ರಕರಣ)ದಲ್ಲೂ ಸಹ, ಯಾವುದೇ ಹೆಣ್ಣಿಗೆ ಹೀಗೊಂದು ಚಿತ್ರ ಬಂದರೆ ಆಕೆ ತನ್ನ ಗಂಡನ ಬಳಿ ಹೇಳಿಯೇ ಹೇಳುತ್ತಾಳೆ. ಹಾಗೆಯೇ ಪವಿತ್ರಾ ಸಹ ಹೇಳಿದ್ದಾರೆ. ಆದರೆ ಇಬ್ಬರಿಂದಲೂ ಇಲ್ಲಿ ಆಗಿರುವ ತಪ್ಪೆಂದರೆ ಅವರು ಪೊಲೀಸರ ನೆರವು ಪಡೆಯಬೇಕಿತ್ತು. ಆದರೆ ಕಾನೂನು ಕೈಗೆ ತೆಗೆದುಕೊಳ್ಳಲು ಹೋಗಿದ್ದರಿಂದ ಈ ಅನಾಹುತವಾಗಿದೆ. ಈಗಲೂ ಸಹ ನನಗೆ ಅನ್ನಿಸುವುದು ದರ್ಶನ್, ಪವಿತ್ರಾ ಇಬ್ಬರೂ ಸಹ ಕೊಲ್ಲುವ ಮನಸ್ಥಿತಿಯವರಲ್ಲ. ಏನೋ ಅಚಾತುರ್ಯವಾಗಿದೆ’ ಎಂದಿದ್ದಾರೆ ಸಂಜಯ್ ಸಿಂಗ್.
‘ದರ್ಶನ್ ಕಿವಿಗೆ ಅಶ್ಲೀಲ ಮೆಸೇಜ್ ವಿಚಾರ ಬೀಳಬಾರದಿತ್ತು’; ಜೈಲಿನಲ್ಲಿ ಮರುಗಿದ ಪವಿತ್ರಾ ಗೌಡ
ಮಗಳು ಖುಷಿಯ ಬಗ್ಗೆ ಕೇಳಿದ್ದಕ್ಕೆ, ‘ನಾನು ಈ 12-13 ವರ್ಷಗಳಲ್ಲಿ ಕೇವಲ ಎರಡು ಅಥವಾ ಮೂರು ಬಾರಿ ಮಾತ್ರವೇ ಮಗಳೊಟ್ಟಿಗೆ ಮಾತನಾಡಿದ್ದೇನೆ. ನಾನು ಇಲ್ಲಿ (ಉತ್ತರ ಪ್ರದೇಶ) ಶಿಕ್ಷಕನಾಗಿದ್ದೇನೆ. ನನ್ನ ಮಗಳಿಗೆ ಪಾಠ ಮಾಡಲು ಆಗಲಿಲ್ಲ. ಇಲ್ಲಿ ಸಾವಿರಾರು ಮಕ್ಕಳಿಗೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಗ್ಲೀಷ್ ಕಲಿಸಿಕೊಡುತ್ತಿದ್ದೇನೆ. ನನ್ನ ಮಗಳು ಚೆನ್ನಾಗಿದ್ದಾಳೆ, ಚೆನ್ನಾಗಿ ಬದುಕುತ್ತಿದ್ದಾಳೆಂದು ಕೇಳಿ ತಿಳಿದಿದ್ದೀನಿ’ ಎಂದಿದ್ದಾರೆ ಸಂಜಯ್ ಸಿಂಗ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Thu, 13 June 24