ಧ್ರುವ ಹಿಂದೆ ಬಿದ್ದ ತೆಲುಗು ಸ್ಟಾರ್ ನಿರ್ದೇಶಕ? ಇದು ಧೂಳ್ ಧಮಾಕಾ ಕಾಂಬಿನೇಷನ್!
ಧ್ರುವ ಸರ್ಜಾ ಅಭಿಮಾನಿಗಳು ಫುಲ್ ಖುಷ್ ಆಗುವಂತಹ ಸುದ್ದಿ ಕೇಳಿಬರುತ್ತಿದೆ. ಟಾಲಿವುಡ್ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಅವರು ಕೈ ಜೋಡಿಸಲಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ಚಿತ್ರರಂಗದ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ಸದ್ಯ ‘ಪೊಗರು’ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಆ ಚಿತ್ರದ ಗೆಲುವಿನಿಂದಾಗಿ ಅವರ ಖ್ಯಾತಿ ಅಕ್ಕಪಕ್ಕದ ರಾಜ್ಯಗಳಿಗೂ ಹಬ್ಬಿದೆ. ಪರಭಾಷೆಯಲ್ಲೂ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲಿನ ಸ್ಟಾರ್ ನಿರ್ದೇಶಕರು ಕೂಡ ಧ್ರುವ ಜೊತೆ ಸಿನಿಮಾ ಮಾಡಲು ಇಂಟರೆಸ್ಟ್ ತೋರಿಸುತ್ತಿದ್ದಾರೆ.
ಹೌದು, ಇಂಥದ್ದೊಂದು ಸುದ್ದಿ ಬಲವಾಗಿ ಕೇಳಿಬರುತ್ತಿದೆ. ಟಾಲಿವುಡ್ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಧ್ರುವ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಟಾಲಿವುಡ್ನಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಪುರಿ ಜಗನ್ನಾಥ್ ಅವರಿಗೆ 2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಮೂಲಕ ಭರ್ಜರಿ ಗೆಲುವು ಸಿಕ್ಕಿತ್ತು. ಅದರ ನಂತರ ಅವರು ವಿಜಯ್ ದೇವರಕೊಂಡ ಜೊತೆ ‘ಲೈಗರ್’ ಸಿನಿಮಾ ಅನೌನ್ಸ್ ಮಾಡಿದರು. ಈಗ ಅವರು ಧ್ರುವ ಜೊತೆ ಕೈ ಜೋಡಿಸಲಿರುವುದು ವಿಶೇಷ.
ತಮ್ಮ ಸಿನಿಮಾದ ಹೀರೋಗಳನ್ನು ಸಿಕ್ಕಾಪಟ್ಟೆ ರಗಡ್ ಆಗಿ ತೋರಿಸುವಲ್ಲಿ ಪುರಿ ಜಗನ್ನಾಥ್ ಫೇಮಸ್. ಅದಕ್ಕೆ ‘ಇಸ್ಮಾರ್ಟ್ ಶಂಕರ್’ ಚಿತ್ರವೇ ಲೇಟೆಸ್ಟ್ ಉದಾಹರಣೆ. ಇನ್ನು, ಧ್ರುವ ಕೂಡ ಪೊಗರು ಸಿನಿಮಾದಲ್ಲಿ ಹಿಂದೆಂದಿಗಿಂತಲೂ ರಗಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಇವರಿಬ್ಬರ ಕಾಂಬಿನೇಷನ್ನ ಸಿನಿಮಾ ಸೆಟ್ಟೇರಿದ್ದೇ ಹೌದಾದರೆ ಧೂಳ್ ಧಮಾಕಾ ಆಗುವುದರಲ್ಲಿ ಅನುಮಾನವೇ ಇಲ್ಲ. ಈ ಕುರಿತಂತೆ ಧ್ರುವ ಮತ್ತು ಪುರಿ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಧಿಕೃತವಾಗಿ ಸುದ್ದಿ ನೀಡುವುದೊಂದೇ ಬಾಕಿ ಇದೆ ಎಂಬುದು ಮೂಲಗಳ ಮಾಹಿತಿ.
ಧ್ರುವ ಸರ್ಜಾಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಪೊಗರು ಬಳಿಕ ಮತ್ತೆ ಅವರು ನಿರ್ದೇಶಕ ನಂದಕಿಶೋರ್ ಜೊತೆ ಸಿನಿಮಾ ಮಾಡುತ್ತಿದ್ದು, ಆ ಚಿತ್ರಕ್ಕೆ ದುಬಾರಿ ಎಂದು ಶೀರ್ಷಿಕೆ ಇಡಲಾಗಿದೆ. ಅತ್ತ, ಪುರಿ ಕೂಡ ‘ಲೈಗರ್’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದು ಮುಗಿದ ಬಳಿಕವೇ ಧ್ರುವ-ಪುರಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.
ಇನ್ನು, ಕನ್ನಡ ಚಿತ್ರರಂಗದ ಜೊತೆ ಪುರಿ ಜಗನ್ನಾಥ್ ಅವರಿಗೆ ಮೊದಲಿನಿಂದಲೂ ನಂಟು ಇದೆ. ಪುನೀತ್ ರಾಜ್ಕುಮಾರ್ ಮೊದಲ ಬಾರಿಗೆ ಹೀರೋ ಆದ ‘ಅಪ್ಪು’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು ಇದೇ ಪುರಿ ಜಗನ್ನಾಥ್. ಶಿವರಾಜ್ಕುಮಾರ್ ನಟನೆಯ ‘ಯುವರಾಜ’ ಮತ್ತು ಇಶಾನ್ ಅಭಿನಯದ ‘ರೋಗ್’ ಚಿತ್ರಗಳು ಮೂಡಿಬಂದಿದ್ದು ಕೂಡ ಪುರಿ ನಿರ್ದೇಶನದಲ್ಲೇ.
ಇದನ್ನೂ ಓದಿ: ಧ್ರುವ ಸರ್ಜಾರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳಿಗೆ ಬಿತ್ತು ಪೊಲೀಸ್ ಲಾಠಿ ಏಟು
Pogaru First Day Collection: ಧ್ರುವ ಸರ್ಜಾ ನಟನೆಯ ಪೊಗರು ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
Published On - 7:55 am, Fri, 19 March 21